
ಚೆನ್ನೈ (ಫೆ.26): ಬ್ಯಾಟಿಂಗ್‌ನಲ್ಲಿ ಮಹಾನ್ ಪ್ರದರ್ಶನ ಹಾಗೂ ಎಚ್ಚರಿಕೆಯ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾ ಐಸಿಸಿ ಟಿ20 ವಿಶ್ವಕಪ್‌ನ ತನ್ನ 2ನೇ ಸೂಪರ್-8 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 72 ರನ್‌ಗಳಿಂದ ಮಣಿಸಿದೆ. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿರುವ ಕಾರಣ, ಭಾರತಕ್ಕೆ ಈಗ ಸೆಮಿಫೈನಲ್ ಹಾದಿ ಬಹುತೇಕ ಮುಕ್ತವಾಗಿದ್ದು, ಅದಕ್ಕಾಗಿ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಲೇ ಬೇಕಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಗೆಲ್ಲುವ ತಂಡ ಸೂಪರ್-8ರ ಗ್ರೂಪ್ 1 ರಿಂದ ಸೆಮಿಫೈನಲ್‌ಗೆ ಏರಲಿದೆ.
ಈ ಸೋಲಿನೊಂದಿಗೆ ಜಿಂಬಾಬ್ವೆ ತಂಡ ಸೂಪರ್-8 ಹಂತದಿಂದ ನಿರ್ಗಮಿಸಿದ್ದರೆ, ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಮಾರ್ಚ್ 1 ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಪ್ರಮುಖ ಪಂದ್ಯ ನಡೆಯಲಿದೆ. ಇದರಲ್ಲಿ ಗೆಲ್ಲುವ ತಂಡ ಸೆಮಿಫೈನಲ್‌ಗೇರಲಿದೆ. ಹಾಗೇನಾದರೂ ಮ್ಯಾಚ್ ಮಳೆಯಿಂದಾಗಿ ರದ್ದಾದರೆ, ನೆಟ್ ರನ್‌ರೇಟ್ ಆಧಾರದಲ್ಲಿ ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಏರಲಿದೆ.
ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ (ಚೆಪಾಕ್) ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅಬ್ಬರದ ಆಟವಾಡಿದರು. ಜಿಂಬಾಬ್ವೆ ನಾಯಕ ಸಿಕಂದರ್ ರಝಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಆದರೆ, ಇವರ ನಿರ್ಧಾರ ತಪ್ಪು ಎನ್ನುವಂತೆ ಭಾರತದ ಬ್ಯಾಟ್ಸ್‌ಮನ್‌ಗಳು ಆಟವಾಡಿದ್ದರಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 256 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಅಭಿಷೇಕ್ ಶರ್ಮಾ (55) ಮತ್ತು ಹಾರ್ದಿಕ್ ಪಾಂಡ್ಯ (55*) ಅವರ ಅರ್ಧಶತಕಗಳು ಭಾರತದ ಈ ದೊಡ್ಡ ಮೊತ್ತಕ್ಕೆ ಕಾರಣವಾದವು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ 2ನೇ ಗರಿಷ್ಠ ಮೊತ್ತ ಎನಿಸಿತ್ತು. 2007ರಲ್ಲಿ ಶ್ರೀಲಂಕಾ ತಂಡ ಬಾರಿದಿ 260 ರನ್‌ಗಳು ಗರಿಷ್ಠ ಮೊತ್ತ ಎನಿಸಿದೆ.
ಈ ಮೊತ್ತ ಬೆನ್ನಟ್ಟಲು ಹೋದ ಜಿಂಬಾಬ್ವೆ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ 22 ವರ್ಷದ ಬ್ರೇನ್ ಬೆನ್ನೆಟ್ ಹೋರಾಟ ತೋರಿದರು. ಆಕರ್ಷಕ ಇನ್ನಿಂಗ್ಸ್ ಆಡಿದ ಬೆನ್ನೆಟ್ 59 ಎಸೆತಗಳಲ್ಲಿ 6 ಸಿಕ್ಸರ್, 8 ಬೌಂಡರಿಗಳಿದ್ದ ಅಜೇಯ 97 ರನ್ ಬಾರಿಸಿದರು. ಆದರೆ, ಇವರಿಗೆ ಇನ್ನೊಂದು ಬದಿಯಿಂದ ಉತ್ತಮ ಸಾಥ್ ಲಭಿಸಲಿಲ್ಲ. 20 ಓವರ್‌ಗಳ ಆಟದಲ್ಲಿ ಜಿಂಬಾಬ್ವೆ 6 ವಿಕೆಟ್‌ಗೆ 184 ರನ್ ಬಾರಿಸಿ ಸೋಲು ಕಂಡಿತು. ಜಿಂಬಾಬ್ವೆ ಪರವಾಗಿ ಬೆನ್ನೆಟ್ ಅಲ್ಲದೆ, ನಾಯಕ ಸಿಕಂದರ್ ರಾಜಾ (31ರನ್) ಹಾಗೂ ಟಿ ಮರುಮಾನಿ (20) ಮಾತ್ರವೇ ಬೆನ್ನೆಟ್‌ಗೆ ಹೆಗಲು ಕೊಡುವ ಪ್ರಯತ್ನ ಮಾಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.