
ಸಿಡ್ನಿ(ಜ.08): ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ ತಿರುಗೇಟು ನೀಡುವಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಎರಡನೇ ದಿನದಾಟದಂತ್ಯಕ್ಕೇ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 96 ರನ್ ಬಾರಿಸಿದ್ದು, ಇನ್ನೂ 242 ರನ್‌ಗಳ ಹಿನ್ನಡೆಯಲ್ಲಿದೆ
ಹೌದು, ಆಸ್ಟ್ರೇಲಿಯಾ ತಂಡವನ್ನು 338 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ತಂಡ ಕೂಡಿಕೊಂಡ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರೋಹಿತ್ ಶರ್ಮಾ 77 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 26 ರನ್ ಬಾರಿಸಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು.
ಚೊಚ್ಚಲ ಅರ್ಧಶತಕ ಬಾರಿಸಿದ ಗಿಲ್: ಇನ್ನು ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶುಭ್‌ಮನ್ ಗಿಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಆಸ್ಟ್ರೇಲಿಯಾ ಮಾರಕ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ ಗಿಲ್ 101 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 50 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಗಿಲ್ ಈ ಅರ್ಧಶತಕ ಬಾರಿಸುವುದರೊಂದಿಗೆ ಏಷ್ಯಾದಾಚೆಗೆ 50+ ರನ್ ಬಾರಿಸಿದ ನಾಲ್ಕನೇ ಕಿರಿಯ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಸಿಡ್ನಿ ಟೆಸ್ಟ್: ಜಡೇಜಾ ದಾಳಿಗೆ ತತ್ತರಿಸಿದ ಆಸೀಸ್ 338 ರನ್‌ಗಳಿಗೆ ಆಲೌಟ್
ಗಿಲ್ ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಅಜಿಂಕ್ಯ ರಹಾನೆ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಸಾಕಷ್ಟು ಎಚ್ಚರಿಕೆ ಆಟಕ್ಕೆ ಮೊರೆ ಹೋಗಿದ್ದಾರೆ. ಪರಿಣಾಮ ಈ ಜೋಡಿ 77 ಎಸೆತಗಳನ್ನು ಎದುರಿಸಿ ಕೇವಲ 11 ರನ್‌ಗಳ ಜತೆಯಾಟವಾಡಿದೆ. ರಹಾನೆ 40 ಎಸೆತಗಳನ್ನು ಎದುರಿಸಿ 5 ರನ್ ಬಾರಿಸಿದರೆ, ಪೂಜಾರ 53 ಎಸೆತಗಳನ್ನು ಎದುರಿಸಿ 9 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ಆಟಗಾರರ ಜತೆಯಾಟ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆಯಿದೆ.
ಇದಕ್ಕೂ ಮೊದಲು ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 338 ರನ್‌ಗಳನ್ನು ಕಲೆಹಾಕಿತು. ಮಾರ್ನಸ್ ಲಬುಶೇನ್ 91 ರನ್ ಬಾರಿಸಿ ಕೇವಲ 9 ರನ್‌ಗಳಿಂದ ಶತಕ ವಂಚಿತರಾದರೆ, ಸ್ಮಿತ್ ತಮ್ಮ ವೃತ್ತಿಜೀವನದ 27ನೇ ಟೆಸ್ಟ್ ಶತಕ ಪೂರೈಸಿದರು. ಭಾರತ ಪರ ರವೀಂದ್ರ ಜಡೇಜಾ 4, ಬುಮ್ರಾ ಹಾಗೂ ಸೈನಿ ತಲಾ 2 ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 338/10
ಟೀಂ ಇಂಡಿಯಾ: 96/2
(* ಎರಡನೇ ದಿನದಾಟದ ಅಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.