Ind vs SA: ರಾಹುಲ್, ಪಂತ್ ಫಿಫ್ಟಿ, ಹರಿಣಗಳಿಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ

Suvarna News   | Asianet News
Published : Jan 21, 2022, 06:04 PM ISTUpdated : Jan 21, 2022, 06:12 PM IST
Ind vs SA: ರಾಹುಲ್, ಪಂತ್ ಫಿಫ್ಟಿ, ಹರಿಣಗಳಿಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ

ಸಾರಾಂಶ

* ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 288 ರನ್‌ಗಳ ಗುರಿ ನೀಡಿದ ಭಾರತ * ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ ರಿಷಭ್ ಪಂತ್, ಕೆ ಎಲ್ ರಾಹುಲ್ * ಕೊನೆಯಲ್ಲಿ ಉಪಯುಕ್ತ ಜತೆಯಾಟ ನಿಭಾಯಿಸಿದ ಶಾರ್ದೂಲ್ ಠಾಕೂರ್, ಅಶ್ವಿನ್

ಪಾರ್ಲ್‌(ಜ.21): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್ (Rishabh Pant) ಹಾಗೂ ನಾಯಕ ಕೆ.ಎಲ್‌. ರಾಹುಲ್‌ (KL Rahul) ಆಕರ್ಷಕ ಅರ್ಧಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 287 ರನ್‌ ಬಾರಿಸಿದ್ದು, ಆತಿಥೇಯ ಹರಿಣಗಳ ಪಡೆಗೆ ಸವಾಲಿನ ಗುರಿ ನೀಡಿದೆ. ಶಾರ್ದೂಲ್ ಠಾಕೂರ್ (Shardul Thakur) ಮತ್ತೊಮ್ಮೆ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಏಕದಿನ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ದಕ್ಷಿಣ ಆಫ್ರಿಕಾ ತಂಡವನ್ನು 287 ರನ್‌ಗಳೊಳಗಾಗಿ ಕಟ್ಟಿಹಾಕಬೇಕಿದೆ.

ಇಲ್ಲಿನ ಬೋಲ್ಯಾಂಡ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ.ಎಲ್. ರಾಹುಲ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಶಿಖರ್ ಧವನ್ (Shikhar Dhawan) ಹಾಗೂ ಕೆ.ಎಲ್. ರಾಹುಲ್ ಜೋಡಿ 63 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ್ದ ಶಿಖರ್ ಧವನ್‌ 29 ರನ್‌ಗಳಿಸಿ ಏಯ್ಡನ್‌ ಮಾರ್ಕ್‌ರಮ್‌ ಬೌಲಿಂಗ್‌ನಲ್ಲಿ ಸಿಸಾದ ಮಗಲಾಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಇನ್ನು ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಶೂನ್ಯ ಸುತ್ತಿ ಕೇಶವ್‌ ಮಹಾರಾಜ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ಭಾರತ ತಂಡವು 12.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 64 ರನ್‌ ಬಾರಿಸಿತ್ತು.

ಪಂತ್-ರಾಹುಲ್‌ ಜುಗಲ್ಬಂದಿ: ದಿಢೀರ್ ಎನ್ನುವಂತೆ ಧವನ್ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಮೂರನೇ ವಿಕೆಟ್‌ಗೆ ನಾಯಕ ಕೆ.ಎಲ್‌ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಅವಕಾಶ ಸಿಕ್ಕಾಗಲೆಲ್ಲ ಬೌಂಡರಿ ಬಾರಿಸುತ್ತ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಮೂರನೇ ವಿಕೆಟ್‌ಗೆ ಈ ಜೋಡಿ 111 ಎಸೆತಗಳನ್ನು ಎದುರಿಸಿ 115 ರನ್‌ಗಳ ಜತೆಯಾಟವಾಡಿತು. ತಮಗೆ ಸಿಕ್ಕ ಎರಡು ಜೀವದಾನಗಳನ್ನು ಬಳಸಿಕೊಂಡ ರಾಹುಲ್‌ 79 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 55 ರನ್‌ ಬಾರಿಸಿ ಮಗಲಾಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ 71 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 85 ರನ್‌ ಬಾರಿಸಿ ಶಮ್ಸಿಗೆ ವಿಕೆಟ್‌ ಒಪ್ಪಿಸಿದರು.

ಮತ್ತೆ ಕೈಕೊಟ್ಟ ಅಯ್ಯರ್ ಜೋಡಿ: ರಿಷಭ್‌ ಪಂತ್ ಹಾಗೂ ರಾಹುಲ್‌ ವಿಕೆಟ್ ಪತನವಾಗುತ್ತಿದ್ದಂತೆಯೇ ಕ್ರೀಸ್‌ಗಿಳಿದ ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಆರಂಭದಲ್ಲಿ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಶ್ರೇಯಸ್‌ ಅಯ್ಯರ್ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವೆಂಕಟೇಶ್ ಅಯ್ಯರ್ 33 ಎಸೆತಗಳನ್ನು ಎದುರಿಸಿ ಕೇವಲ 22 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

Ind vs SA: ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಕೊನೆಯಲ್ಲಿ ಮತ್ತೆ ಉಪಯುಕ್ತ ಬ್ಯಾಟಿಂಗ್ ನಡೆಸಿದ ಶಾರ್ದೂಲ್ ಠಾಕೂರ್: ಕಳೆದ ಏಕದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ್ದ ಶಾರ್ದೂಲ್ ಠಾಕೂರ್, ಇದೀಗ ಎರಡನೇ ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಶಾರ್ದೂಲ್ ಠಾಕೂರ್ 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 40 ರನ್‌ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ರವಿಚಂದ್ರನ್ ಅಶ್ವಿನ್ ಅಜೇಯ 25 ರನ್‌ಗಳಿಸಿದರು. 7ನೇ ವಿಕೆಟ್‌ಗೆ ಈ ಜೋಡಿ 48 ರನ್‌ಗಳ ಅಮೂಲ್ಯ ಜತೆಯಾಟ ನಿಭಾಯಿಸಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ