ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯನ್ನು ಸೋಲಿನಿಂದ ಆರಂಭಿಸಿದ ಟೀಂ ಇಂಡಿಯಾ, ಇದೀಗ 2ನೇ ಪಂದ್ಯದಲ್ಲೂ ಮುಗ್ಗರಿಸಿದೆ. ಕಳಪೆ ಬ್ಯಾಟಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಹಲವು ಆತಂಕಕ್ಕೂ ಕಾರಣವಾಗಿದೆ.
ಗಯಾನ(ಆ.06) ಕ್ರಿಕೆಟ್ ಜಗತ್ತಿನಲ್ಲಿ ಟೀಂ ಇಂಡಿಯಾದ ಹಿಡಿತ ಸಡಿಲಗೊಳ್ಳುತ್ತಿದೆ ಅನ್ನೋ ಮಾತುಗಳಿಗೆ ಇತ್ತೀಚೆಗಿನ ಪ್ರದರ್ಶನಗಳೇ ಸಾಕ್ಷಿಗಳಾಗಿದೆ. ಹಲವು ದಶಕಗಳಿಂದ ಭಾರತದ ಪ್ರಮುಖ ಶಕ್ತಿ ಬ್ಯಾಟಿಂಗ್. ಇತ್ತೀಚೆಗೆ ಬೌಲಿಂಗ್ ಕೂಡ ಅತ್ಯುತ್ತಮ ಗುಣಮಟ್ಟ ಪಡೆದುಕೊಂಡಿತ್ತು. ಆದರೆ ಇದೀಗ ಬ್ಯಾಟಿಂಗ್ ಹಾಗೂ ಬೌಲಿಂಗ್ ನೆಲಕಚ್ಚಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲೂ ಭಾರತ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾಗೆ ಸತತ 2ನೇ ಸೋಲು ಇದಾಗಿದೆ. ಭಾರತ ನೀಡಿದ 153 ರನ್ ಟಾರ್ಗೆಟನ್ನು 18.5 ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ ಗುರಿ ತಲುಪಿತು. 2 ವಿಕೆಟ್ ರೋಚಗ ಗೆಲುವು ದಾಖಲಿಸಿದ ವಿಂಡೀಸ್ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದಿತ್ತು. ಬೃಹತ್ ಮೊತ್ತ ಪೇರಿಸಿ ಗೆಲುವಿನ ಲೆಕ್ಕಾಚಾರ ಹಾಕಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆಮಾಡಿಕೊಂಡು ಕಣಕ್ಕಿಳಿಯಿತು. ಆದರೆ ಬ್ಯಾಟಿಂಗ್ ಠುಸ್ ಆಗಿತ್ತು. ತಿಲಕ್ ವರ್ಮಾ ಸಿಡಿಸಿದ ಹಾಫ್ ಸೆಂಚುರಿ ಹೊರತುಪಡಿಸಿದರೆ ಇತರರಿಂದ ನಿರೀಕ್ಷಿತ ಹೋರಾಟ ಮೂಡಿಬರಲಿಲ್ಲ. ಕಾರಣ 7 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿತು.
undefined
ನಾಟಕದ ಬಳಿಕ ವರಸೆ ಬದಲಿಸಿದ ಪಾಕಿಸ್ತಾನ; ಏಕದಿನ ವಿಶ್ವಕಪ್‌ಗೆ ಭಾರತಕ್ಕೆ ತಂಡ ಕಳುಹಿಸಲು ನಿರ್ಧಾರ!
153 ರನ್ ಸುಲಭ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಹಾರ್ದಿಕ್ ಪಾಂಡ್ಯ ಹಾಗೂ ಅರ್ಶದೀಪ್ ಸಿಂಗ್ ದಾಳಿಗೆ ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ ಹಾಗೂ ಜಾನ್ಸನ್ ಚಾರ್ಲ್ಸ್ ವಿಕೆಟ್ ಕೈಚೆಲ್ಲಿದರು. ಆದರೆ ನಿಕೋಲಸ್ ಪೂರನ್ ಹಾಗೂ ನಾಯಕ ರೋವ್ಮನ್ ಪೊವೆಲ್ ಆಟದಿಂದ ವೆಸ್ಟ್ ಇಂಡೀಸ್ ಚೇತರಿಸಿಕೊಂಡಿತು.
ಪೊವೆಲ್ 21 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ವಿಂಡೀಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಪೂರನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.ಪೂರನ್ 40 ಎಸೆತದಲ್ಲಿ 67 ರನ್ ಸಿಡಿಸಿ ನಿರ್ಗಮಿಸಿದರು.ಪೂರನ್ ಆಟದಿಂದ ವಿಂಡೀಸ್ ಸುಲಭ ಗೆಲುವಿನತ್ತ ದಾಪುಗಾಲಿಟ್ಟಿತು. ಆದರೆ ಪೂರನ್ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು.
ರೋಮಾರಿಯೋ ಶೆಫರ್ಡ್ ರನ್‌ಔಟ್‌ಗೆ ಬಲಿಯಾದರು.ಜೇಸನ್ ಹೋಲ್ಡರ್ ಡಕೌಟ್ ಆದರೆ, ಶಿಮ್ರೊನ್ ಹೆಟ್ಮೆಯರ್ 22 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಗೆಲುವಿಗೆ ಅಂತಿಮ 24 ಎಸೆತದಲ್ಲಿ 24 ರನ್ ಅವಶ್ಯಕತೆ ಇತ್ತು. ಇತ್ತ ಭಾರತ ಪ್ರಮುಖ 8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಭಾರತ ಗೆಲುವಿಗೆ ಕೇವಲ 2 ವಿಕೆಟ್ ಅವಶ್ಯಕತೆ ಇತ್ತು.
ಅಕೀಲ್ ಹುಸೈನ್ ಹಾಗೂ ಅಲ್ಜಾರಿ ಜೊಸೆಫ್ ಹೋರಾಟದಿಂದ ವೆಸ್ಟ್ ಇಂಡೀಸ್ ತಿರುಗೇಟು ನೀಡುವ ಪ್ರಯತ್ನ ಮಾಡಿತು. ಜೊಸೆಫ್ ಸಿಡಿಸಿದ ಸಿಕ್ಸರ್ ಹಾಗೂ ಹುಸೈನ್ ಸಿಡಿಸಿದ ಬೌಂಡರಿಯಿಂದ ಪಂದ್ಯ ವಿಂಡೀಸ್ ಕಡೆ ವಾಲಿತು. 18.5 ನೇ ಓವರ್‌ನಲ್ಲಿ ಅಕೀಲ್ ಹುಸೈನ್ ಮತ್ತೊಂದು ಬೌಂಡರಿ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ 2 ವಿಕೆಟ್ ರೋಚಕ ಗೆಲುವು ದಾಖಲಿಸಿತು.