ಇಂದು IND vs WI 3ನೇ T20, ಸ್ಟಾರ್ ಆಟಗಾರನಿಗೆ ಕೊಕ್! ಪಿಚ್ ರಿಪೋರ್ಟ್ ಹೇಗಿದೆ?

Published : Oct 11, 2026, 10:57 AM IST
Team India BCCI

ಸಾರಾಂಶ

ರಾಂಚಿಯ ಹೈಸ್ಕೋರಿಂಗ್ ಪಂದ್ಯದ ನಂತರ ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳು 3ನೇ ಟಿ20 ಪಂದ್ಯಕ್ಕಾಗಿ ಬ್ಯಾಟರ್‌ಗಳ ಸ್ವರ್ಗ ಇಂದೋರ್‌ಗೆ ತಲುಪಿವೆ. ಸಣ್ಣ ಬೌಂಡರಿಗಳನ್ನು ಹೊಂದಿರುವ ಹೋಲ್ಕರ್‌ ಕ್ರೀಡಾಂಗಣದಲ್ಲಿ ಮತ್ತೊಂದು ರನ್ ಮಳೆಯಾಗುವ ನಿರೀಕ್ಷೆಯಿದೆ. ಭಾರತ ತಂಡದಲ್ಲಿ ಶಿವಂ ದುಬೆ ಬದಲಿಗೆ ನಿತೀಶ್‌ ರೆಡ್ಡಿ ಆಡುವ ಸಾಧ್ಯತೆಯಿದೆ.

ಇಂದೋರ್‌: ರಾಂಚಿಯಲ್ಲಿ ಧಾರಾಳವಾಗಿ ರನ್‌ ಬಿಟ್ಟುಕೊಟ್ಟಿದ್ದ ಭಾರತ ಹಾಗೂ ವೆಸ್ಟ್‌ಇಂಡೀಸ್‌ನ ಬೌಲರ್‌ಗಳು ದಣಿವಾರಿಸಿಕೊಳ್ಳುವ ಮೊದಲೇ ಟಿ20 ಸರಣಿಯು ‘ಬ್ಯಾಟರ್‌ಗಳ ಸ್ವರ್ಗ’ ಇಂದೋರ್‌ಗೆ ತಲುಪಿದೆ. ಎರಡು ದಿನಗಳ ಹಿಂದಷ್ಟೇ ರಾಂಚಿಯಲ್ಲಿ ನಡೆದ 2ನೇ ಪಂದ್ಯದಲ್ಲಿ 38.3 ಓವರಲ್ಲಿ ಬರೋಬ್ಬರಿ 501 ರನ್‌ ದಾಖಲಾಗಿತ್ತು. ಇದರಲ್ಲಿ 352 ರನ್‌ ಬೌಂಡರಿಗಳ ಮೂಲಕವೇ ಹರಿದುಬಂದಿತ್ತು. ಭಾನುವಾರ ಇಂದೋರ್‌ನಲ್ಲಿಯೂ ಬೌಲರ್‌ಗಳು ಕಷ್ಟ ಅನುಭವಿಸಿದರೆ ಅಚ್ಚರಿಯಿಲ್ಲ!

ಭಾರತ-ವಿಂಡೀಸ್‌ 3ನೇ ಟಿ20, ಸರಣಿಯಲ್ಲಿ ಮುನ್ನಡೆಗಾಗಿ ಉಭಯ ತಂಡ ಸೆಣಸು

ಸಣ್ಣ ಬೌಂಡರಿಗಳನ್ನು ಹೊಂದಿರುವ ಇಲ್ಲಿನ ಹೋಲ್ಕರ್‌ ಕ್ರೀಡಾಂಗಣದಲ್ಲಿ ಕಳೆದ 2 ವರ್ಷದಲ್ಲಿ ಯಾವುದೇ ಟಿ20 ಪಂದ್ಯ ನಡೆದಿಲ್ಲ. ಆದರೆ ಇಲ್ಲಿ ನಡೆದ ಕಳೆದ 3 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 399, 385 ಹಾಗೂ 337 ರನ್‌ ದಾಖಲಾಗಿದೆ. ಇಲ್ಲಿ ಕೊನೆ ಬಾರಿಗೆ ಐಪಿಎಲ್‌ ಪಂದ್ಯ ನಡೆದಿದ್ದು 8 ವರ್ಷ ಹಿಂದೆ. ಆಗ 245 ಹಾಗೂ 214 ರನ್‌ ದಾಖಲಾಗಿತ್ತು. ಇನ್ನು, 2017ರಲ್ಲಿ ಇದೇ ಮೈದಾನದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 260 ರನ್‌ ಚಚ್ಚಿತ್ತು. ಆಗಿನ್ನೂ ಟಿ20 ಕ್ರಿಕೆಟ್‌ ಇಷ್ಟರ ಮಟ್ಟಿಗೆ ಕೇವಲ ‘ಬ್ಯಾಟರ್‌’ಗಳ ಕ್ರೀಡೆಯಾಗಿ ಬದಲಾಗಿರಲಿಲ್ಲ. ಹೀಗಾಗಿ, ಸದ್ಯ ಚಾಲ್ತಿಯಲ್ಲಿರುವ ಸರಣಿಯಲ್ಲಿ ಬ್ಯಾಟರ್‌ಗಳು ರನ್‌ ಹಬ್ಬ ಆಚರಿಸುತ್ತಿರುವುದನ್ನು ನೋಡಿದಾಗ, ಇಂದೋರ್‌ನಲ್ಲೂ ಅದು ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ.

ದುಬೆಗೆ ಕೊಕ್‌?

ಈ ಪಂದ್ಯಕ್ಕೂ ತಂಡದಲ್ಲಿ ವೈಭವ್‌ ಸೂರ್ಯವಂಶಿಗೆ ಸ್ಥಾನ ಸಿಗುವುದು ಅನುಮಾನ. ಆದರೆ ಶಿವಂ ದುಬೆಯನ್ನು ಹೊರಗಿಟ್ಟು ನಿತೀಶ್‌ ರೆಡ್ಡಿಯನ್ನು ಆಡಿಸುವ ಸಾಧ್ಯತೆ ಇದೆ. ಇನ್ನುಳಿದಂತೆ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ.ಕಳೆದ ಪಂದ್ಯದಲ್ಲಿ ಮಯಾಂಕ್‌ ಯಾದವ್‌ರ ಸ್ಪೆಲ್‌ ಪೂರ್ತಿಗೊಳಿಸದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಾಯಕ ಶ್ರೇಯಸ್‌ ಅಯ್ಯರ್‌ ಬೌಲರ್‌ಗಳ ನಿರ್ವಹಣೆಯಲ್ಲಿ ಇನ್ನಷ್ಟು ಜಾಗರೂಕತೆ ತೋರಬೇಕಿದೆ. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ದಾಖಲೆಯ ರನ್‌ ಚೇಸ್‌ ಮಾಡಿದ ವಿಂಡೀಸ್‌, ಅದೇ ತಂಡವನ್ನು ಮುಂದುವರಿಸುವ ಸಾಧ್ಯತೆಯೇ ಹೆಚ್ಚು.

ಇಂದೋರ್‌ ಪಿಚ್‌ ಬ್ಯಾಟರ್‌ಗಳ ಸ್ವರ್ಗ, ಮತ್ತೊಂದು ಹೈಸ್ಕೋರಿಂಗ್‌ ಪಂದ್ಯ ನಿರೀಕ್ಷೆ

ಸಂಜೆ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿರುವ ಕಾರಣ, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ಇಚ್ಛಿಸಬಹುದು. ಆದರೆ ಇಲ್ಲಿ ಕಳೆದ 4 ಬಾರಿ ಮೊದಲು ಬ್ಯಾಟ್‌ ಮಾಡಿ 200ಕ್ಕೂ ಹೆಚ್ಚು ರನ್‌ ದಾಖಲಿಸಿದ ತಂಡಗಳು, ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ, ಟಾಸ್‌ ಗೆಲ್ಲುವ ತಂಡದ ಆಯ್ಕೆ ಬಗ್ಗೆ ಕುತೂಹಲವಿದೆ.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಹಾಟ್‌ಸ್ಟಾರ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈನಿಂದ ಗೋವಾಗೆ ಶಿಫ್ಟ್ ಆದ ಅರ್ಜುನ್ ತೆಂಡೂಲ್ಕರ್‌ಗೆ ಶಾಕ್, ಸಚಿನ್ ಪುತ್ರನ ಹೆಸರೇ ಇಲ್ಲ
250 ರನ್‌ಗಳ ಗುರಿಯನ್ನೂ ತಡೆಯಲಾಗಲಿಲ್ಲ! ವಿಂಡೀಸ್ ಎದುರಿನ ಸೋಲಿನ ಬೆನ್ನಲ್ಲೇ ಕೋಚ್ ಮೇಲೆ ತಿರುಗಿಬಿದ್ದ ಸುನಿಲ್ ಗವಾಸ್ಕರ್..!