ಟೀಂ ಇಂಡಿಯಾ ಬಿಗಿ ದಾಳಿಗೆ ಅಲ್ಪ ಮೊತ್ತಕ್ಕೆ ಕಿವೀಸ್ ಆಲೌಟ್; ಕಮ್‌ಬ್ಯಾಕ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗಳಿಸಿದ ರನ್ ಎಷ್ಟು?

Published : Nov 04, 2026, 12:06 PM IST
Ind vs NZ

ಸಾರಾಂಶ

ಆಕ್ಲೆಂಡ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಮಾರಕ ದಾಳಿಗೆ ಕಿವೀಸ್ ಪಡೆ ಕೇವಲ 185 ರನ್‌ಗಳಿಗೆ ಆಲೌಟ್ ಆಗಿದೆ. ಅರ್ಶದೀಪ್ ಸಿಂಗ್, ಗುರ್‌ನೂರ್ ಬ್ರಾರ್ ಮತ್ತು ಅನ್ಶುಲ್ ಕಾಂಬೋಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಆದರೆ, ಕಮ್‌ಬ್ಯಾಕ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.

ಆಕ್ಲೆಂಡ್‌(ನ.04): ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಆಕ್ಲೆಂಡ್‌ನ ಈಡನ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ಕೇವಲ 185 ರನ್‌ಗಳಿಗೆ ಆಲೌಟ್‌ ಮಾಡುವಲ್ಲಿ ಭಾರತದ ವೇಗಿಗಳು ಯಶಸ್ವಿಯಾಗಿದ್ದಾರೆ. ಆರಂಭದಿಂದಲೇ ವಿಕೆಟ್‌ ಕಬಳಿಸಿದ ಭಾರತದ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳಿಗೆ ದೊಡ್ಡ ಜೊತೆಯಾಟ ನಿರ್ಮಿಸಲು ಅವಕಾಶ ನೀಡಲಿಲ್ಲ.

ಆದರೆ, ಕೊನೆಯ ಹಂತದಲ್ಲಿ ಬ್ಲೇರ್ ಟಿಕ್ನರ್ ಮತ್ತು ಜೇಕಬ್ ಡಫಿ ನಡೆಸಿದ ಹೋರಾಟದಿಂದ ನ್ಯೂಜಿಲೆಂಡ್‌ ತಂಡದ ಮೊತ್ತ 185ಕ್ಕೆ ತಲುಪಿತು. ಒಂದು ಹಂತದಲ್ಲಿ ಇನ್ನೂ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಕಿವೀಸ್‌ ಪಡೆಗೆ ಈ ಜೊತೆಯಾಟ ಕೊಂಚ ಸಮಾಧಾನ ನೀಡಿತು.

ಅರ್ಶದೀಪ್‌ ಸಿಂಗ್‌ ಮಾರಕ ದಾಳಿ; ಬ್ರಾರ್‌, ಕಾಂಬೋಜ್‌ ಸಾಥ್‌

ಭಾರತದ ವೇಗದ ಬೌಲರ್‌ ಅರ್ಶದೀಪ್‌ ಸಿಂಗ್‌ ನ್ಯೂಜಿಲೆಂಡ್‌ ಬ್ಯಾಟಿಂಗ್‌ ವಿಭಾಗಕ್ಕೆ ಆರಂಭದಲ್ಲೇ ಹೊಡೆತ ನೀಡಿದರು. ವಿಲ್‌ ಯಂಗ್‌ ಮತ್ತು ಹೆನ್ರಿ ನಿಕೋಲ್ಸ್‌ ಅವರನ್ನು ಔಟ್‌ ಮಾಡುವ ಮೂಲಕ ಕಿವೀಸ್‌ ತಂಡದ ಮೇಲೆ ಒತ್ತಡ ಹೇರಿದರು. ನಂತರ ಗುರ್‌ನೂರ್‌ ಬ್ರಾರ್‌ ಕೂಡ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಟಿಮ್‌ ಸೀಫರ್ಟ್‌ 38 ರನ್‌ ಗಳಿಸಿ ಹೋರಾಟ ನೀಡಿದರೂ, ಬ್ರಾರ್‌ ಅವರ ದಾಳಿಗೆ ಬಲಿಯಾದರು. ನಾಯಕ ಟಾಮ್‌ ಲಾಥಮ್‌ ಅವರನ್ನು ಬ್ರಾರ್‌ ತಮ್ಮದೇ ಬೌಲಿಂಗ್‌ನಲ್ಲಿ ಅದ್ಭುತವಾಗಿ ಕ್ಯಾಚ್‌ ಹಿಡಿದು ಔಟ್‌ ಮಾಡಿದ್ದು ಗಮನ ಸೆಳೆಯಿತು.

ಅನ್ಶುಲ್‌ ಕಾಂಬೋಜ್‌ ಕೂಡ ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶಿಸಿ ಎರಡು ವಿಕೆಟ್‌ ಪಡೆದರು. ಮಿಚೆಲ್‌ ಸ್ಯಾಂಟ್ನರ್‌ ಮತ್ತು ನಾಥನ್‌ ಸ್ಮಿತ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ನ್ಯೂಜಿಲೆಂಡ್‌ ಕುಸಿತಕ್ಕೆ ಮತ್ತಷ್ಟು ವೇಗ ನೀಡಿದರು. ಭಾರತದ ಪರ ಅರ್ಶದೀಪ್‌ ಸಿಂಗ್‌ ನಾಲ್ಕು ವಿಕೆಟ್‌ ಪಡೆದರೆ, ಗುರ್‌ನೂರ್‌ ಬ್ರಾರ್‌ ಮೂರು ಹಾಗೂ ಅನ್ಶುಲ್‌ ಕಾಂಬೋಜ್‌ ಎರಡು ವಿಕೆಟ್‌ ಕಬಳಿಸಿದರು.

ಕೊನೆಯ ವಿಕೆಟ್‌ಗಳ ಜೊತೆಯಾಟದಿಂದ 185 ರನ್‌

ನ್ಯೂಜಿಲೆಂಡ್‌ ತಂಡದ ಮಧ್ಯಮ ಕ್ರಮಾಂಕ ಕುಸಿದ ಬಳಿಕ ಗ್ಲೆನ್‌ ಫಿಲಿಪ್ಸ್‌ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರು. ಆದರೆ ಭಾರತದ ಬೌಲರ್‌ಗಳು ನಿರಂತರವಾಗಿ ಒತ್ತಡ ಹೇರಿದ್ದರಿಂದ ಅವರಿಗೆ ದೊಡ್ಡ ಜೊತೆಯಾಟ ನಿರ್ಮಿಸಲು ಸಾಧ್ಯವಾಗಲಿಲ್ಲ. ಕೊನೆಯ ಹಂತದಲ್ಲಿ ಬ್ಲೇರ್‌ ಟಿಕ್ನರ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಕೇವಲ 23 ಎಸೆತಗಳಲ್ಲಿ 34 ರನ್‌ ಗಳಿಸಿದ ಅವರು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಜೇಕಬ್‌ ಡಫಿ 15 ರನ್‌ ಗಳಿಸಿ ಸಾಥ್‌ ನೀಡಿದರು. ಈ ಜೋಡಿ ಕೊನೆಯ ವಿಕೆಟ್‌ಗಳ ಹಂತದಲ್ಲಿ ರನ್‌ ಗಳಿಸುವ ಮೂಲಕ ತಂಡದ ಮೊತ್ತವನ್ನು 185ಕ್ಕೆ ಕೊಂಡೊಯ್ದಿತು. ಅಂತಿಮವಾಗಿ ನ್ಯೂಜಿಲೆಂಡ್‌ ತಂಡ 40.2 ಓವರ್‌ಗಳಲ್ಲಿ 185 ರನ್‌ ಗಳಿಸಿ ಆಲೌಟ್‌ ಆಯಿತು.

ತವರಿನಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್‌ನ ಕಡಿಮೆ ಮೊತ್ತಗಳು

142 ರನ್‌: ಆಕ್ಲೆಂಡ್‌, 1994 — ಭಾರತ 7 ವಿಕೆಟ್‌ಗಳಿಂದ ಗೆಲುವು

157 ರನ್‌: ನೇಪಿಯರ್‌, 2019 — ಭಾರತ 8 ವಿಕೆಟ್‌ಗಳಿಂದ ಗೆಲುವು

168 ರನ್‌: ವೆಲ್ಲಿಂಗ್ಟನ್‌, 2003 — ಭಾರತ 2 ವಿಕೆಟ್‌ಗಳಿಂದ ಗೆಲುವು

185 ರನ್‌: ಆಕ್ಲೆಂಡ್‌, 2026

ಈ ಅಂಕಿ-ಅಂಶಗಳು ನ್ಯೂಜಿಲೆಂಡ್‌ ತಂಡಕ್ಕೆ ತವರಿನಲ್ಲೇ ಭಾರತದ ಬೌಲಿಂಗ್‌ ಎದುರಿಸುವುದು ಎಷ್ಟು ಸವಾಲಿನದ್ದಾಗಿತ್ತು ಎಂಬುದನ್ನು ತೋರಿಸುತ್ತವೆ.

ಕಮ್‌ಬ್ಯಾಕ್‌ ಪಂದ್ಯದಲ್ಲಿ ಶೂನ್ಯ ಸುತ್ತಿದ ರೋಹಿತ್‌ ಶರ್ಮಾ

ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪ್ರತಿನಿಧಿಸಿದ್ದ ರೋಹಿತ್ ಶರ್ಮಾ, ಕಿವೀಸ್ ಎದುರಿನ ಏಕದಿನ ಸರಣಿಗೆ ಮತ್ತೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಆದರೆ ರೋಹಿತ್ ಶರ್ಮಾ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಕಿವೀಸ್ ನೀಳಕಾಯದ ವೇಗಿ ಕೈಲ್ ಜೇಮಿಸನ್ ಎಸೆದ ಇನ್ನಿಂಗ್ಸ್‌ನ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ, ಮಿಚೆಲ್ ಸ್ಯಾಂಟ್ನರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಏಕದಿನ ಕ್ರಿಕೆಟ್‌ನಲ್ಲಿ ಜೇಮಿಸನ್ ಹಾಗೂ ರೋಹಿತ್ ಶರ್ಮಾ ಆರು ಬಾರಿ ಮುಖಾಮುಖಿಯಾಗಿದ್ದು, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಜೇಮಿಸನ್‌ಗೆ ಮೂರನೇ ಬಾರಿಗೆ ವಿಕೆಟ್ ಒಪ್ಪಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs NZ: ಏಕದಿನ ಕ್ರಿಕೆಟ್‌ನಲ್ಲಿ ಯಾವ ದಿಗ್ಗಜನೂ ಮಾಡಿರದ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ..! ಈ ರೆಕಾರ್ಡ್ ಬ್ರೇಕ್ ಆಗೋದು ಡೌಟ್
ಬರ್ತ್ ಡೇ ಮೊದಲ ದಿನ ಅಭಿಮಾನಿಗಳಿಗೆ ಕೊಹ್ಲಿ ಭರ್ಜರಿ ಗಿಫ್ಟ್, ಮಾಂತ್ರಿಕ ಕ್ಯಾಚ್ ಹಿಡಿದು ಭಿನ್ನವಾಗಿ ಸಂಭ್ರಮಿಸಿದ ವಿರಾಟ್ ಗೆ ಫ್ಯಾನ್ಸ್ ಫಿದಾ