ಮೊದಲ ಏಕದಿನ ಪಂದ್ಯದಲ್ಲೇ ದಿಟ್ಟ ನಿಲುವು ತೆಗೆದುಕೊಂಡ ಶುಭ್‌ಮನ್ ಗಿಲ್; ಸ್ಟಾರ್ ಆಟಗಾರನನ್ನು ಕೈಬಿಟ್ಟ ಟೀಂ ಇಂಡಿಯಾ ನಾಯಕ..!

Published : Nov 04, 2026, 10:13 AM IST
ind vs nz 1st ODI

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ. ನಾಯಕ ಶುಭಮನ್ ಗಿಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್‌ಗೆ ಕೊಕ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಭಾರತದ ಶಿಸ್ತಿನ ಬೌಲಿಂಗ್‌ಗೆ ಸಿಲುಕಿದ ಕಿವೀಸ್ ಪಡೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.

ಆಕ್ಲೆಂಡ್(ನ.04): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರ ಪ್ಲೇಯಿಂಗ್ ಇಲೆವೆನ್ ಆಯ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಟಿ20 ಸರಣಿಯ ಒಂದೂ ಪಂದ್ಯದಲ್ಲಿ ಅವಕಾಶ ಪಡೆಯದ ಸ್ಪಿನ್ನರ್ ಕುಲದೀಪ್ ಯಾದವ್, ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಬೆಂಚ್ ಕಾಯುವಂತಾಗಿದೆ. ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.

ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ವೇಳೆ ನಾಯಕ ಶುಭಮನ್ ಗಿಲ್ ತಂಡದ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದರು. ತಂಡದಲ್ಲಿ ಏಕೈಕ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್‌ಗೆ ಅವಕಾಶ ನೀಡಲಾಗಿದೆ. ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವ ಕಾರಣ ಅಕ್ಷರ್‌ಗೆ ಆದ್ಯತೆ ನೀಡಲಾಗಿದೆ ಎಂದು ತಂಡದ ಆಯ್ಕೆಯಿಂದ ಸ್ಪಷ್ಟವಾಗಿದೆ. ಇನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ನಾಲ್ವರು ಪ್ರಮುಖ ವೇಗದ ಬೌಲರ್‌ಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಕುಲದೀಪ್ ಯಾದವ್ ಮಾತ್ರವಲ್ಲದೆ, ನಿತೀಶ್ ಕುಮಾರ್ ರೆಡ್ಡಿಗೂ ಅವಕಾಶ ಕೈತಪ್ಪಿದೆ.

ಕುಲದೀಪ್ ಯಾದವ್‌ಗೆ ಮತ್ತೆ ಬೆಂಚ್‌ ಭಾಗ್ಯ

ಭಾರತ ತಂಡದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಕುಲದೀಪ್ ಯಾದವ್‌ಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಕುಲದೀಪ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಲಾಗಿದೆ. ಅಕ್ಷರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಉಪಯುಕ್ತ ರನ್‌ಗಳನ್ನು ಗಳಿಸಬಲ್ಲರು. ತಂಡದ ಸಮತೋಲನದ ದೃಷ್ಟಿಯಿಂದ ಅವರಿಗೆ ಮಣೆ ಹಾಕಲಾಗಿದೆ.

ರೋಹಿತ್-ಕೊಹ್ಲಿ ಜೊತೆ ಗಿಲ್; ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್, ರಾಹುಲ್

ಬ್ಯಾಟಿಂಗ್ ವಿಭಾಗದಲ್ಲಿ ನಿರೀಕ್ಷೆಯಂತೆ ನಾಯಕ ಶುಭಮನ್ ಗಿಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂವರು ಭಾರತದ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಐದನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಆಡಲಿದ್ದಾರೆ. ವಿಕೆಟ್‌ ಕೀಪರ್-ಬ್ಯಾಟರ್ ಕೆ.ಎಲ್. ರಾಹುಲ್ ಅವರಿಗೆ ಆರನೇ ಕ್ರಮಾಂಕದ ಜವಾಬ್ದಾರಿ ನೀಡಲಾಗಿದೆ. ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ ಗಮನ ಸೆಳೆದಿದ್ದ ನಮನ್ ಧೀರ್ ಕೂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿರುವ ಅವರು ಫಿನಿಷರ್ ಪಾತ್ರ ನಿರ್ವಹಿಸುವ ನಿರೀಕ್ಷೆಯಿದೆ.

ನಾಲ್ವರು ವೇಗಿಗಳಿಗೆ ಅವಕಾಶ; ಸಿರಾಜ್‌ಗೆ ಕೊಕ್!

ಭಾರತದ ಬೌಲಿಂಗ್ ವಿಭಾಗದಲ್ಲಿ ನಾಲ್ವರು ವೇಗದ ಬೌಲರ್‌ಗಳಿಗೆ ಅವಕಾಶ ನೀಡಲಾಗಿದೆ. ಅಂಶುಲ್ ಕಾಂಬೋಜ್, ಆಕಿಬ್ ನಬಿ, ಗುರ್‌ನೂರ್ ಬ್ರಾರ್ ಮತ್ತು ಅರ್ಶದೀಪ್ ಸಿಂಗ್ ವೇಗದ ಬೌಲಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಆದರೆ, ತಂಡದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ತಂಡದಲ್ಲಿರುವ ಹಿರಿಯ ವೇಗದ ಬೌಲರ್ ಆಗಿದ್ದರೂ ಅವರನ್ನು ಬೆಂಚ್‌ನಲ್ಲಿ ಕೂರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಟಾಸ್ ಗೆದ್ದ ಗಿಲ್ ಬೌಲಿಂಗ್ ಆಯ್ಕೆ

ಟಾಸ್ ಗೆದ್ದ ಬಳಿಕ ಮಾತನಾಡಿದ ಶುಭಮನ್ ಗಿಲ್, ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡರು. "ಆಕಾಶದಲ್ಲಿ ಸ್ವಲ್ಪ ಮೋಡ ಕವಿದ ವಾತಾವರಣವಿದೆ. ಓವರ್‌ಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದ್ದರೆ, ಎದುರಾಳಿಗಳು ನೀಡುವ ಗುರಿಯನ್ನು ಬೆನ್ನತ್ತುವುದು ಉತ್ತಮವಾಗಿರುತ್ತದೆ. ಹೀಗಾಗಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದೇವೆ" ಎಂದು ಗಿಲ್ ಹೇಳಿದರು.

ಸರಣಿಗೆ ತಂಡದ ಸಿದ್ಧತೆ ಉತ್ತಮವಾಗಿದೆ ಎಂದ ಅವರು, ಆಟಗಾರರು ಅಭ್ಯಾಸದ ವೇಳೆ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಎಲ್ಲರೂ ಸರಣಿಗಾಗಿ ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಉತ್ತಮ ಆರಂಭ ಪಡೆದ ಟೀಂ ಇಂಡಿಯಾ:

ಇನ್ನು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದೆ. ನಾಯಕ ಶುಭ್‌ಮನ್ ಗಿಲ್ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ವೇಗಿಗಳು, ಕಿವೀಸ್ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡುವಂತೆ ಮಾಡಿದ್ದಾರೆ. ಸದ್ಯ 28.3 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡವು ಕೇವಲ 115 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ. ಅರ್ಶದೀಪ್ ಸಿಂಗ್, ಅಂಶೂಲ್ ಕಂಬೋಜ್ ಹಾಗೂ ಗುರ್ನೂರ್ ಬ್ರಾರ್ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಸದ್ಯ ಟಿ20 ಸರಣಿಯಲ್ಲಿ ಭಾರತೀಯ ಬೌಲರ್‌ಗಳನ್ನು ಕಾಡಿದ್ದ ಗ್ಲೆನ್ ಫಿಲಿಫ್ಸ್(13) ಕ್ರೀಸ್‌ನಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

10,000 ಚದರ್ ಅಡಿ ವಿಸ್ತಿರ್ಣ, ಹ್ಯಾಂಗಿಂಗ್ ಸ್ವಿಮ್ಮಿಂಗ್ ಪೂಲ್! ₹80 ಕೋಟಿ ಮೌಲ್ಯದ 'ಕೊಹ್ಲಿ ಅರಮನೆ' ಫೋಟೋಗಳು
10 ಕೋಟಿ ಡೌನ್‌ಲೋಡ್ ಗುರಿ, ಸಚಿನ್ ತೆಂಡೂಲ್ಕರ್ ಹೂಡಿಕೆ; ಈ ಭಾರತೀಯ ಗೇಮ್ ಈಗ ಜಾಗತಿಕ ಮಟ್ಟದಲ್ಲಿ ಸದ್ದು!