Ind vs SA: ಟಿ20 ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಕೆ ಎಲ್ ರಾಹುಲ್

By Naveen KodaseFirst Published Jun 9, 2022, 3:54 PM IST
Highlights

* ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದ ಕೆ ಎಲ್ ರಾಹುಲ್

* ಸ್ನಾಯು ಸೆಳೆತಕ್ಕೊಳಗಾಗಿರುವ ರಾಹುಲ್‌ಗೆ ಬಿಗ್ ಶಾಕ್

* ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಕೆ ಎಲ್ ರಾಹುಲ್

ಬೆಂಗಳೂರು(ಜೂ.09): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ (Team India) ಪಾಲಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಹಂಗಾಮಿ ನಾಯಕರಾಗಿ ಆಯ್ಕೆಯಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ತವರಿನಲ್ಲಿ ಮೊದಲ ಬಾರಿಗೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುವ ಕನಸು ಕಾಣುತ್ತಿದ್ದ ರಾಹುಲ್‌ ಅವರಿಗೆ ಶಾಕ್ ಎದುರಾಗಿದ್ದು, ಈ ಕುರಿತಂತೆ ಟ್ವೀಟ್ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ.

ಆಫ್ರಿಕಾ ಎದುರಿನ ಟಿ20 ಸರಣಿಗೂ ಮುನ್ನ ಅಭ್ಯಾಸ ನಡೆಸುತ್ತಿದ್ದ ನಾಯಕ ಕೆ ಎಲ್ ರಾಹುಲ್ (KL Rahul), ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ರಾಹುಲ್ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕೆ ಎಲ್ ರಾಹುಲ್, ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ, ಆದರೆ ನಾನಿಂದು ಹೊಸ ಸವಾಲಿಗೆ ಸಜ್ಜಾಗಿದ್ದೇನೆ. ತವರಿನಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರವಾಗುತ್ತಿದೆ. ಆದರೆ ಎಲ್ಲರೂ ನನ್ನ ಬೆಂಬಲಕ್ಕೆ ನಿಂತರು. ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಅನಂತ ಧನ್ಯವಾದಗಳು. ರಿಷಭ್ ಪಂತ್ ನೇತೃತ್ವದ ಭಾರತ ತಂಡಕ್ಕೆ ಶುಭಹಾರೈಕೆಗಳು. ಆದಷ್ಟು ಬೇಗ ಸಿಗೋಣ ಎಂದು ಕೆ ಎಲ್ ರಾಹುಲ್ ಟ್ವೀಟ್ ಮಾಡಿದ್ದಾರೆ.

Latest Videos

ಟೀಂ ಇಂಡಿಯಾದ ನಾಯಕನಾಗಿ ಆಯ್ಕೆಯಾಗಿದ್ದ ಕನ್ನಡಿಗ ಕೆ.ಎಲ್‌.ರಾಹುಲ್‌ ಅವರು ಗಾಯಗೊಂಡು ಬುಧವಾರ ಸರಣಿಯಿಂದಲೇ ಹೊರಬಿದ್ದಿರುವ ಬೆನ್ನಲ್ಲೇ ಆಫ್ರಿಕಾ ಎದುರಿನ ಟಿ20 ಸರಣಿಗೆ ಉಪನಾಯಕನಾಗಿ ನೇಮಕಗೊಂಡಿದ್ದ ರಿಷಭ್ ಪಂತ್‌ (Rishabh Pant), ರಾಹುಲ್‌ ಅನುಪಸ್ಥಿತಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್‌ ಪಾಂಡ್ಯ (Hardik Pandya) ಉಪನಾಯಕತ್ವ ಹೊಣೆ ನಿಭಾಯಿಸಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ನಾಯಕತ್ವ ಗುಣಗಳನ್ನು ಅನಾವರಣ ಮಾಡಿದ ಹಾರ್ದಿಕ್ ಪಾಂಡ್ಯಗೆ ಈ ಬಾರಿ ಉಪನಾಯಕ ಪಟ್ಟ ಒಲಿದು ಬಂದಿದೆ.

Hard to accept but I begin another challenge today. Gutted not to be leading the side for the first time at home, but the boys have all my support from the sidelines.Heartfelt thanks to all for your support.Wishing Rishabh and the boys all the luck for the series.See you soon🏏💙

— K L Rahul (@klrahul)

Ind vs SA: ಇಂದಿನಿಂದ ಇಂಡೋ-ಆಫ್ರಿಕಾ ಟಿ20 ಕದನ..!

ಕೆ ಎಲ್ ರಾಹುಲ್ ಜತೆಗೆ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಕೂಡಾ ಫಿಟ್ನೆಸ್ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ಕೆ ಎಲ್ ರಾಹುಲ್ ಅವರ ಬಲಗೈಗೆ ಬಡಿದಿದೆ. ಇದೀಗ ಈ ಇಬ್ಬರು ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ವರ್ಷಾರಂಭದಲ್ಲೂ ಕೆ ಎಲ್ ರಾಹುಲ್ ಸ್ನಾಯು ಸೆಳೆತಕ್ಕೆ ಒಳಗಾಗುವ ಮೂಲಕ ವೆಸ್ಟ್ ಇಂಡೀಸ್ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದರು. ಭಾರತದಲ್ಲೇ ನಡೆದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವೇಳೆಗೆ ಸಂಪೂರ್ಣ ಫಿಟ್ ಆಗಿದ್ದ ರಾಹುಲ್, ಇದೀಗ ಹರಿಣಗಳ ಎದುರಿನ ಸರಣಿಗೂ ಮತ್ತೊಮ್ಮೆ ಸ್ನಾಯುಸೆಳೆತಕ್ಕೆ ಒಳಗಾಗಿ ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದಾರೆ.

click me!