ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಾನ್ಪುರ ಟೆಸ್ಟ್ ಪಂದ್ಯವನ್ನು 7 ವಿಕೆಟ್ ಅಂತರದಲ್ಲಿ ಜಯಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ
ಕಾನ್ಪುರ: ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿ ಹಾಗೂ ಯಶಸ್ವಿ ಜೈಸ್ವಾಲ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ಎದುರು ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ರೋಹಿತ್ ಶರ್ಮಾ ಪಡೆ ಕ್ಲೀನ್ ಸ್ವೀಪ್ ಮಾಡಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ 280 ರನ್ ಅಂತರದಲ್ಲಿ ಜಯಿಸಿದ್ದ ಭಾರತ, ಇದೀಗ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಮಳೆ ಅಡಚಣೆಯ ಹೊರತಾಗಿಯೂ 7 ವಿಕೆಟ್ ಅಂತರದ ಸುಲಭ ಜಯ ದಾಖಲಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 12 ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿ ಕೊಂಡಿದೆ.
ಗೆಲ್ಲಲು ಕೇವಲ 95 ರನ್‌ಗಳ ಸಾಧಾರಣ ಗುರಿ ಪಡೆದ ಟೀಂ ಇಂಡಿಯಾ ಮೂರನೇ ಓವರ್‌ನಲ್ಲೇ ನಾಯಕ ರೋಹಿತ್ ಶರ್ಮಾ(8) ವಿಕೆಟ್ ಕಳೆದುಕೊಂಡಿತು. ಇನ್ನು ಶುಭ್‌ಮನ್ ಗಿಲ್ ಕೂಡಾ ಕೇವಲ 6 ರನ್ ಗಳಿಸಿ ಮೆಹದಿ ಹಸನ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾವನ್ನು ಗೆಲುವಿನ ಸಮೀಪ ಕೊಂಡೊಯ್ಯದರು. ಜೈಸ್ವಾಲ್ 45 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 51 ರನ್ ಬಾರಿಸಿ ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 37 ಎಸೆತಗಳನ್ನು ಎದುರಿಸಿ ಅಜೇಯ 29 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
India secure a 2-0 series win over Bangladesh with a comprehensive win at Green Park. | 📝: https://t.co/hC8Iwdtraj pic.twitter.com/t14NPSYx7P
— ICC (@ICC)ಇದಕ್ಕೂ ಮೊದಲು 2 ವಿಕೆಟ್ ಕಳೆದುಕೊಂಡು 27 ರನ್‌ಗಳೊಂದಿಗೆ 5ನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಆರಂಭದಲ್ಲೇ ಶಾಕ್ ಕೊಟ್ಟರು. ಇದಾದ ಬಳಿಕ ಮುಷ್ಫಿಕುರ್ ರಹೀಂ(37) ಹಾಗೂ ಶದ್ಮನ್ ಇಸ್ಲಾಂ(50) ಕೊಂಚ ಪ್ರತಿರೋಧ ತೋರಿದರು. ಆದರೆ ಜಡೇಜಾ ಹಾಗೂ ಬುಮ್ರಾ ತಲಾ 3 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶವನ್ನು 146 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.