ಮಹಿಳಾ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಬಗ್ಗುಬಡಿದು ಭಾರತ ಶುಭಾರಂಭ

Published : Oct 01, 2025, 07:06 AM IST
India women

ಸಾರಾಂಶ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 59 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಕುಸಿತದ ಹೊರತಾಗಿಯೂ, ದೀಪ್ತಿ ಶರ್ಮಾ ಮತ್ತು ಅಮನ್‌ಜೋತ್ ಕೌರ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಭಾರತ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿ ಗೆಲುವಿನ ನಗೆ ಬೀರಿತು.

ಗುವಾಹಟಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಮಂಗಳವಾರ ಶ್ರೀಲಂಕಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ 59 ರನ್‌ಗಳಲ್ಲಿ ಜಯಭೇರಿ ಬಾರಿಸಿತು.

ಭಾರತದ ಬ್ಯಾಟಿಂಗ್ ವೇಳೆ ಪದೇ ಪದೇ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ತಲಾ 47 ಓವರ್‌ಗಳಿಗೆ ಇಳಿಸಲಾಯಿತು. ಆರಂಭಿಕದ ವೈಫಲ್ಯದ ಹೊರತಾಗಿಯೂ ತಂಡ 47 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 269 ರನ್ ಕಲೆಹಾಕಿತು. ಸ್ಮೃತಿ ಮಂಧನಾ(8) ವಿಫಲವಾಗಿದ್ದರಿಂದ ತಂಡ 25 ಓವರ್‌ಗಳಲ್ಲಿ 120 ರನ್ ಗಳಿಸಿತ್ತು. ಹರ್ಲಿನ್ ಡಿಯೋಲ್ 48 ರನ್ ಸಿಡಿಸಿದರು. ಆದರೆ 26ನೇ ಓವರ್‌ನಲ್ಲಿ ಇನೋಕಾ ರಣವೀರ ಮೂರು ವಿಕೆಟ್ ಕಿತ್ತು ಭಾರತಕ್ಕೆ ಆಘಾತ ನೀಡಿದರು. ಮುಂದಿನ ಓವರ್‌ನಲ್ಲಿ ರಿಚಾ ಘೋಷ್ ಕೂಡಾ ಔಟಾದರು. ತಂಡ 4 ರನ್ ಅಂತರದಲ್ಲಿ 4 ವಿಕೆಟ್ ನಷ್ಟಕ್ಕೊಳಗಾಯಿತು. ಆದರೆ ದೀಪ್ತಿ ಶರ್ಮಾ(53 ಎಸೆತಕ್ಕೆ 53) ಹಾಗೂ ಅಮನ್‌ಜೋತ್ ಕೌರ್ (57) 7ನೇ ವಿಕೆಟ್ ಗೆ 103 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಬಳಿಕ ಸ್ನೇಹ ರಾಣಾ 15 ಎಸೆತಗಳಲ್ಲಿ ಔಟಾಗದೆ 28 ರನ್ ಸಿಡಿಸಿ, ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು. ರಣವೀರ 4 ವಿಕೆಟ್ ಕಿತ್ತರು.

 

ಶ್ರೀಲಂಕಾಗೆ 271 ರನ್ ಗುರಿ

ಡಿಎಲ್‌ಎಸ್ ನಿಯಮದನ್ವಯ ಲಂಕಾ 47 ಓವರ್‌ಗಳಲ್ಲಿ 271 ರನ್‌ ಪರಿಷ್ಕೃತ ಗುರಿ ಪಡೆಯಿತು. ಆದರೆ ತಂಡ 45.4 ಓವರ್‌ಗಳಲ್ಲಿ 211 ರನ್‌ಗೆ ಆಲೌಟಾಯಿತು. ನಾಯಕಿ ಚಾಮರಿ ಅಟ್ಟಪಟ್ಟು (43) ಹಾಗೂ ನೀಲಾಕ್ಷಿಡೆ ಸಿಲ್ವ(35) ಹೋರಾಟ ವ್ಯರ್ಥವಾಯಿತು. 

ಅಪರೂಪದ ದಾಖಲೆ ಸರಿಗಟ್ಟಿದ ಲಂಕಾ

ಶ್ರೀಲಂಕಾ ಮಹಿಳಾ ತಂಡದ 9 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು. ಹೀಗಿದ್ದೂ ಭಾರತ ಎದುರು ಸೋಲು ತಪ್ಪಿಸಿಕೊಳ್ಳಲು ಲಂಕಾ ಪಡೆಗೆ ಸಾಧ್ಯವಾಗಲಿಲ್ಲ.  ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮೊದಲು 2017ರಲ್ಲಿ ಬ್ರಿಸ್ಟಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ 9 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಿದ್ದರು.

ಸ್ಕೋರ್:

ಭಾರತ 47 ಓವರಲ್ಲಿ 269/8 (ಅಮನ್‌ಜೋತ್ 57, ದೀಪ್ತಿ 53, ಹರ್ಲಿನ್ 48, ರಣವೀರ 4-46)

ಶ್ರೀಲಂಕಾ 45.4 ಓವರ್‌ಗಳಲ್ಲಿ 211/10 (ಅಟ್ಟಪಟ್ಟು 43, ನೀಲಾಕ್ಷಿ 35, ದೀಪ್ತಿ 3-54, ಸ್ನೇಹ 2-32)

ಪಂದ್ಯಶ್ರೇಷ್ಠ: ದೀಪ್ತಿ ಶರ್ಮಾ

ಇಂದು ಆಸೀಸ್ vs ಕಿವೀಸ್

ಇಂದೋರ್: ಮಹಿಳಾ ಏಕದಿನ ವಿಶ್ವಕಪ್‌ನ 7 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಈ ಬಾರಿ ಟೂರ್ನಿ ಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದು, ಬುಧವಾರ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. 2000ರ ಆವೃತ್ತಿಯ ಚಾಂಪಿಯನ್ ನ್ಯೂಜಿಲೆಂಡ್, 2ನೇ ಬಾರಿ ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿಡಲಿದೆ.

ಮಹಿಳಾ ಕ್ರಿಕೆಟ್‌ನ ಇಬ್ಬರು ಸೂಪರ್‌ ಸ್ಟಾರ್ ಕ್ರಿಕೆಟರ್‌ಗಳಾದ ಅಲೀಸಾ ಹೀಲಿ ಹಾಗೂ ಸೋಫಿ ಡಿವೈನ್‌ ನಡುವಿನ ಮುಖಾಮುಖಿಗೆ ಇಂದು ಇಂದೋರ್ ಸಾಕ್ಷಿಯಾಗಲಿದೆ. ಅಂದಹಾಗೆ ಎರಡೂ ತಂಡಗಳು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿವೆ. ಅದರಲ್ಲೂ ಸೋಫಿ ಡಿವೈನ್ ನೇತೃತ್ವದ ನ್ಯೂಜಿಲೆಂಡ್ ವನಿತೆಯರ ತಂಡವು ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಎನಿಸಿಕೊಂಡಿದೆ. ಇನ್ನೊಂದೆಡೆ ಹೀಲಿ ನೇತೃತ್ವದ ಆಸ್ಟ್ರೇಲಿಯಾ ತಂಡವು ಯುವ ಹಾಗೂ ಅನುಭವಿ ಆಟಗಾರ್ತಿಯರನ್ನು ಒಳಗೊಂಡಿದ್ದು, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿವ ನಿರೀಕ್ಷೆಯಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ