ಟಿ20 ವಿಶ್ವ ಚಾಂಪಿಯನ್‌ ಟೀಮ್ ಇಂಡಿಯಾಗೆ ಶಾಕ್!; ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಭಾರತಕ್ಕೆ 34 ರನ್‌ಗಳ ಹೀನಾಯ ಸೋಲು!

Published : Jun 26, 2026, 09:50 PM ISTUpdated : Jun 26, 2026, 10:04 PM IST
Jai Moondra

ಸಾರಾಂಶ

ಬೆಲ್‌ಫಾಸ್ಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಟೀಮ್ ಇಂಡಿಯಾ 34 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದು, ಸರಣಿ ಸಮಬಲಕ್ಕಾಗಿ ಹೋರಾಡಬೇಕಿದೆ.

ಬೆಲ್‌ಫಾಸ್ಟ್ (ಜೂ.26): ಐರ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 34 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ. ಐರ್ಲೆಂಡ್ ನೀಡಿದ್ದ 183 ರನ್‌ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡ, ಆತಿಥೇಯರ ಭರ್ಜರಿ ಬೌಲಿಂಗ್ ದಾಳಿಗೆ ಸಿಲುಕಿ 18.5 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸಿಡಿಸಿದ ಸ್ಫೋಟಕ ಅರ್ಧಶತಕವನ್ನು (50 ರನ್) ಹೊರತುಪಡಿಸಿದರೆ, ಭಾರತದ ಉಳಿದ ಬ್ಯಾಟರ್‌ಗಳ ಪೈಕಿ ಯಾರೊಬ್ಬರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ.

ಭಾರತದ ಬ್ಯಾಟಿಂಗ್ ಪತನ: ಮಕಾಡೆ ಮಲಗಿದ ಸ್ಟಾರ್ ಪಡೆ

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಸ್ಕೋರ್ ಕೇವಲ 16 ರನ್ ಆಗಿದ್ದಾಗ, 5 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಜಾಯ್ ಮುಂದ್ರಾ ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಇಶಾನ್ ಕಿಶನ್ (1 ರನ್) ಮತ್ತು ಶ್ರೇಯಸ್ ಅಯ್ಯರ್ (3 ರನ್) ಮ್ಯಾಟ್ ಹೋಲಾರ್ಡ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಒಂದು ಕಡೆ ವಿಕೆಟ್‌ಗಳು ಪಟಪಟನೇ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಚಚ್ಚಿ ಔಟಾದರು. 8ನೇ ಓವರ್‌ನಲ್ಲಿ ಅಭಿಷೇಕ್ ಔಟಾಗುತ್ತಿದ್ದಂತೆ ಭಾರತ ಸಂಪೂರ್ಣ ರಕ್ಷಣಾತ್ಮಕ ಆಟಕ್ಕೆ ಶರಣಾಯಿತು.

ನಂತರ ಬಂದ ತಿಲಕ್ ವರ್ಮಾ (19) ಮತ್ತು ವಾಷಿಂಗ್ಟನ್ ಸುಂದರ್ (9) ಬೇಗನೇ ಔಟಾದರು. ಕೊನೆಯಲ್ಲಿ ಶಿವಂ ದುಬೆ (14 ಎಸೆತಗಳಲ್ಲಿ 25 ರನ್) ಮತ್ತು ಅಕ್ಷರ್ ಪಟೇಲ್ (15 ರನ್) ಭಾರತವನ್ನು ಗೆಲುವಿನತ್ತ ಮುನ್ನಡೆಸಲು ಹೋರಾಟ ನಡೆಸಿದರಾದರೂ ಐರ್ಲೆಂಡ್ ಬೌಲರ್‌ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಭಾರತ 148 ರನ್‌ಗಳಿಗೆ ಆಲೌಟ್ ಆಯಿತು.

ಐರ್ಲೆಂಡ್ ಬೌಲರ್‌ಗಳ ಮ್ಯಾಜಿಕ್

ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಐರ್ಲೆಂಡ್ ಬೌಲರ್‌ಗಳು ಪಂದ್ಯವನ್ನು ತಮ್ಮತ್ತ ಸೆಳೆದರು. ಮ್ಯಾಥ್ಯೂ ಹಂಫ್ರಿಸ್ 3.5 ಓವರ್‌ಗಳಲ್ಲಿ 38 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ ಭಾರತದ ಬ್ಯಾಟಿಂಗ್‌ ವಿಭಾಗವನ್ನು ಧೂಳೀಪಟ ಮಾಡಿದರು. ಮ್ಯಾಟ್ ಹೋಲಾರ್ಡ್ 4 ಓವರ್‌ಗಳಲ್ಲಿ ಕೇವಲ 28 ರನ್ ನೀಡಿ 3 ವಿಕೆಟ್ ಪಡೆದರೆ, ಜಾಯ್ ಮುಂದ್ರಾ 2 ವಿಕೆಟ್ ಹಾಗೂ ಲಿಯಾಮ್ ಮೆಕಾರ್ಥಿ ಮತ್ತು ಗರೆತ್ ಡೆಲಾನಿ ತಲಾ ಒಂದು ವಿಕೆಟ್ ಪಡೆದು ಐರ್ಲೆಂಡ್‌ನ ಐತಿಹಾಸಿಕ ಜಯಕ್ಕೆ ಕಾರಣರಾದರು.

ಮೊದಲು ಬ್ಯಾಟ್ ಮಾಡಿದ್ದ ಐರ್ಲೆಂಡ್‌ಗೆ ಆರಂಭಿಕ ಆಘಾತ

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಸ್ಕೋರ್ ಬೋರ್ಡ್‌ಗೆ ಕೇವಲ 30 ರನ್ ಸೇರುವಷ್ಟರಲ್ಲಿ ತಂಡದ ಮೊದಲ ಮೂರು ವಿಕೆಟ್‌ಗಳು ಪತನಗೊಂಡಿದ್ದವು. ಟಿಮ್ ಟೆಕ್ಟರ್ (17) ಮತ್ತು ರಾಸ್ ಅಡೇರ್ (12) ಅವರ ವಿಕೆಟ್‌ಗಳನ್ನು ಹರ್ಷಿತ್ ರಾಣಾ ಪಡೆದರೆ, ಹ್ಯಾರಿ ಟೆಕ್ಟರ್ (0) ಅವರನ್ನು ಅರ್ಶ್‌ದೀಪ್ ಸಿಂಗ್ ಶೂನ್ಯಕ್ಕೆ ಔಟ್‌ ಮಾಡಿದರು. ಪವರ್‌ಪ್ಲೇ ಅವಧಿಯಲ್ಲಿ ಆತಿಥೇಯರು ಗಳಿಸಿದ್ದು ಕೇವಲ 36 ರನ್ ಮಾತ್ರ. ಇದರ ಬೆನ್ನಲ್ಲೇ ಬೆನ್ ಕಾಲೀಟ್ಸ್ (15) ಅವರನ್ನು ಶಿವಂ ದುಬೆ ಔಟ್ ಮಾಡಿದಾಗ ಐರ್ಲೆಂಡ್ 51 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಟಕ್ಕರ್ - ಡೆಲಾನಿ ಜುಗಲ್‌ಬಂದಿ; ಚೇತರಿಸಿಕೊಂಡ ಆತಿಥೇಯರು

ಈ ಹಂತದಲ್ಲಿ 5ನೇ ವಿಕೆಟ್‌ಗೆ ಜೊತೆಯಾದ ನಾಯಕ ಲೋರ್ಕನ್ ಟಕ್ಕರ್ ಮತ್ತು ಗರೆತ್ ಡೆಲಾನಿ ಐರ್ಲೆಂಡ್ ತಂಡವನ್ನು ಪಂದ್ಯಕ್ಕೆ ಮರಳಿ ತಂದರು. ಜವಾಬ್ದಾರಿಯುತ ಆಟವಾಡಿದ ಟಕ್ಕರ್ 36 ಎಸೆತಗಳಲ್ಲಿ 50 ರನ್ ಗಳಿಸಿದರು. ಅಕ್ಷರ್ ಪಟೇಲ್ ಅವರ 13ನೇ ಓವರ್‌ನಲ್ಲಿ 2 ಫೋರ್ ಮತ್ತು 1 ಸಿಕ್ಸರ್ ಚಚ್ಚಿದ ಟಕ್ಕರ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹರ್ಷಿತ್ ರಾಣಾ ಎಸೆತದಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿ ಅವರು ಔಟಾದರು.

ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ 27 ರನ್ ಚಚ್ಚಿದ ಡೆಲಾನಿ!

ಪಂದ್ಯದ ಕೊನೆಯ ಹಂತದಲ್ಲಿ ಗರೆತ್ ಡೆಲಾನಿ ಅಕ್ಷರಶಃ ಅಬ್ಬರಿಸಿದರು. ಇದರಿಂದಾಗಿ ಐರ್ಲೆಂಡ್ ಸ್ಕೋರ್ 180ರ ಗಡಿ ದಾಟಲು ಸಾಧ್ಯವಾಯಿತು. ಪ್ರಸಿದ್ಧ್ ಕೃಷ್ಣ ಎಸೆದ 16ನೇ ಓವರ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಡೆಲಾನಿ 1 ಫೋರ್ ಮತ್ತು 3 ಭರ್ಜರಿ ಸಿಕ್ಸರ್ ಸೇರಿದಂತೆ ಬರೋಬ್ಬರಿ 27 ರನ್ ಲೂಟಿ ಮಾಡಿದರು! ಭರ್ಜರಿ 49 ರನ್ ಗಳಿಸಿದ್ದ ಡೆಲಾನಿ ಅವರನ್ನು ಕೊನೆಯಲ್ಲಿ ಅರ್ಶ್‌ದೀಪ್ ಸಿಂಗ್ ಔಟ್ ಮಾಡಿದ್ದರಿಂದ ಐರ್ಲೆಂಡ್‌ನ ಇನ್ನೂ ದೊಡ್ಡ ಮೊತ್ತದ ಕನಸು ಭಗ್ನಗೊಂಡಿತು. ಉಳಿದಂತೆ ಜಾರ್ಜ್ ಡಾಕ್ರೆಲ್ 19 ರನ್ ಗಳಿಸಿದರು. ಅಂತಿಮವಾಗಿ ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 182 ರನ್‌ಗಳ ಬೃಹತ್ ಮೊತ್ತ ಗಳಿಸಿತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐರ್ಲೆಂಡ್‌ನಲ್ಲಿ ಜೋರಾಯ್ತು ವೈಭವ್ ಸೂರ್ಯವಂಶಿ ಕ್ರೇಜ್! ಭಾರತ-ಐರ್ಲೆಂಡ್ ಪಂದ್ಯದ ಟಿಕೆಟ್‌ಗಳು ನಿಮಿಷಗಳಲ್ಲೇ ಸೋಲ್ಡ್ ಔಟ್
ಬಾಂಗ್ಲಾದೇಶ ಎದುರು ಗೆಲ್ಲುತ್ತಿದ್ದಂತೆಯೇ ಭಾರತದ ಸೆಮೀಸ್ ಹಾದಿ ಮತ್ತಷ್ಟು ಸುಗಮ! ಟಿ20 ವಿಶ್ವಕಪ್ ಸೆಮೀಸ್ ಲೆಕ್ಕಾಚಾರ ಇಲ್ಲಿದೆ