Warm-up Match: ಕುಸಿದ ಟೀಂ ಇಂಡಿಯಾಗೆ ಭರತ್ ಆಸರೆ..!

By Naveen KodaseFirst Published Jun 24, 2022, 9:07 AM IST
Highlights

ಇಂಗ್ಲೆಂಡ್ ಎದುರಿನ ಟೆಸ್ಟ್‌ಗೂ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ
ಲೀಸೆಸ್ಟರ್‌ಶೈರ್‌ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳ ವೈಫಲ್ಯ
ಕುಸಿದಿದ್ದ ಭಾರತಕ್ಕೆ ಅರ್ಧಶತಕ ಚಚ್ಚಿ ಆಸರೆಯಾದ ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್

ಲೀಸೆಸ್ಟರ್(ಜೂ.24)‌: ಲೀಸೆಸ್ಟರ್‌ಶೈರ್‌ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ಮೊದಲ ದಿನವೇ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಗಿದೆ. ಆದರೆ ಶ್ರೀಖರ್‌ ಭರತ್‌ ತಂಡಕ್ಕೆ ಚೇತರಿಕೆ ನೀಡಿದ್ದು, ಮೊದಲ ದಿನ ಟೀಂ ಇಂಡಿಯಾ (Team India) 8 ವಿಕೆಟ್ ಕಳೆದುಕೊಂಡು 246 ರನ್‌ ಗಳಿಸಿದೆ. ಅಭ್ಯಾಸ ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಭಾರತ ಕ್ರಿಕೆಟ್ ತಂಡವು ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಆದರೆ ವಿಕೆಟ್‌ ಕೀಪರ್ ಬ್ಯಾಟರ್ ಕೆ ಎಸ್ ಭರತ್ ದಿಟ್ಟ ಪ್ರದರ್ಶನ ತೋರುವ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದಾರೆ.

ರೋಹಿತ್‌ ಶರ್ಮಾ-ಶುಭ್‌ಮನ್‌ ಗಿಲ್‌ (Rohit Sharma-Shubman Gill Pair) ಜೋಡಿ ಉತ್ತಮ ಆರಂಭ ಒದಗಿಸಿತಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ರೋಹಿತ್‌ ಶರ್ಮಾ 25, ಶುಭ್‌ಮನ್ ಗಿಲ್‌ 21 ರನ್‌ಗೆ ವಿಕೆಟ್‌ ಒಪ್ಪಿಸಿದರು. ಹನುಮ ವಿಹಾರಿ ಕೇವಲ 3 ರನ್‌ ಗಳಿಸಿದರೆ, ಶ್ರೇಯಸ್‌ ಅಯ್ಯರ್‌ (Shreyas Iyer) ಶೂನ್ಯಕ್ಕೆ ನಿರ್ಗಮಿಸಿದರು. 55 ರನ್‌ಗೆ 4 ವಿಕೆಟ್‌ ಕಳೆದುಕೊಂಡ ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಜಡೇಜಾ ಕೂಡಾ ಕೇವಲ 13 ರನ್‌ಗೆ ಔಟಾದರು. ಆದರೆ ವಿರಾಟ್‌ ಕೊಹ್ಲಿ 33 ರನ್‌ ಗಳಿಸಿ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು.

ಕೆ ಎಸ್ ಭರತ್‌ ಫಿಫ್ಟಿ: ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಭರತ್‌ (KS Bharat) ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಅವರು 111 ಎಸೆತಗಳಲ್ಲಿ 70 ರನ್‌ ಗಳಿಸಿ ಭಾರತ ತಂಡದ ಮೊತ್ತ 250 ದಾಟಲು ನೆರವಾದರು. ಉಮೇಶ್‌ ಯಾದವ್‌ (Umesh Yadav) 23, ಮೊಹಮ್ಮದ್ ಶಮಿ 18 ರನ್‌ ಕೊಡುಗೆ ನೀಡಿದರು. ಇನ್ನು ಲೀಸೆಸ್ಟರ್‌ಶೈರ್‌ ತಂಡದ ಪರ ರೋಮನ್‌ ವಾಕರ್‌ 5 ವಿಕೆಟ್‌ ಗೊಂಚಲು ಪಡೆದರೆ, ವಿಲ್‌ ಡೇವಿಸ್‌ 2, ಪ್ರಸಿದ್ಧ್ ಕೃಷ್ಣ 1 ವಿಕೆಟ್‌ ಪಡೆದರು.

ಪಂತ್‌, ಪೂಜಾರ, ಕೃಷ್ಣ ಭಾರತದ ವಿರುದ್ಧ ಕಣಕ್ಕೆ!

ಅಭ್ಯಾಸ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ, ರಿಷಬ್‌ ಪಂತ್‌, ವೇಗಿಗಳಾದ ಜಸ್‌ಪ್ರೀತ್‌ ಬುಮ್ರಾ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಲೀಸೆಸ್ಟರ್‌ಶೈರ್‌ ತಂಡದ ಪರ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರು. ಪ್ರವಾಸಿ ತಂಡದ ಎಲ್ಲರೂ ಅಭ್ಯಾಸ ಪಂದ್ಯ ಆಡಬೇಕಾಗಿದ್ದರಿಂದ ಈ ನಾಲ್ವರು ಭಾರತದ ವಿರುದ್ಧವೇ ಕಣಕ್ಕಿಳಿದರು. ಲೀಸೆಸ್ಟರ್‌ಶೈರ್‌ ತಂಡವನ್ನು ಸ್ಯಾಮ್‌ ಎವನ್ಸ್‌ ಮುನ್ನಡೆಸುತ್ತಿದ್ದಾರೆ.

ENG vs IND ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಇಂಗ್ಲೆಂಡ್‌ಗೆ ತೆರಳಿದ ಅಶ್ವಿನ್‌

ನವದೆಹಲಿ: ಕೋವಿಡ್‌ ದೃಢಪಟ್ಟ ಕಾರಣ ಕಳೆದ ವಾರ ಟೀಂ ಇಂಡಿಯಾದ ಇತರೆ ಆಟಗಾರರೊಂದಿಗೆ ಇಂಗ್ಲೆಂಡ್‌ಗೆ ತೆರಳದೆ ಭಾರತದಲ್ಲೇ ಉಳಿದುಕೊಂಡಿದ್ದ ಆಫ್‌ಸ್ಪಿನ್ನರ್‌ ಆರ್‌.ಅಶ್ವಿನ್‌ ಗುರುವಾರ ಇಂಗ್ಲೆಂಡ್‌ಗೆ ತಲುಪಿದ್ದು, ತಂಡವನ್ನು ಕೂಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕ್ವಾರಂಟೈನ್‌ಗೆ ಒಳಗಾಗಿದ್ದ ಅವರು ಲೀಸೆಸ್ಟರ್‌ಶೈರ್‌ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದ ವೇಳೆ ಸಹ ಆಟಗಾರರನ್ನು ಸೇರಿಕೊಂಡಿದ್ದಾರೆ. ಆದರೆ ಸಂಪೂರ್ಣ ಚೇತರಿಕೆ ಆಗದ ಕಾರಣ ಅವರು ಅಭ್ಯಾಸ ಪಂದ್ಯದಲ್ಲಿ ಆಡಲ್ಲ ಎಂದು ಎಂದು ಗೊತ್ತಾಗಿದೆ. ಭಾರತ ಆಟಗಾರರು ಜೂನ್ 16ಕ್ಕೆ ಇಂಗ್ಲೆಂಡ್‌ಗೆ ತೆರಳಿದ್ದರು. ಆದರೆ ಪ್ರಯಾಣಕ್ಕೂ ಮುನ್ನ ಕೋವಿಡ್‌ ಪತ್ತೆಯಾದ ಕಾರಣ ಅಶ್ವಿನ್‌ ಭಾರತದಲ್ಲೇ ಬಾಕಿಯಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದರು.

click me!