Ind vs SA: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ..!

By Kannadaprabha NewsFirst Published Sep 28, 2022, 10:43 AM IST
Highlights

ತಿರುವನಂತಪುರಂನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ನಡುವೆ ಫೈಟ್
ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭ
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಆಡುತ್ತಿರುವ ಕೊನೆಯ ಟಿ20 ಸರಣಿ

ತಿರುವನಂತಪುರಂ: ಟಿ20 ವಿಶ್ವಕಪ್‌ ಎನ್ನುವ ರೇಸ್‌ ಗೆಲ್ಲಲು ಪ್ರತಿ ತಂಡವೂ ತನ್ನದೇ ರೀತಿಯಲ್ಲಿ ಸಿದ್ಧತೆ ನಡೆಸಿಕೊಂಡಿವೆ. ಇನ್ನೇನಿದ್ದರೂ ಅಖಾಡಕ್ಕಿಳಿದು ಹೋರಾಡುವುದಷ್ಟೇ ಬಾಕಿ. ಅದಕ್ಕೂ ಮುನ್ನ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ತಮ್ಮ ಸಿದ್ಧತೆಗಳನ್ನು ಮರುಪರಿಶೀಲಿಸಿಕೊಳ್ಳಲು ಅವಕಾಶವೊಂದು ಸಿಕ್ಕಿದೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಸೆಣಸಲಿದ್ದು, ಆ ಸರಣಿಯ ಮೊದಲ ಪಂದ್ಯ ಬುಧವಾರ ಇಲ್ಲಿನ ಗ್ರೀನ್‌ ಫೀಲ್ಡ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಶ್ವಕಪ್‌ಗೆ ಬೇಕಿರುವ ರಣತಂತ್ರಗಳು ಈಗಾಗಲೇ ಸಿದ್ಧವಿರಲಿವೆ. ಪ್ರಯೋಗಗಳೆಲ್ಲವೂ ಬಹುತೇಕ ಮುಗಿದಿವೆ. ಈ ಸರಣಿ ರೇಸ್‌ಗೆ ಮುನ್ನ ನಡೆಯಲಿರುವ ‘ಟ್ರಯಲ್‌ ರನ್‌’ ಇದ್ದ ಹಾಗೆ. ಭಾರತ ತಂಡವು ಹಾರ್ದಿಕ್‌ ಪಾಂಡ್ಯಗೆ ವಿಶ್ರಾಂತಿ ನೀಡಿದೆ. ದೀಪಕ್‌ ಹೂಡಾ ಗಾಯಗೊಂಡು ಹೊರಬಿದ್ದಿದ್ದಾರೆ. ಆಲ್ರೌಂಡರ್‌ನ ಸ್ಥಾನಕ್ಕೆ ಸ್ಪಿನ್ನರ್‌ ಶಾಬಾಜ್‌ ಅಹ್ಮದ್‌ರನ್ನು ಆಯ್ಕೆ ಮಾಡಲಾಗಿದೆ. ಅಕ್ಷರ್‌ ಪಟೇಲ್‌ ಹಾಗೂ ಯಜುವೇಂದ್ರ ಚಹಲ್‌ ಇರುವ ಕಾರಣ, ಶಾಬಾಜ್‌ಗೆ ಸ್ಥಾನ ಸಿಗುವುದು ಅನುಮಾನ. ಹೀಗಾಗಿ, ರಿಷಭ್‌ ಪಂತ್‌ ಆಡುವ ಹನ್ನೊಂದಕ್ಕೆ ಮರಳಲಿದ್ದಾರೆ. ಕೇವಲ ಐವರು ಬೌಲರ್‌ಗಳೊಂದಿಗೆ ಭಾರತ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಈ ಐವರಿಗೆ ಹೆಚ್ಚಿನ ಅಭ್ಯಾಸ ನಡೆಸಲು ಅವಕಾಶ ಸಿಗಲಿದೆ.

ಕಿಂಗ್‌ ಕೊಹ್ಲಿ ದಾಖಲೆ; ರಾಹುಲ್‌ ದ್ರಾವಿಡ್‌ ರೆಕಾರ್ಡ್‌ ಬ್ರೇಕ್‌ ಮಾಡಿದ ವಿರಾಟ್‌!

ಇನ್ನು ನಾಯಕ ತೆಂಬ ಬವುಮಾ ಗಾಯದಿಂದ ಚೇತರಿಸಿಕೊಂಡು ವಾಪಸ್ಸಾಗಿರುವ ಕಾರಣ ದಕ್ಷಿಣ ಆಫ್ರಿಕಾ ತಂಡದ ಸಂಯೋಜನೆಯಲ್ಲಿ ಕೆಲ ಬದಲಾವಣೆ ಆಗಬಹುದು. ರೀಜಾ ಹೆಂಡ್ರಿಕ್ಸ್‌ ಆಡುವ ಹನ್ನೊಂದರಿಂದ ಹೊರಬೀಳಬಹುದು. ರೈಲಿ ರೋಸೌ, ಮಿಲ್ಲರ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಸಂಭವನೀಯರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ರಿಷಭ್‌ ಪಂತ್‌, ದಿನೇಶ್ ಕಾರ್ತಿಕ್‌, ಅಕ್ಷರ್‌ ಪಟೇಲ್, ದೀಪಕ್‌ ಚಹರ್‌, ಅಶ್‌ರ್‍ದೀಪ್‌ ಸಿಂಗ್, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಲ್‌.

ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ತೆಂಬಾ ಬವುಮಾ(ನಾಯಕ),  ರೈಲಿ ರೋಸೌ, ಏಯ್ಡನ್ ಮಾರ್ಕ್ರಮ್‌, ಡೇವಿಡ್ ಮಿಲ್ಲರ್‌, ಸ್ಟಬ್ಸ್‌, ಫೆಲುಕ್ವಾಯೋ/ಪ್ರಿಟೋರಿಯಸ್‌, ಮಾರ್ಕೊ ಯಾನ್ಸನ್‌, ಕಗಿಸೋ ರಬಾಡ, ಏನ್ರಿಚ್ ನೋಕಿಯಾ, ತಬ್ರೀಜ್ ಶಮ್ಸಿ.

ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪಿಚ್‌ ರಿಪೋರ್ಚ್‌

ಗ್ರೀನ್‌ ಫೀಲ್ಡ್‌ ಕ್ರೀಡಾಂಗಣದಲ್ಲಿ ಈ ವರೆಗೂ ಕೇವಲ 2 ಅಂ.ರಾ.ಟಿ20 ಪಂದ್ಯಗಳು ನಡೆದಿದ್ದು, ಒಂದು ಪಂದ್ಯ ಮಳೆಯಿಂದಾಗಿ ಕೇವಲ 8 ಓವರ್‌ಗೆ ಕಡಿತಗೊಂಡಿತ್ತು. ಹೀಗಾಗಿ ಇಲ್ಲಿನ ಪಿಚ್‌ ಹೇಗೆ ವರ್ತಿಸಲಿದೆ ಎನ್ನುವ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ಬ್ಯಾಟರ್‌ ಸ್ನೇಹಿ ಪಿಚ್‌ ಆಗಿರಲಿದ್ದು, ದೊಡ್ಡ ಮೊತ್ತ ನಿರೀಕ್ಷಿಸಬಹುದು ಎನ್ನಲಾಗಿದೆ.

click me!