
ಜೋಹಾನ್ಸ್‌ಬರ್ಗ್(ಡಿ.17): ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ (Team India) ಗುರುವಾರ ದಕ್ಷಿಣ ಆಫ್ರಿಕಾ ತಲುಪಿದ್ದು, ಕೋವಿಡ್ (COVID 19) ಮುನ್ನೆಚ್ಚರಿಕೆ ಕ್ರಮವಾಗಿ ಒಂದು ದಿನ ಕ್ವಾರಂಟೈನ್‌ಗೆ ಒಳಗಾಗಲಿದೆ. ಮುಂಬೈನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ ಆಟಗಾರರು ಗುರುವಾರ ಬೆಳಗ್ಗೆ ಅಲ್ಲಿಂದಲೇ ನೇರವಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಆಟಗಾರರು ಅಲ್ಲಿ 44 ದಿನಗಳ ಕಾಲ ಕಠಿಣ ಬಯೋ ಬಬಲ್‌ನಲ್ಲಿ (Bio-Bubble) ಇರಲಿದ್ದಾರೆ. ಭಾರತ ಆಟಗಾರರು ದಕ್ಷಿಣ ಆಫ್ರಿಕಾ ತಲುಪಿದ (India Tour of South Africa) ಸುದ್ದಿಯನ್ನು ಬಿಸಿಸಿಐ (BCCI) ಟ್ವೀಟ್ ಮೂಲಕ ತಿಳಿಸಿದ್ದು, ತಜ್ಞ ಆಟಗಾರ ಚೇತೇಶ್ವರ ಪೂಜಾರ, ವೇಗಿ ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್ (Shreyas Iyer) ಸೇರಿದಂತೆ ಇತರೆ ಆಟಗಾರರ ಫೋಟೋವನ್ನು ಅಪ್‌ಲೋಡ್ ಮಾಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸಲ್ಲಿ ಭಾರತ ತಂಡ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಪಂದ್ಯಗಳನ್ನು ಆಡಲಿದೆ. ಡಿಸೆಂಬರ್ 26ರಿಂದ ಸೆಂಚೂರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಜನವರಿ 19ರಿಂದ ಏಕದಿನ ಸರಣಿಗೆ ಚಾಲನೆ ದೊರೆಯಲಿದ್ದು, ಏಕದಿನ ತಂಡವನ್ನು ರೋಹಿತ್ ಶರ್ಮಾ(Rohit Sharma) ಮುನ್ನಡೆಸಲಿದ್ದಾರೆ. ಆದರೆ, ಗಾಯದ ಸಮಸ್ಯೆಯ ಕಾರಣ ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಏಕದಿನ ಸರಣಿ ಆರಂಭದ ವೇಳೆಗೆ ರೋಹಿತ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.
ಭಾರತ ತಂಡವು ಇದುವರೆಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಇದೀಗ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ಟೆಸ್ಟ್ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಟೆಸ್ಟ್ ಕ್ರಿಕೆಟ್ ತಂಡವು, ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ. ರೋಹಿತ್ ಶರ್ಮಾ ಬದಲಿಗೆ ಪ್ರಿಯಾಂಕ್ ಪಾಂಚಲ್ ಟೀಂ ಇಂಡಿಯಾದಲ್ಲಿ ಮೊದಲ ಬಾರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶುಭ್‌ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಕನ್ನಡದ ಜೋಡಿಯಾದ ಮಯಾಂಕ್ ಅಗರ್‌ವಾಲ್ (Mayank Agarwal) ಹಾಗೂ ಕೆ.ಎಲ್ ರಾಹುಲ್ (KL Rahul) ಹರಿಣಗಳ ನಾಡಿನಲ್ಲಿ ಟೆಸ್ಟ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಫಾರ್ಮ್ ಕೊರತೆ ಅನುಭವಿಸುತ್ತಿರುವ ಅಜಿಂಕ್ಯ ರಹಾನೆ (Ajinkya Rahane) ಹಾಗೂ ಚೇತೇಶ್ವರ್ ಪೂಜಾರ ಅವರ ಪಾಲಿಗೆ ಈ ಸರಣಿ ಸಾಕಷ್ಟು ಮಹತ್ವದ್ದೆನಿಸಿದೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದ ಭಾರತ ಟೆಸ್ಟ್ ತಂಡ ಹೀಗಿದೆ ನೋಡಿ:
ವಿರಾಟ್ ಕೊಹ್ಲಿ(ನಾಯಕ), ಪ್ರಿಯಾಂಕ್ ಪಾಂಚಲ್, ಕೆ. ಎಲ್. ರಾಹುಲ್, ಮಯಾಂಕ್ ಅಗರ್‌ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ಕೆ.ಎಲ್.ರಾಹುಲ್ ಆಕ್ರಮಣಕಾರಿ ಆಟಗಾರ: ವಿವಿಎಸ್ ಲಕ್ಷ್ಮಣ್
ನವದೆಹಲಿ: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಭಾರತೀಯ ಆಟಗಾರ ಕೆ.ಎಲ್.ರಾಹುಲ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಕೊಂಡಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಶೋವೊಂದರಲ್ಲಿ ಮಾತನಾಡಿದ ಅವರು, ‘ರಾಹುಲ್ ಅಧ್ಭುತ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಶುಭ್‌ಮನ್ ಗಿಲ್ ಮತ್ತು ಮಯಾಂಕ್ ಅಗರ್‌ವಾಲ್ ಗಾಯಗೊಂಡಿದ್ದರಿಂದ ರಾಹುಲ್‌ಗೆ ಅವಕಾಶ ನೀಡಲಾಯಿತು. ಅವರು ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಂಡರು ಎಂದಿದ್ದಾರೆ.
India Tour of South Africa: ಹರಿಣಗಳ ನಾಡಿಗೆ ಹಾರಿದ ಟೀಂ ಇಂಡಿಯಾ..!
‘ರಾಹುಲ್ ಆಕ್ರಮಣಕಾರಿ ಬ್ಯಾಟ್ಸ್‌ಮನ್. ಅವರು ಸ್ಟ್ರೋಕ್ ಆಟಗಾರ. ಆದರೆ ನೀವು ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಬೇಕಾದರೆ, ನಿಮ್ಮ ಆಫ್ ಸ್ಟಂಪ್ ಎಲ್ಲಿದೆ ಎಂಬುದು ನಿಮಗೆ ತಿಳಿದಿರಬೇಕು. ಇಂಗ್ಲೆಂಡ್ ಸರಣಿಯಲ್ಲಿ ಅದನ್ನು ನಾವು ನೋಡಿದ್ದೇವೆ. ಅವರು ತುಂಬಾ ಎಸೆತಗಳನ್ನು ಆಡದೆ ಬಿಡುತ್ತಿದ್ದರು’ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.