
ಮುಂಬೈ (ಜೂ.29) ಪೆಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಅಮಾಯಕರು ಬಲಿಯಾಗಿದ್ದರು. ಕಾಶ್ಮೀರ ಪ್ರವಾಸಕ್ಕೆ ಹೋದ ಪ್ರವಾಸಿಗರು ಉಗ್ರರ ಗುಂಡೇಟಿಗೆ ಪ್ರಾಣ ಕಳೆದುಕೊಂಡಿದ್ದರು. ಇದು ಭಾರತವನ್ನು ಕೆರಳಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತ್ತು. ಜೊತೆಗೆ ಸಿಂಧೂ ನದಿ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳನ್ನು ಸ್ಥಗಿತಗೊಳಿಸಿತ್ತು. ಪಾಕಿಸ್ತಾನ ಜೊತೆಗಿನ ಹಲವು ವ್ಯವಹಾರಗಳು ಬಂದ್ ಆಗಿತ್ತು. ಈ ವೇಳೆ ಪಾಕಿಸ್ತಾನ ಜೊತೆ ಯಾವುದೇ ಕ್ರಿಕೆಟ್ ಇಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಭಾರತ ಹಾಗೂ ಪಾಕಿಸ್ತಾನ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಮುಖಾಮುಖಿಯಾಗಲಿದೆ ಎನ್ನುತ್ತಿವೆ ಮೂಲಗಳು.
ಕ್ರಿಕ್‌ಬಝ್ ವರದಿ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿದ್ದು ಮಾತ್ರವಲ್ಲ, ಸಂಪೂರ್ಣವಾಗಿ ಕಡಿತಗೊಂಡರೂ ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದಿದೆ. ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ ) ಅಸ್ತಿತ್ವದಲ್ಲಿರಬೇಕು ಎಂದರೆ ಏಷ್ಯಾಕಪ್ ನಡೆಯಲೇಬೇಕು. ಏಷ್ಯಾಕಪ್ ನಡೆಯಬೇಕು ಎಂದರೆ ಭಾರತ ಪಾಕಿಸ್ತಾನ ಮುಖಾಮುಖಿಯಾಗಲೇಬೇಕು. ಇಲ್ಲದಿದ್ದರೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಬಾಗಿಲು ಮುಚ್ಚಲಿದೆ. ಹೀಗಾಗಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಈಗಾಗಲೇ ಮಹತ್ವದ ಸಭೆ ನಡೆಸಿದೆ. ಈ ವೇಳೆ ಈಗಾಗಲೇ ನಿಗಧಿಯಂತೆ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲು ನಿರ್ಧರಿಸಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
ಸೆಪ್ಟೆಂಬರ್ 10ಕ್ಕೆ ಭಾರತ ಪಾಕಿಸ್ತಾನ ಟಿ20 ಪಂದ್ಯ
ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಟಿ20 ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಹೇಳಿದೆ. ಜುಲೈ ಮೊದಲ ವಾರದಲ್ಲಿ ಎಸಿಸಿ ಸಭೆ ಸೇರಲಿದೆ. ಬಳಿಕ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಳಿಸಲಿದೆ ಎಂದು ವರದಿಯಾಗಿದೆ. 6 ತಂಡಗಳ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ಮುಖಾಮಖಿಯೇ ಪ್ರಮುಖ. ಇದೊಂದೇ ಪಂದ್ಯ ಎಸಿಸಿ ಜೇಬು ತುಂಬಿಸಲಿದೆ.
2025ರ ಏಷ್ಯಾಕಪ್ ಆತಿಥ್ಯ ತಂಡ ಭಾರತ
ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಭಾರತ ಆತಿಥ್ಯ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಲಿದೆ. ಈ ಪೈಕಿ ಮೊದಲ ಆಯ್ಕೆ ದುಬೈ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯವಹಿಸಿತ್ತು. ಈ ವೇಳೆ ಭಾರತದ ಎಲ್ಲಾ ಪಂದ್ಯಗಳು ದುಬೈನಲ್ಲಿ ಆಯೋಜನೆ ಮಾಡಲಾಗಿತ್ತು. ಭಾರತ ತಂಡ ಪಾಕಿಸ್ತಾನ ಪ್ರವಾಸಕ್ಕೆ ನಿರಾಕರಿಸಿತ್ತು.
2023ರಲ್ಲಿ ನಡೆದಿತ್ತು ಏಷ್ಯಾಕಪ್ ಟೂರ್ನಿ
ಕೊನೆಯದಾಗಿ ಏಷ್ಯಾಕಪ್ ಟೂರ್ನಿ 2023ರಲ್ಲಿ ಆಯೋಜನೆಗೊಂಡಿತ್ತು. ಶ್ರೀಲಂಕಾ ಟೂರ್ನಿಗೆ ಆತಿಥ್ಯವಹಿಸಿತ್ತು. 2023ರಲ್ಲಿ 50 ಓವರ್ ಏಕದಿನ ಪಂದ್ಯ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿತ್ತು. ಆದರೆ ಈ ಟೂರ್ನಿ ವೇಳಾಪಟ್ಟಿ ಹಾಗೂ ಆಯೋಜನೆ ಭಾರಿ ಟೀಕೆಗೆ ಗುರಿಯಾಗಿತ್ತು. ಭಾರತ ಹಾಗೂ ಪಾಕಿಸ್ತಾನ ಈ ಟೂರ್ನಿಯಲ್ಲಿ 3 ಬಾರಿ ಮುಖಾಮುಖಿಯಾಗಿತ್ತು. ಉದ್ದೇಶಪೂರ್ವಕವಾಗಿ, ಹಣದ ಆಸೆಯಿಂದ ಈ ರೀತಿ ವೇಳಾಪಟ್ಟಿ ಮಾಡಲಾಗಿದೆ ಅನ್ನೋ ಆರೋಪ ಎದುರಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.