Ind vs WI: ಟೀಂ ಇಂಡಿಯಾ ಆಯ್ಕೆಯಲ್ಲಿ ಮತ್ತೊಮ್ಮೆ ಎಡವಿತೇ ಬಿಸಿಸಿಐ..?

By Suvarna News  |  First Published Jan 28, 2022, 2:30 PM IST

* ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ

* ಬಿಸಿಸಿಐ ಆಯ್ಕೆ ಸಮಿತಿಯು ಕೆಲವು ಎಡವಟ್ಟುಗಳನ್ನು ಮಾಡಿತೆ ಎನ್ನುವ ಅನುಮಾನ ಕಾಡಲಾರಂಭಿಸಿದೆ

* ಪೃಥ್ವಿ ಶಾ ಅವರನ್ನು ಕಡೆಗಣಿಸಿದ ಬಿಸಿಸಿಐ ಆಯ್ಕೆ ಸಮಿತಿ


ನವದೆಹಲಿ(ಜ.28): ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಭಾರತ ತಂಡ ಹಾಗೂ ಬಿಸಿಸಿಐ (BCCI) ಆಯ್ಕೆಗಾರರಿಗೆ ಪಾಠವಾಗಬೇಕಿತ್ತು. ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಯಿಂದಾದರೂ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಬೇಕಿತ್ತು. ಆದರೆ ಆಯ್ಕೆ ಸಮಿತಿ ಮತ್ತೆ ಕೆಲ ಎಡವಟ್ಟುಗಳನ್ನು ಮಾಡಿದಂತಿದೆ. ಬುಧವಾರ ವಿಂಡೀಸ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡಕ್ಕೆ ಕೆಲ ಅಚ್ಚರಿಯ ಆಯ್ಕೆಗಳನ್ನು ನಡೆಸಲಾಗಿದೆ. ಕುಲ್ದೀಪ್‌ ಯಾದವ್‌ (Kuldeep Yadav) ಹಾಗೂ ದೀಪಕ್‌ ಹೂಡಾ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೂ ಟೀಂ ಇಂಡಿಯಾದಲ್ಲಿ (Team India) ಸ್ಥಾನ ನೀಡಲಾಗಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಆಡಿದ್ದ ರಾಹುಲ್‌ ಚಹರ್‌, ವರುಣ್‌ ಚಕ್ರವರ್ತಿ ದಿಢೀರನೆ ನಾಪತ್ತೆಯಾಗಿದ್ದು, ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ರನ್ನು ಕರೆತರಲಾಗಿದೆ.

ಕುಲ್ದೀಪ್‌ 2021ರ ಜುಲೈನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ ಆಡಿಲ್ಲ. ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇನ್ನು ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ಒಂದು ಶತಕ ಬಾರಿಸಿದ್ದನ್ನು ಬಿಟ್ಟರೆ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ಹೂಡಾ ತೋರಿಲ್ಲ. ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಮಿಂಚಿದರೂ, ಐಪಿಎಲ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ್ದರು.

Tap to resize

Latest Videos

ಪೃಥ್ವಿ ಶಾ ಎಲ್ಲಿ?

ಭಾರತ ತಂಡದ ಭವಿಷ್ಯದ ತಾರೆ ಎಂದೇ ಕರೆಯಲ್ಪಡುತ್ತಿದ್ದ ಅಂಡರ್‌-19 ವಿಶ್ವಕಪ್‌ ವಿಜೇತ ನಾಯಕ ಪೃಥ್ವಿ ಶಾ ಅವರನ್ನು ಆಯ್ಕೆಗಾರರು ಸಂಪೂರ್ಣವಾಗಿ ಮರೆತಂತಿದೆ. ಕಳೆದ ವರ್ಷ ಲಂಕಾ ಪ್ರವಾಸದ ಬಳಿಕ ಅವರು ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಗಾಯಗೊಂಡಿದ್ದ ಶುಭ್‌ಮನ್‌ ಗಿಲ್‌ ಬಗ್ಗೆ ಬಿಸಿಸಿಐ ಮಾಹಿತಿಯನ್ನೇ ನೀಡಿಲ್ಲ.

ಮತ್ತೆ ಬೆಂಚ್‌ನಲ್ಲೇ ಋುತುರಾಜ್‌?

ಕಳೆದ ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ್ದ ಋುತುರಾಜ್‌ ಗಾಯಕ್ವಾಡ್‌ರನ್ನು ಟಿ20 ತಂಡಕ್ಕೆ ಪರಿಗಣಿಸಿಲ್ಲ. ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗುವುದು ಅನುಮಾನ. ರೋಹಿತ್‌, ಧವನ್‌ ಕಾಯಂ ಆರಂಭಿಕರು. ರಾಹುಲ್‌ ಸಹ ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ಋುತುರಾಜ್‌ ಮತ್ತೆ ಬೆಂಚ್‌ ಕಾಯಬೇಕಾಗಬಹುದು.

ವೇಗದ ಬೌಲಿಂಗ್‌ ಆಲ್ರೌಂಡರ್‌ ಬೇಡವೇ?

ಹಾರ್ದಿಕ್‌ ಪಾಂಡ್ಯ(Hardik Pandya) ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಅವರು ಬೌಲ್‌ ಮಾಡುವವರೆಗೂ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನ. ಅವರ ಬದಲು ವೆಂಕಟೇಶ್‌ ಅಯ್ಯರ್‌ರನ್ನು ದ.ಆಫ್ರಿಕಾಕ್ಕೆ ಕರೆದೊಯ್ಯಲಾಗಿತ್ತು. ಆದರೆ ವಿಂಡೀಸ್‌ ವಿರುದ್ಧದ ಏಕದಿನ ಸರಣಿಗೆ ವೆಂಕಿ ಅಯ್ಯರ್‌ ಅಯ್ಕೆಯಾಗಿಲ್ಲ. ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌ರನ್ನೇ ಆಲ್ರೌಂಡರ್‌ಗಳನ್ನಾಗಿ ಬೆಳೆಸುವ ಯೋಜನೆ ಇರಬಹುದು ಎನ್ನಲಾಗಿದೆ. ಆದರೂ ಹಾರ್ದಿಕ್‌ ಇಲ್ಲವೇ ವೆಂಕಿ ಅವರಂಥ ಬ್ಯಾಟಿಂಗ್‌ ಆಲ್ರೌಂಡರ್‌ಗಳ ಅಗತ್ಯ ತಂಡಕ್ಕೆ ಇದ್ದೇ ಇರಲಿದೆ.

ಕೃನಾಲ್‌ ಟ್ವೀಟರ್‌ ಹ್ಯಾಕ್‌: ಬಿಟ್‌ ಕಾಯಿನ್ಸ್‌ಗೆ ಬೇಡಿಕೆ

ನವದೆಹಲಿ: ಭಾರತದ ಆಲ್ರೌಂಡರ್‌ ಆಟಗಾರ ಕೃನಾಲ್‌ ಪಾಂಡ್ಯ (Krunal Pandya) ಅವರ ಟ್ವೀಟರ್‌ ಖಾತೆ ಹ್ಯಾಕ್‌ ಮಾಡಿ, ಬಿಟ್‌ ಕಾಯಿನ್ಸ್‌ಗೆ ಬೇಡಿಕೆ ಇಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಬೆಳಗ್ಗೆ 7.31ರ ವೇಳೆ ಖಾತೆ ಹ್ಯಾಕ್‌ ಮಾಡಿದ ದುಷ್ಕರ್ಮಿ ಕ್ರಿಪ್ಟೋಕರೆನ್ಸಿ ನೀಡಿದರೆ ಖಾತೆಯನ್ನು ಮಾರಾಟ ಮಾಡುವುದಾಗಿ ಬೇಡಿಕೆ ಇಟ್ಟಿದ್ದಾನೆ. 

ವಿರಾಟ್ ಕೊಹ್ಲಿಯಷ್ಟು ರೋಹಿತ್ ಆಕ್ರಮಣಕಾರಿಯಲ್ಲವೆಂದ ರವಿಶಾಸ್ತ್ರಿ..!

ಹ್ಯಾಕರ್‌ ಕೃನಾಲ್‌ ಖಾತೆಯ ಮೂಲಕ ಸುಮಾರು 10 ಟ್ವೀಟ್‌ಗಳನ್ನು ಮಾಡಿದ್ದು, ಕೆಲ ಖಾತೆಗಳ ಟ್ವೀಟ್‌ಗಳನ್ನು ರೀಟ್ವೀಟ್‌ ಮಾಡಿ, ಕಮೆಂಟ್‌ ಕೂಡಾ ಮಾಡಿದ್ದಾನೆ. ಕೆಲ ಸಮಯದ ಬಳಿಕ ಟ್ವೀಟ್‌ಗಳನ್ನು ಅಳಿಸಿ ಹಾಕಲಾಗಿದೆ. ಕೃನಾಲ್‌ ಅವರು ಜನವರಿ 18ರಂದು ಕೊನೆಯ ಬಾರಿ ಟ್ವೀಟ್‌ ಮಾಡಿದ್ದರು.

click me!