
ರಾಯ್ಪುರ(ಮಾ.18): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಆಕರ್ಷಕ ಅರ್ಧಶತಕ ಹಾಗೂ ಯುವರಾಜ್ ಸಿಂಗ್ ಸ್ಫೋಟಕ 49 ರನ್‌ಗಳ ನೆರವಿನಿಂದ ಇಂಡಿಯಾ ಲೆಜೆಂಡ್ಸ್ ತಂಡವು ರೋಡ್ ಸೇಪ್ಟಿ ಸೀರೀಸ್‌ನಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡವನ್ನು 13 ರನ್‌ಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಹೌದು, ಭಾರತ ನೀಡಿದ್ದ 219 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 6 ವಿಕೆಟ್ ಕಳೆದುಕೊಂಡು 206 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 13 ರನ್‌ಗಳ ರೋಚಕ ಸೋಲು ಕಂಡಿತು. ವಿಂಡೀಸ್ ಪರ ಡ್ವೇನ್ ಬ್ರಾವೋ(63), ನರಸಿಂಗ ಡಿಯೊನಾರೆನೆ(59) ಹಾಗೂ ನಾಯಕ ಬ್ರಿಯನ್ ಲಾರ 56 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಮೂವರನ್ನು ಹೊರತುಪಡಿಸಿದರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.
ಇಂಡಿಯಾ ಲೆಜೆಂಡ್ಸ್ ಪರ ಕನ್ನಡದ ವೇಗಿ ವಿನಯ್ ಕುಮಾರ್ ಕೇವಲ 26 ರನ್ ನೀಡಿ 2 ವಿಕೆಟ್ ಪಡೆದರೆ, ಪ್ರಗ್ಯಾನ್ ಓಜಾ, ಇರ್ಫಾನ್ ಪಠಾನ್ ಹಾಗೂ ಮನ್‌ಪ್ರೀತ್ ಗೋಣಿ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಡಿಯಾ ಲೆಜೆಂಡ್ಸ್ ತಂಡಕ್ಕೆ ಆರಂಭಿಕರಾದ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡುಲ್ಕರ್ ಜೋಡಿ ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 56 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟಿತು. ವಿರೇಂದ್ರ ಸೆಹ್ವಾಗ್ ಕೇವಲ 17 ಎಸೆತಗಳಲ್ಲಿ 35 ರನ್ ಬಾರಿಸಿ ಬೆಸ್ಟ್‌ಗೆ ವಿಕೆಟ್ ಒಪ್ಪಿಸಿದರು.
ನಾನು 5ನೇ ಸಿಕ್ಸ್ ಬಾರಿಸಬೇಕೆಂದುಕೊಂಡಿದ್ದೆ, ಅದರೆ..? ಯುವಿ ಬಿಚ್ಚಿಟ್ಟ ಸೀಕ್ರೇಟ್ ಇದು..!
ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 42 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 65 ರನ್ ಬಾರಿಸಿ ಎರಡನೇ ಬಲಿಯಾದರು. ಮೊಹಮ್ಮದ್ ಕೈಫ್ 27 ಹಾಗೂ ಯೂಸುಪ್ ಪಠಾಣ್ 37 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್ ಕೇವಲ 20 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಅಜೇಯ 49 ರನ್ ಬಾರಿಸುವ ಮೂಲಕ ಇಂಡಿಯಾ ಲೆಜೆಂಡ್ಸ್ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.