ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಮುಗ್ಗರಿಸಿದ್ದ ಭಾರತ ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿ ಸಮಬಲಗೊಂಡಿದ್ದು, ಅಂತಿಮ ಪಂದ್ಯ ಫೈನಲ್ ಸ್ವರೂಪ ಪಡೆದಿದೆ.
ರಾಂಚಿ(ಅ.09): ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಇದೀಗ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಮೊದಲ ಪಂದ್ಯ ಮುಗ್ಗರಿಸಿ ನಿರಾಸೆ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯದಲ್ಲಿ7 ವಿಕೆಟ್ ಗೆಲುವು ದಾಖಲಿಸಿದೆ. ಇಶಾನ್ ಕಿಶನ್ ಸೆಂಚುರಿ ಮಿಸ್ ಮಾಡಿಕೊಂಡ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಹೋರಾಟದಿಂದ ಟೀಂ ಇಂಡಿಯಾ ಯಾವುದೇ ಆತಂಕವಿಲ್ಲದೆ ಗೆಲುವಿನ ದಡ ಸೇರಿತು. ಇದರೊಂದಿಗೆ ಟೀಂ ಇಂಡಿಯಾ 3 ಪಂದ್ಯಗಳನ್ನು ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇದೀಗ ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಫೈನಲ್ ಸ್ವರೂಪ ಪಡೆದಿದೆ.
ಗೆಲುವಿಗೆ 279 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ಶಿಖರ್ ಧವನ್ ಕೇವಲ 13 ರನ್ ಸಿಡಿಸಿ ಔಟಾದರು. ಶುಭಮನ್ ಗಿಲ್ 28 ರನ್ ಸಿಡಿಸಿ ಔಟಾದರು. 48ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಆದರೆ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಹೋರಾಟ ಪಂದ್ಯದ ಗತಿ ಬದಲಿಸಿತು.
ಕೊನೆಯುಸಿರೆಳೆದ ಪುಟ್ಟ ಅಭಿಮಾನಿಯ ಬಗ್ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ ಡೇವಿಡ್ ಮಿಲ್ಲರ್..!
ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಸೌತ್ ಆಫ್ರಿಕಾ ತಂಡದ ತಲೆನೋವು ಹೆಚ್ಚಿಸಿತು. ಇತ್ತ ಅಯ್ಯರ್ ಉತ್ತಮ ಸಾಥ್ ನೀಡಿದರು. ಅಬ್ಬರಿಸಿದ ಇಶಾನ್ ಕಿಶನ್ 84 ಎಸೆತದಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ಮೂಲಕ 93 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 7 ರನ್‍ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡರು.
ಶ್ರೇಯಸ್ ಅಯ್ಯರ್ ಹೋರಾಟ ಮುಂದುವರಿಸಿದರು. ಇಶಾನ್ ಕಿಶನ್ ಸೆಂಚುರಿ ಮಿಸ್ ಮಾಡಿಕೊಂಡರೆ, ಇತ್ತ ಅಯ್ಯರ್ ದಿಟ್ಟ ಹೋರಾಟ ನೀಡಿ ಸೆಂಚುರಿ ಸಿಡಿಸಿದರು. ಇದು ಶ್ರೇಯಸ್ ಅಯ್ಯರ್ 2ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ 111ಎಸೆತದಲ್ಲಿ ಅಜೇಯ 113 ರನ್ ಸಿಡಿಸಿದರೆ, ಸಂಜು ಸ್ಯಾಮ್ಸನ್ ಅಜೇಯ 30 ರನ್ ಸಿಡಿಸಿದರು. ಈ ಮೂಲಕ 45.5 ಓವರ್‌ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಸೌತ್ ಆಫ್ರಿಕಾ ಇನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 278 ರನ್ ಸಿಡಿಸಿತು. ರೀಜಾ ಹೆನ್ರಿಕೆಸ್ 74 ರನ್ ಕಾಣಿಕೆ ನೀಡಿದರೆ, ಆ್ಯಡಿನ್ ಮಕ್ರಮ್ 79 ರನ್ ಸಿಡಿಸಿ ಮಿಂಚಿದರು. ಹೆನ್ರಿಚ್ ಕಾಲ್ಸೀನ್ 30, ಡೇವಿಡ್ ಮಿಲ್ಲರ್ 35 ರನ್ ಸಿಡಿಸಿದರು. ಆದರೆ ಕ್ವಿಂಟನ್ ಡಿಕಾಕ್, ಜೆ ಮಲನ್, ವೇಯ್ನ್ ಪಾರ್ನೆಲ್ ಅಬ್ಬರಿಸಲು ಸಾಧ್ಯವಾಗಲಿಲ್ಲ.