India Tour of Ireland: 2 ಪಂದ್ಯಗಳ ಟಿ20 ಸರಣಿಯಾಡಲು ಐರ್ಲೆಂಡ್‌ಗೆ ಬಂದಿಳಿದ ಭಾರತ

By Naveen KodaseFirst Published Jun 24, 2022, 9:39 AM IST
Highlights

* ಭಾರತ-ಐರ್ಲೆಂಡ್ ನಡುವಿನ ಟಿ20 ಸರಣಿಗೆ ಕ್ಷಣಗಣನೆ
* ಮೊದಲ ಬ್ಯಾಚ್‌ನಲ್ಲಿ ಡಬ್ಲಿನ್ ತಲುಪಿದ ಟೀಂ ಇಂಡಿಯಾ ಆಟಗಾರರು
* ಇಂದು ನಾಯಕ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಡಬ್ಲಿನ್‌ನತ್ತ ಪಯಣ

ಡಬ್ಲಿನ್(ಜೂ.24)‌: ಐರ್ಲೆಂಡ್‌ ವಿರುದ್ಧ 2 ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ (Team India) ಆಟಗಾರರು ಗುರುವಾರ ಐರ್ಲೆಂಡ್‌ನ ಡಬ್ಲಿನ್‌ಗೆ ಆಗಮಿಸಿದರು. ತಂಡದ  ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ (Dinesh Karthik), ಇಶಾನ್‌ ಕಿಶನ್‌, ಚಹಲ್‌ ಸೇರಿದಂತೆ ಎಲ್ಲಾ ಆಟಗಾರರು ಡಬ್ಲಿನ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇನ್ನು ನಾಯಕ ಹಾರ್ದಿಕ್ ಪಾಂಡ್ಯ, ಹಂಗಾಮಿ ಹೆಡ್ ಕೋಚ್ ವಿವಿಎಸ್ ಲಕ್ಷ್ಮಣ್ ಹಾಗೂ ಯುವ ವೇಗಿ ಉಮ್ರಾನ್ ಮಲಿಕ್ ಇಂದು ಡಬ್ಲಿನ್‌ನತ್ತ ಮುಖ ಮಾಡಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿ ಮುಗಿದ ಬಳಿಕ ಕೆಲವು ಆಟಗಾರರಿಗೆ ಮೂರು ದಿನಗಳ ವಿಶ್ರಾಂತಿ ನೀಡಲು ಬಿಸಿಸಿಐ ತೀರ್ಮಾನಿಸಿತ್ತು. ಅದರಂತೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಉಪನಾಯಕ ಭುವನೇಶ್ವರ್ ಕುಮಾರ್ ಇಂದು ಐರ್ಲೆಂಡ್‌ಗೆ ವಿಮಾನವೇರಲಿದ್ದಾರೆ. ಈಗಾಗಲೇ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಡಬ್ಲಿನ್‌ಗೆ ಬಂದಿಳಿದಿದ್ದಾರೆ. 

ಐರ್ಲೆಂಡ್‌ ಎದುರಿನ 2 ಪಂದ್ಯಗಳ ಟಿ20 ಸರಣಿಯು ಜೂನ್ 26 ಮತ್ತು 28ಕ್ಕೆ ನಿಗದಿಯಾಗಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಾರ್ದಿಕ್ ಪಾಂಡ್ಯ ನಾಯಕನಾಗಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದಾಗಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಪಟ್ಟ ಒಲಿದು ಬಂದಿದೆ.

Here we go 🇮🇳✈️ pic.twitter.com/zPkBTMtgpa

— Yuzvendra Chahal (@yuzi_chahal)

ಐರ್ಲೆಂಡ್ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ ನೋಡಿ

ಹಾರ್ದಿಕ್ ಪಾಂಡ್ಯ(ನಾಯಕ), ಭುವನೇಶ್ವರ್ ಕುಮಾರ್(ಉಪನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಆರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್.

ಮಹಿಳಾ ಟಿ20: ಶ್ರೀಲಂಕಾ ವಿರುದ್ಧ ಭಾರತ ಶುಭಾರಂಭ

ಡಾಂಬುಲಾ: ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ ಬೌಲಿಂಗ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತ ಮಹಿಳಾ ತಂಡ, ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 34 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರಲ್ಲಿ ಕೇವಲ 139 ರನ್‌ ಕಲೆ ಹಾಕಿತು. ಸ್ಮೃತಿ ಮಂಧನಾ (01), ಮೇಘನಾ (00) ಬೇಗನೇ ಔಟಾದರು. ಆದರೆ ಶಫಾಲಿ ವರ್ಮಾ 31, ಹರ್ಮನ್‌ಪ್ರೀತ್‌ ಕೌರ್‌ 22 ರನ್‌ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಜೆಮಿಮಾ ರೋಡ್ರಿಗಸ್‌ 27 ಎಸೆತಗಳಲ್ಲಿ 36 ರನ್‌ ಸಿಡಿಸಿದರು. ದೀಪ್ತಿ ಶರ್ಮಾ 17, ಪೂಜಾ 14 ರನ್‌ ಕೊಡುಗೆ ನೀಡಿದರು. ಸಾಧಾರಣ ಗುರಿ ಬೆನ್ನತ್ತಿದ ಲಂಕಾ 20 ಓವರಲ್ಲಿ 5 ವಿಕೆಟ್‌ಗೆ 104 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕವಿಶಾ ದಿಲ್ಹಾರಿ ಮಾತ್ರ ತಂಡದ ಪರ ಏಕಾಂಗಿ ಹೋರಾಟ ನಡೆಸಿದರು. ಅವರು ಔಟಾಗದೆ 47 ರನ್‌ ಗಳಿಸಿದರು. ರಾಧಾ ಯಾದವ್‌ 2 ವಿಕೆಟ್‌ ಪಡೆದರು. 2ನೇ ಟಿ20 ಪಂದ್ಯ ಶನಿವಾರ ನಡೆಯಲಿದೆ.

ಐರ್ಲೆಂಡ್ ಪ್ರವಾಸಕ್ಕೆ ಈ ಆಟಗಾರ ಭಾರತ ತಂಡದಲ್ಲಿರಬೇಕಿತ್ತು: ಸುನಿಲ್ ಗವಾಸ್ಕರ್

ಭಾರತದ ಮಾಜಿ ನಾಯಕಿ ರುಮೇಲಿ ಕ್ರಿಕೆಟ್‌ಗೆ ವಿದಾಯ

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ರುಮೇಲಿ ಧಾರ್‌ ಬುಧವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಅವರು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 2003ರಲ್ಲಿ ಅಂ.ರಾ. ಕ್ರಿಕೆಟ್‌ ಪಾದಾರ್ಪಣೆ ಮಾಡಿದ್ದ ರುಮೇಲಿ ಭಾರತದ ಪರ 4 ಟೆಸ್ಟ್‌, 78 ಏಕದಿನ, 18 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 961 ರನ್‌ ಕಲೆ ಹಾಕಿರುವ ಅವರು, 63 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಅವರು 2006ರಲ್ಲಿ ಕೊನೆ ಟೆಸ್ಟ್‌, 2012ರಲ್ಲಿ ಕೊನೆ ಏಕದಿನ ಪಂದ್ಯವಾಡಿದ್ದಾರೆ. ಬಳಿಕ 2018ರಲ್ಲಿ ಕೊನೆ ಬಾರಿ ಟಿ20ಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2005ರ ಏಕದಿನ ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಆಗಿದ್ದ ಭಾರತ ತಂಡದಲ್ಲಿ ರುಮೇಲಿ ಕೂಡಾ ಇದ್ದರು.

click me!