ಇದೀಗ ಶುಭ್‌ಮನ್ ಗಿಲ್ ಆರೋಗ್ಯದ ಕುರಿತಂತೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಚೆನ್ನೈ(ಅ.11): ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೀಗ ಗಿಲ್ ಆರೋಗ್ಯದ ಕುರಿತಂತೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಹೌದು, ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್ ಅವರಿಗೆ ಡೆಂಗ್ಯೂ ಜ್ವರ ಬಂದಿರುವುದು ದೃಢಪಟ್ಟಿತ್ತು. ಹೀಗಾಗಿ ಗಿಲ್ ಆಸ್ಪತ್ರೆಗೆ ದಾಖಲಾಗಿದ್ದರು. ಗಿಲ್ ಇದೀಗ ಸಾಕಷ್ಟು ಚುರುಕಾಗಿ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಸದ್ಯ ಶುಭ್‌ಮನ್ ಗಿಲ್, ಚೆನ್ನೈನ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದು, ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಗಿಲ್ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.
'ನನ್ನ ಶತಕ ಗಾಜಾದ ನನ್ನ ಅಣ್ಣ-ತಂಗಿಯರಿಗೆ ಅರ್ಪಣೆ': ಪಾಕ್ ಕ್ರಿಕೆಟಿಗ ರಿಜ್ವಾನ್
ಇದೀಗ ಶುಭ್‌ಮನ್ ಗಿಲ್ ಆರೋಗ್ಯದ ಕುರಿತಂತೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಅವರು ತುಂಬಾ ಚೆನ್ನಾಗಿ ಗುಣಮುಖರಾಗುತ್ತಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅದು ಮುನ್ನೆಚ್ಚರಿಕಾ ಕಾರಣದಿಂದಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಸದ್ಯ ಅವರೀಗ ಹೋಟೆಲ್‌ನಲ್ಲಿದ್ದಾರೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಈಗ ಅವರು ಸಾಕಷ್ಟು ಚೆನ್ನಾಗಿಯೇ ಚೇತರಿಸಿಕೊಂಡಂತೆ ಕಾಣಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಆಫ್ಘಾನಿಸ್ತಾನ ವಿರುದ್ದ ಕೂಡಾ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಇಶಾನ್ ಕಿಶನ್, ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಾದರೂ ಸಿಕ್ಕ ಅವಕಾಶವನ್ನು ಎಡಗೈ ಬ್ಯಾಟರ್ ಸದುಪಯೋಗಪಡಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ICC World Cup 2023: ಭಾರತ ಎದುರು ಟಾಸ್ ಗೆದ್ದ ಆಫ್ಘಾನ್ ಬ್ಯಾಟಿಂಗ್ ಆಯ್ಕೆ
ಆಫ್ಘಾನಿಸ್ತಾನ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಲಾಗಿದೆ.
ಆಫ್ಘಾನಿಸ್ತಾನ ಎದುರಿನ ಪಂದ್ಯಕ್ಕೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.