
ಬೆಂಗಳೂರು(ಆ.09): ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ನೋಡಲು ಸಜ್ಜಾಗಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ಪಂದ್ಯವನ್ನಷ್ಟೇ ಅಲ್ಲದೇ ಮತ್ತೆ ಬೇರೆ ಬೇರೆ ತಂಡಗಳ ನಡುವಿನ 8 ಪಂದ್ಯಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.
ಹೌದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯವು ಅಕ್ಟೋಬರ್ 15ಕ್ಕೆ ನಿಗದಿಯಾಗಿತ್ತು. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲು ವೇದಿಕೆ ಸಜ್ಜಾಗಿತ್ತು. ಆದರೆ ಆ ಪಂದ್ಯವನ್ನು ಒಂದು ದಿನ ಮುಂಚಿನವಾಗಿ ಅಂದರೆ ಅಕ್ಟೋಬರ್ 14ರಂದು ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಧಿಕೃತವಾಗಿ ನಿಗದಿಯಾಗಿದೆ.
ಅಹಮದಾಬಾದ್ ಬಳಿಕ ಈಗ ವಿಶ್ವಕಪ್ ವೇಳಾಪಟ್ಟಿ ಬದಲಿಗೆ ಕೋಲ್ಕತಾ ಮನವಿ..! ಕಾರಣ ಏನು?
ಇನ್ನು ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿ ಪರಿಷ್ಕರಣೆಯಾದ ಬೆನ್ನಲ್ಲೇ , ಇಂಗ್ಲೆಂಡ್ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿ ಕೂಡಾ ಪರಿಷ್ಕರಣೆಯಾಗಿದೆ. ಈ ಮೊದಲು ಇಂಗ್ಲೆಂಡ್-ಆಫ್ಘಾನಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 14ರಂದು ಡೆಲ್ಲಿಯಲ್ಲಿ ಆಯೋಜಿಸಲಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ 24 ಗಂಟೆ ತಡವಾಗಿ ಅಂದರೆ ಅಕ್ಟೋಬರ್ 15ರಂದು ನಡೆಸಲು ನಿರ್ಧರಿಸಲಾಗಿದೆ.
ಇನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ಹೈದರಾಬಾದ್‌ನಲ್ಲಿ ಅಕ್ಟೋಬರ್ 12ಕ್ಕೆ ನಿಗದಿಯಾಗಿದ್ದ ಪಂದ್ಯವನ್ನು ಎರಡು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 10ರಂದು ಆಯೋಜಿಸಲು ತೀರ್ಮಾನಿಸಲಾಗಿದೆ. ಇನ್ನು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಲಖನೌದಲ್ಲಿ ಅಕ್ಟೋಬರ್ 13ರಂದು ನಡೆಯಬೇಕಿದ್ದ ಹೈವೋಲ್ಟೇಜ್ ಪಂದ್ಯ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 12ರಂದು ನಡೆಯಲಿದೆ.
World Cup 2023: ಅಕ್ಟೋಬರ್ 15ರ ಬದಲು ಈ ಡೇಟ್‌ಗೆ ಭಾರತ ಎದುರು ಆಡಲು ಒಪ್ಪಿಕೊಂಡ ಪಾಕಿಸ್ತಾನ..!
ಅದೇ ರೀತಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವೆ ಅಕ್ಟೋಬರ್ 14ರಂದು ಚೆನ್ನೈನಲ್ಲಿ ನಡೆಯಬೇಕಿದ್ದ ಪಂದ್ಯವು ಕೂಡಾ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 13ರ ಶುಕ್ರವಾರ ನಡೆಯಲಿದ್ದು, ಈ ಪಂದ್ಯವು ಹಗಲು-ರಾತ್ರಿ ಮಾದರಿಯ ಪಂದ್ಯವಾಗಿರಲಿದೆ. ಇನ್ನು ಭಾರತ ತಂಡದ ತನ್ನ ಪಾಲಿನ ಕೊನೆಯ ಲೀಗ್ ಪಂದ್ಯದ ವೇಳಾಪಟ್ಟಿಯಲ್ಲಿಯೂ ಬದಲಾವಣೆಯಾಗಿದ್ದು, ಈ ಮೊದಲು ನವೆಂಬರ್ 11ರಂದು ನೆದರ್‌ಲೆಂಡ್ಸ್ ವಿರುದ್ದ ನಿಗದಿಯಾಗಿದ್ದ ಪಂದ್ಯವು ಇದೀಗ ನವೆಂಬರ್ 12ಕ್ಕೆ ಮುಂದೂಡಲ್ಪಟ್ಟಿದ್ದು, ಈ ಪಂದ್ಯ ಕೂಡಾ ಹಗಲು ರಾತ್ರಿ ಪಂದ್ಯವಾಗಿರಲಿದೆ.
ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಂದು ಆರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಇನ್ನು ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ನವೆಂಬರ್ 19ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.