Ind vs SA ಶೀಘ್ರದಲ್ಲಿ ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್‌ ಬರಲಿದೆ ಎಂದ ಕೋಚ್ ರಾಹುಲ್‌ ದ್ರಾವಿಡ್‌

By Suvarna NewsFirst Published Jan 3, 2022, 9:05 AM IST
Highlights

* ನಾಯಕ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ ಕೋಚ್ ರಾಹುಲ್ ದ್ರಾವಿಡ್‌

* ಕಳೆದ 20 ದಿನಗಳಲ್ಲಿ ಎಲ್ಲಾ ಗೊಂದಲಗಳಾಚೆಗೂ ಕೊಹ್ಲಿ ತಂಡದೊಂದಿಗೆ ಉತ್ತಮವಾಗಿ ಸಹಕರಿಸುತ್ತಿದ್ದಾರೆ.

* ಕೇಪ್‌ಟೌನ್‌ ಟೆಸ್ಟ್ ಪಂದ್ಯಕ್ಕೂ ಮುನ್ನ ಕೊಹ್ಲಿ, ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

ಜೋಹಾನ್ಸ್‌ಬರ್ಗ್‌: ಟೀಂ ಇಂಡಿಯಾ (Team India) ನಾಯಕ ವಿರಾಟ್‌ ಕೊಹ್ಲಿ (Virat Kohli) ಅದ್ಭುತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರ ಬ್ಯಾಟ್‌ನಿಂದ ದೊಡ್ಡ ಮೊತ್ತದ ರನ್‌ ಹರಿದು ಬರಲಿದೆ ಎಂದು ತಂಡದ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗಿರುವ ವಿರಾಟ್ ಕೊಹ್ಲಿ ಪರ ಕೋಚ್ ರಾಹುಲ್ ದ್ರಾವಿಡ್‌ (Rahul Dravid) ಬ್ಯಾಟ್ ಬೀಸಿದ್ದಾರೆ. ವಿರಾಟ್ ಕೊಹ್ಲಿ 2019ರಲ್ಲಿ ಬಾಂಗ್ಲಾದೇಶ ವಿರುದ್ದದ ಪಿಂಕ್‌ ಬಾಲ್ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದರು.

ದಕ್ಷಿಣ ಆಫ್ರಿಕಾ (South Africa) ವಿರುದ್ಧದ 2ನೇ ಟೆಸ್ಟ್‌ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ 20 ದಿನಗಳಿಂದ ಕೊಹ್ಲಿ ಉತ್ತಮ ತರಬೇತಿಯಲ್ಲಿ ತೊಡಗಿದ್ದಾರೆ. ತಂಡದ ಹೊರಗೆ ಹಲವು ವಿವಾದಗಳು ನಡೆಯುತ್ತಿದ್ದರೂ ಕೊಹ್ಲಿ ತಂಡದೊಂದಿಗೆ ಉತ್ತಮ ಸಂಬಂಧದಲ್ಲಿದ್ದಾರೆ. ಅವರು ಎಲ್ಲವನ್ನೂ ಎದುರಿಸಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ನಿಜವಾಗಿಯೂ ಅದ್ಭುತ ನಾಯಕ. ಅವರ ಸಿದ್ಧತೆ ಗಮನಿಸಿದರೆ ಖಂಡಿತಾ ಅವರು ಮುಂದಿನ ಪಂದ್ಯಗಳಲ್ಲಿ ದೊಡ್ಡ ರನ್‌ ಗಳಿಸಲಿದ್ದಾರೆ. ಅವರ ಜೊತೆ ಕಾರ‍್ಯನಿರ್ವಹಿಸುತ್ತಿರುವುದಕ್ಕೆ ಸಂತೋಷವಿದೆ ಎಂದಿದ್ದಾರೆ.

ವಿರಾಟ್ ಕೊಹ್ಲಿ ಕಳೆದ 20 ದಿನಗಳಿಂದ ಅದ್ಭುತವಾಗಿ ನಮ್ಮೊಂದಿಗಿದ್ದಾರೆ. ಅವರು ನೆಟ್ಸ್‌ನಲ್ಲಿ ಅಭ್ಯಾಸ ಹಾಗೂ ತರಬೇತಿ ಪಡೆಯುತ್ತಿರುವ ರೀತಿಯನ್ನು ಗಮನಿಸಿದರೆ, ಸದ್ಯದಲ್ಲೇ ಅವರು ದೊಡ್ಡ ಇನಿಂಗ್ಸ್‌ ಆಡುವ ವಿಶ್ವಾಸವಿದೆ ಎಂದು 'ದ ವಾಲ್‌' ಖ್ಯಾತಿಯ ರಾಹುಲ್ ದ್ರಾವಿಡ್‌ ಹೇಳಿದ್ದಾರೆ. 

ಜೋಹಾನ್ಸ್‌ಬರ್ಗ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಗೆ ವಿರಾಟ್ ಕೊಹ್ಲಿ ಗೈರಾಗಿದ್ದಕ್ಕೆ ಯಾವುದೇ ವಿಶೇಷ ಕಾರಣ ನೀಡಲು ಅವರು ನಿರಾಕರಿಸಿದ್ದಾರೆ. ‘ಅವರ 100ನೇ ಟೆಸ್ಟ್‌ಗೂ ಮುನ್ನ ನಿಮ್ಮ ಜೊತೆ ಮಾತನಾಡಲಿದ್ದಾರೆ’ ಎಂದಿದ್ದಾರೆ. ಅವರು ಪತ್ರಿಕಾಗೋಷ್ಠಿಯಿಂದ ಹೊರಗುಳಿದಿರುವುದಕ್ಕೆ ಯಾವುದೇ ನಿರ್ದಿಷ್ಠ ಕಾರಣವಿಲ್ಲ. ಆದರೆ ಒಂದಂತೂ ಹೇಳುತ್ತೇನೆ, ಕೇಪ್‌ಟೌನ್‌ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ ಪಂದ್ಯವು ವಿರಾಟ್ ಕೊಹ್ಲಿ ಪಾಲಿಗೆ 100ನೇ ಟೆಸ್ಟ್‌ ಪಂದ್ಯವಾಗಲಿದ್ದು, ಆ ಟೆಸ್ಟ್‌ ಪಂದ್ಯಕ್ಕೂ ಮುನ್ನ ಕೊಹ್ಲಿ ಮಾಧ್ಯಮದವರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯವು ಜನವರಿ 11ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ.

💬 💬 Ahead of the second Test, Head Coach Rahul Dravid speaks about the takeaways from the series opener in Centurion. pic.twitter.com/ly3blvbU98

— BCCI (@BCCI)

Ind vs SA: ಹರಿಣಗಳೆದುರು ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲಲು ರೆಡಿಯಾದ ಟೀಂ ಇಂಡಿಯಾ

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 113 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿತ್ತು. ಸೆಂಚೂರಿಯನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ನಾಯಕ ಎನ್ನುವ ಕೀರ್ತಿಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದರು. ಭಾರತ ತಂಡವು ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಯಶಸ್ವಿಯಾಗಿಲ್ಲ. ಇದೀಗ ಇಂದಿನಿಂದ(ಜ.3) ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಲು ಭಾರತ ಸಜ್ಜಾಗಿದೆ.

ಟೀಂ ಇಂಡಿಯಾ ಪಾಲಿಗೆ ಅದೃಷ್ಟದ ಮೈದಾನ ಎನಿಸಿಕೊಂಡಿರುವ ವಾಂಡರರ್ಸ್‌ನಲ್ಲಿ 1992ರಿಂದ 2018ರ ವರೆಗೂ ಭಾರತ 5 ಟೆಸ್ಟ್‌ ಆಡಿದ್ದು, 3 ಡ್ರಾ, 2 ಗೆಲುವು ಕಂಡಿದೆ. 2006ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ 123 ರನ್‌ಗಳಿಂದ ಗೆದ್ದಿದ್ದ ಭಾರತ, 2018ರಲ್ಲಿ ನಡೆದಿದ್ದ ಪಂದ್ಯವನ್ನು 63 ರನ್‌ಗಳಿಂದ ಗೆದ್ದುಕೊಂಡಿತ್ತು. ಎರಡನೇ ಟೆಸ್ಟ್ ಪಂದ್ಯ ಜಯಿಸಿದರೆ, ಮೊದಲ ಬಾರಿಗೆ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದಂತಾಗುತ್ತದೆ.

click me!