
ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡವು ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ಇದರ ಭಾಗವಾಗಿ ನ್ಯೂಜಿಲೆಂಡ್ ಎದುರಿನ ಐದು ಪಂದ್ಯಗಳ ಏಕದಿನ ಸರಣಿಗೆ ಇದೀಗ ಭಾರತ ತಂಡ ಪ್ರಕಟವಾಗಿದೆ. ಈ ತಂಡ ಪ್ರಕಟವಾದ ಬೆನ್ನಲ್ಲೇ ಕೆಲವು ಯುವ ಆಟಗಾರರಿಗೆ ಮಣೆ ಹಾಕಿದ್ದರೇ ಮತ್ತೆ ಕೆಲವು ಆಟಗಾರರಿಗೆ ಆಯ್ಕೆ ಸಮಿತಿ ಶಾಕ್ ಕೊಟ್ಟಿದೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ನ್ಯೂಜಿಲೆಂಡ್ ಎದುರಿನ ಮೊದಲ ಮೂರು ಪಂದ್ಯಗಳಿಗೆ ಶುಭ್ಮನ್ ಗಿಲ್ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನುಳಿದ ಕೊನೆಯ ಎರಡು ಪಂದ್ಯಗಳಿಂದ ಗಿಲ್ ವಿಶ್ರಾಂತಿ ಪಡೆದುಕೊಳ್ಳಲಿದ್ದು, ಹಂಗಾಮಿ ನಾಯಕನಾಗಿ ಶ್ರೇಯಸ್ ಅಯ್ಯರ್ ಕಾರ್ಯ ನಿರ್ವಹಿಸಲಿದ್ದಾರೆ. ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಗಿಲ್ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಇನ್ನು ಈ ಸರಣಿಯಲ್ಲಿ ನಾಲ್ಕು ಪ್ರಮುಖ ಆಟಗಾರರನ್ನು ಕೈಬಿಡಲಾಗಿದ್ದು, ಈ ನಾಲ್ವರಿಗೂ ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಬಾಗಿಲು ಬಂದ್ ಆಗಲಿದೆಯೇ ಎನ್ನುವ ಚರ್ಚೆ ಹುಟ್ಟುಹಾಕಿದೆ. ಈ ಲಿಸ್ಟ್ನಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ ಬನ್ನಿ.
ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾತ್ರವಲ್ಲದೇ ಫೀಲ್ಡಿಂಗ್ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುತ್ತಾ ಬಂದಿದ್ದಾರೆ. 2027ರ ಏಕದಿನ ವಿಶ್ವಕಪ್ ಆಡಲು ಕನಸು ಕಾಣುತ್ತಿರುವ ಜಡೇಜಾಗೆ ಇದೀಗ ಆಯ್ಕೆ ಸಮಿತಿ ಶಾಕ್ ನೀಡಿದೆ. ಇದೀಗ ಜಡೇಜಾ ಅವರನ್ನು ಹಿಂದಿಕ್ಕಿ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಜಡ್ಡು ಅವರ ಏಕದಿನ ವಿಶ್ವಕಪ್ ಅಡುವ ಕನಸು ಮತ್ತಷ್ಟು ಮಸುಕಾಗಲಾರಂಭಿಸಿದೆ.
ಭಾರತ ಟೆಸ್ಟ್ ತಂಡದ ಖಾಯಂ ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಯಶಸ್ವಿ ಜೈಸ್ವಾಲ್ ಈ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ 2027ರ ಏಕದಿನ ವಿಶ್ವಕಪ್ಗೆ ಮೊದಲ ಆಯ್ಕೆಯ ಆರಂಭಿಕರಾಗಿರುವುದರಿಂದ ಜೈಸ್ವಾಲ್ಗೆ ಮತ್ತೊಮ್ಮೆ ಅವಕಾಶ ಸಿಕ್ಕಿಲ್ಲ. ಆದರೆ ಗಿಲ್ ಅನುಪಸ್ಥಿತಿಯಲ್ಲಿ ಕೊನೆಯ ಎರಡು ಏಕದಿನ ಪಂದ್ಯದಲ್ಲಾದರೂ ಜೈಸ್ವಾಲ್ಗೆ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಗಿದೆ. ಅಲ್ಲಿಗೆ ಜೈಸ್ವಾಲ್ ವಿಶ್ವಕಪ್ ಆಡುವ ಹಾದಿ ಮತ್ತಷ್ಟು ದುರ್ಗಮವಾದಂತೆ ಅನಿಸುತ್ತಿದೆ.
ಇದುವರೆಗೂ ಕೆ ಎಲ್ ರಾಹುಲ್ಗೆ ಏಕದಿನ ಕ್ರಿಕೆಟ್ನಲ್ಲಿ ಬ್ಯಾಕ್ಅಪ್ ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಸ್ಥಾನ ಪಡೆಯುತ್ತಿದ್ದರು. ಆದರೆ ಇದೀಗ ಧ್ರುವ್ ಜುರೆಲ್ ಬದಲಿಗೆ ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಏಕದಿನ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಇದರೊಂದಿಗೆ ಇಶಾನ್ ಕಿಶನ್ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಲಿದ್ದು, ಧ್ರುವ್ ಜುರೆಲ್ ಹಾಗೂ ರಿಷಭ್ ಪಂತ್ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯೋದು ಡೌಟ್ ಎನಿಸಿದೆ.
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಮೊಹಮ್ಮದ್ ಶಮಿಗೆ ಕಿವೀಸ್ ಎದುರಿನ ಏಕದಿನ ಸರಣಿಯಲ್ಲಿ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದರೊಂದಿಗೆ ಶಮಿಯ 2027ರ ಏಕದಿನ ವಿಶ್ವಕಪ್ ಆಡುವ ಆಸೆ ಬಹುತೇಕ ನುಚ್ಚುನೂರಾದಂತೆ ಭಾಸವಾಗುತ್ತಿದೆ.
ಗಿಲ್(ನಾಯಕ), ರೋಹಿತ್, ಕೊಹ್ಲಿ, ಶ್ರೇಯಸ್(ಉಪನಾಯಕ), ರಾಹುಲ್. ನಿತೀಶ್, ಅಕ್ಷರ್, ನಮನ್ಧೀರ್, ಅನ್ಶುಲ್ ಕಂಬೋಜ್, ಗುರ್ನೂರ್ ಬ್ರಾರ್, ಋತುರಾಜ್, ಅರ್ಶ್ದೀಪ್, ಇಶಾನ್, ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲ್ದೀಪ್.
ಶ್ರೇಯಸ್(ನಾಯಕ), ರೋಹಿತ್, ಕೊಹ್ಲಿ, ತಿಲಕ್, ಇಶಾನ್(ಉಪನಾಯಕ), ನಿತೀಶ್, ಅಕ್ಷರ್, ನಮನ್ಧೀರ್, ಆಖಿಬ್ ನಬಿ, ಗುರ್ನೂರ್, ಋತುರಾಜ್, ಅರ್ಶ್ದೀಪ್, ಕುಮಾರ್ ಕುಶಾಗ್ರ, ಸಿರಾಜ್, ಯಶ್ ಠಾಕೂರ್, ಕುಲ್ದೀಪ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.