IND vs NZ ನ್ಯೂಜಿಲೆಂಡ್ ವಿರುದ್ಧ ಭಾರತದ ರನ್ ಸುನಾಮಿ: 720 ರನ್ ಸಿಡಿಸಿ ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ!

Published : Nov 22, 2026, 10:12 AM IST
Rishabh Pant

ಸಾರಾಂಶ

ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಒಂದೇ ಇನ್ನಿಂಗ್ಸ್‌ನಲ್ಲಿ ಮೊದಲ 7 ವಿಕೆಟ್‌ಗಳಿಗೆ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟದೊಂದಿಗೆ ಟೀಂ ಇಂಡಿಯಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ವೆಲ್ಲಿಂಗ್ಟನ್(ನ.22): ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಶುಭ್‌ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ ಹಲವು ದಾಖಲೆಗಳನ್ನು ಮುರಿದಿದ್ದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 368 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಭಾರತ 352 ರನ್‌ಗಳ ಬೃಹತ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಈ ಇನ್ನಿಂಗ್ಸ್‌ನಲ್ಲಿ ಭಾರತದ ಮೊದಲ ಏಳು ವಿಕೆಟ್‌ಗಳಿಗೂ 50 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಜೊತೆಯಾಟ ದಾಖಲಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೊದಲ ಏಳು ವಿಕೆಟ್‌ಗಳಿಗೆ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ದಾಖಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ರಾಹುಲ್-ಜೈಸ್ವಾಲ್‌ನಿಂದ ಆರಂಭವಾದ ರನ್ ಮಳೆ

ಭಾರತದ ಮೊದಲ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 130 ರನ್‌ಗಳ ಜೊತೆಯಾಟ ನೀಡಿದರು. ಎರಡನೇ ದಿನದ ಕೊನೆಯಲ್ಲಿ ಜೈಸ್ವಾಲ್ 85 ರನ್ ಗಳಿಸಿ ಔಟಾದರು. ಬಳಿಕ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಎರಡನೇ ವಿಕೆಟ್‌ಗೆ 165 ರನ್ ಸೇರಿಸಿದರು. ರಾಹುಲ್ 136 ರನ್ ಗಳಿಸಿದರೆ, ಪಡಿಕ್ಕಲ್ 80 ರನ್‌ಗಳ ಕೊಡುಗೆ ನೀಡಿದರು. ನಂತರ ನಾಯಕ ಶುಭ್‌ಮನ್ ಗಿಲ್ ಕ್ರೀಸ್‌ಗೆ ಬಂದರು. ರಾಹುಲ್ ಮತ್ತು ಗಿಲ್ ಮೂರನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ನೀಡಿದರು. ರಾಹುಲ್ 136 ರನ್ ಗಳಿಸಿ ಔಟಾದ ಬಳಿಕವೂ ಭಾರತದ ರನ್ ವೇಗ ಕಡಿಮೆಯಾಗಲಿಲ್ಲ.

ಗಿಲ್-ಪಂತ್ ಶತಕದ ಜೊತೆಯಾಟ

ರಿಷಭ್ ಪಂತ್ ಕ್ರೀಸ್‌ಗೆ ಬಂದ ಬಳಿಕ ಗಿಲ್ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟ ದಾಖಲಿಸಿದರು. ಮೂರನೇ ದಿನದ ಕೊನೆಯಲ್ಲಿ ಗಿಲ್ ಔಟಾದರೂ, ಭಾರತದ ಬ್ಯಾಟಿಂಗ್ ಅಬ್ಬರ ಮುಂದುವರಿಯಿತು. ನಾಲ್ಕನೇ ದಿನವೂ ಪಂತ್ ಮತ್ತು ನೈಟ್‌ವಾಚ್‌ಮನ್ ಅಂಶುಲ್ ಕಾಂಬೋಜ್ ವೇಗವಾಗಿ ರನ್ ಗಳಿಸಿದರು. ದಿನದ ಮೊದಲ ಗಂಟೆಯೊಳಗೆ ಈ ಜೋಡಿ 75 ರನ್ ಸೇರಿಸಿತು. ಈ ಜೋಡಿ 68 ರನ್‌ಗಳ ಜತೆಯಾಟವಾಡಿತು. ಕಾಂಬೋಜ್ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಅವರ ವಿಕೆಟ್ ಪತನದ ಬಳಿಕ ಧ್ರುವ್ ಜುರೇಲ್ ಕ್ರೀಸ್‌ಗೆ ಬಂದರು. ಜುರೇಲ್ ಹಾಗೂ ಪಂತ್ ಆರನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ದಾಖಲಾಗಿತ್ತು. ಊಟದ ವಿರಾಮದ ಸಮಯದಲ್ಲಿ ಪಂತ್ 128 ರನ್ ಗಳಿಸಿ ಔಟಾದರು. ನಂತರ ಜುರೇಲ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ 54 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಭಾರತ 700 ರನ್‌ಗಳ ಗಡಿ ದಾಟಿತು.

ನ್ಯೂಜಿಲೆಂಡ್ ವಿರುದ್ಧದ ಅತಿ ದೊಡ್ಡ ಟೆಸ್ಟ್ ಸ್ಕೋರ್

ಭಾರತದ 720/9 ಡಿಕ್ಲೇರ್ ಮೊತ್ತವು ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಾದ ಅತ್ಯಧಿಕ ಇನ್ನಿಂಗ್ಸ್ ಸ್ಕೋರ್ ಆಗಿದೆ. ಇದಕ್ಕೂ ಮೊದಲು 1995ರಲ್ಲಿ ಇದೇ ಬೇಸಿನ್ ರಿಸರ್ವ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 660 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದೀಗ ಭಾರತ ಆ ದಾಖಲೆಯನ್ನು ಹಿಂದಿಕ್ಕಿದೆ.

ನ್ಯೂಜಿಲೆಂಡ್ ನೆಲದಲ್ಲಿ ದಾಖಲಾದ ಅತ್ಯಧಿಕ ಟೆಸ್ಟ್ ತಂಡದ ಮೊತ್ತವೂ ಭಾರತದ ಪಾಲಾಗಿದೆ. 2019ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 715 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ ಇದೀಗ ಆ ದಾಖಲೆಯನ್ನು ಮುರಿದಿದೆ.

ಒಂದಕ್ಕಿಂತ ಹೆಚ್ಚು ಬಾರಿ 7ಕ್ಕೂ ಹೆಚ್ಚು 50+ ಜೊತೆಯಾಟ

ಒಂದೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು 50 ರನ್‌ಗಳ ಜೊತೆಯಾಟಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ದಾಖಲಿಸಿದ ಮೊದಲ ತಂಡ ಎಂಬ ಮತ್ತೊಂದು ಸಾಧನೆಯನ್ನೂ ಭಾರತ ಮಾಡಿದೆ. ಈ ಹಿಂದೆ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಒಂದೇ ಇನ್ನಿಂಗ್ಸ್‌ನಲ್ಲಿ ಎಂಟು 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟಗಳನ್ನು ದಾಖಲಿಸಿತ್ತು.

ಇದೀಗ ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲೂ ಭಾರತ ಈ ಸಾಧನೆಯನ್ನು ಪುನರಾವರ್ತಿಸಿದೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಬಿಜೆಪಿಗೆ ಸೇರ್ಪಡೆ! ಒಬಿಸಿ ಮೋರ್ಚಾ ಸಮಿತಿಯಲ್ಲಿ ಅವರ ಸ್ಥಾನ ಏನು?
ರೆಸ್ಟೋರೆಂಟ್‌ನಲ್ಲಿ ಕೆಲಸ, ಕೊರೊನಾದಲ್ಲಿ ಸಂಕಷ್ಟ: ಆಸ್ಟ್ರೇಲಿಯಾ ಗೆಲುವಿನ ಹೀರೋ ಆದ ಭಾರತದ ನಿಖಿಲ್ ಚೌಧರಿ!