* ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆರಂಭಿಕ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ
* ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿರುವ ವೇಗಿ ಮೊಹಮ್ಮದ್ ಶಮಿ
* ಭಾರತ ತಂಡದ ಇನಿಂಗ್ಸ್ ಡಿಕ್ಲೇರ್ ಬಗ್ಗೆ ಮಾಹಿತಿ ಹಂಚಿಕೊಂಡ ಅನುಭವಿ ವೇಗಿ
ಸೆಂಚೂರಿಯನ್(ಡಿ.29): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಫ್ರೀಡಂ ಟ್ರೋಫಿ 2021-22 ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಟೀಂ ಇಂಡಿಯಾ (Team India) ಭರ್ಜರಿ ಆರಂಭವನ್ನೇ ಪಡೆದಿದೆ. ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾದ ಮೇಲೆ ಒತ್ತಡವನ್ನು ಹೇರಿದೆ. ಇದೀಗ ಟೀಂ ಇಂಡಿಯಾ ಮೊಹಮ್ಮದ್ ಶಮಿ(Mohammed Shami), ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡವು ಡಿಕ್ಲೇರ್ ಮಾಡುವ ಮುನ್ನ ಎಷ್ಟು ರನ್ ಗಳಿಸಬೇಕು ಎನ್ನುವ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ.
ಇಲ್ಲಿನ ಸೂಪರ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದಕ್ಕಿಂತ ಮೊದಲು ಕನಿಷ್ಠ 350 ರಿಂದ 400 ರನ್ ಗಳಿಸಬೇಕು ಎಂದು ವೇಗಿ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ (KL Rahul) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 327 ರನ್ ಬಾರಿಸಿ ಆಲೌಟ್ ಆಗಿತ್ತು. ಮೊಹಮ್ಮದ್ ಶಮಿ ಭಾರತ ಪರ ಮೊದಲ ಇನಿಂಗ್ಸ್‌ನಲ್ಲಿ ಕೇವಲ 44 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 197 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 130 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಮೂರನೇ ದಿನದಾಟದಂತ್ಯದ ವೇಳೆಗೆ ಭಾರತ ತಂಡವು ಒಂದು ವಿಕೆಟ್ ಕಳೆದುಕೊಂಡು 16 ರನ್ ಬಾರಿಸಿದ್ದು, ಒಟ್ಟಾರೆ 146 ರನ್‌ಗಳ ಮುನ್ನಡೆ ಪಡೆದಿದೆ
undefined
ಮೂರನೇ ದಿನದಾಟ ಮುಕ್ತಾಯದ ಬಳಿಕ ಪಂದ್ಯದ ಕುರಿತಂತೆ ಮಾತನಾಡಿದ ಬಂಗಾಳ ಮೂಲದ ವೇಗಿ ಶಮಿ. ಈ ಟೆಸ್ಟ್ ಪಂದ್ಯದಲ್ಲಿ ಇನ್ನೂ ಎರಡು ದಿನಗಳಾಟ ಭಾಕಿ ಇದೆ.ನಾವು ನಾಲ್ಕನೇ ದಿನದಾಟದಲ್ಲಿ ಬಹುಪಾಲು ಬ್ಯಾಟಿಂಗ್ ಮಾಡಬೇಕು. ಎರಡನೇ ಇನಿಂಗ್ಸ್‌ನಲ್ಲಿ ನಾವೇನಾದರೂ 250 ರನ್ ಬಾರಿಸಿದರೆ, ದಕ್ಷಿಣ ಆಫ್ರಿಕಾ ತಂಡಕ್ಕೆ ನಾಲ್ಕು ಸೆಷನ್‌ಗಳಲ್ಲಿ 400 ರನ್‌ಗಳ ಗುರಿ ನೀಡಬಹುದಾಗಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ನಾವು ಕನಿಷ್ಠ 350 ರಿಂದ 400 ರನ್‌ಗಳ ಮುನ್ನಡೆ ಸಾಧಿಸಬೇಕು ಎಂದು ಹೇಳಿದ್ದಾರೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮಳೆಯಿಂದಾಗಿ ಒಂದು ಎಸೆತವೂ ಕಾಣದೆ ಸ್ಥಗಿತವಾಗಿತ್ತು. ಇನ್ನು ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಬೇಗನೇ ಆಲೌಟ್ ಆಗುವ ಮೂಲಕ ಕೊಂಚ ನಿರಾಸೆ ಅನುಭವಿಸಿತು. ಬಳಿಕ ಬ್ಯಾಟಿಂಗ್ ಮಾಡಲಿಳಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಟೀಂ ಇಂಡಿಯಾ ವೇಗಿಗಳು ಇನ್ನಿಲ್ಲದಂತೆ ಕಾಡಿದರು. ಅದರಲ್ಲೂ ಶಮಿ 5 ವಿಕೆಟ್ ಪಡೆದರೆ, ಬುಮ್ರಾ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು.
200 ವಿಕೆಟ್‌ಗಳ ಸಾಧನೆ ಶ್ರೇಯವನ್ನು ತಮ್ಮ ತಂದೆಗೆ ಅರ್ಪಿಸಿದ ಶಮಿ:
ಶಮಿ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸುತ್ತಿದ್ದಂತೆಯೇ, ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 200+ ವಿಕೆಟ್ ಕಬಳಿಸಿದ ಟೀಂ ಇಂಡಿಯಾದ 5ನೇ ವೇಗದ ಬೌಲರ್ ಎನ್ನುವ ಕೀರ್ತಿಗೆ ಶಮಿ ಪಾತ್ರರಾಗಿದ್ದಾರೆ.
SA vs India Boxing Day Test : ಭಾರತದ ದಾಳಿಗೆ ದಕ್ಷಿಣ ಆಫ್ರಿಕಾ ಕಂಗಾಲು, ದಿನದಲ್ಲಿ ಉರುಳಿತು 18 ವಿಕೆಟ್ !
ನನ್ನೆಲ್ಲಾ ಯಶಸ್ಸಿಗೆ ನಮ್ಮ ತಂದೆಯ ತ್ಯಾಗ ಹಾಗೂ ಪರಿಶ್ರಮ ಕಾರಣ ಎಂದಿದ್ದಾರೆ. ನಾನು ಹುಟ್ಟಿ ಬೆಳೆದದ್ದು ಒಂದು ಹಳ್ಳಿಯಲ್ಲಿ. ಅಲ್ಲಿ ಯಾವುದೇ ಸೂಕ್ತ ಸೌಕರ್ಯಗಳಿರಲಿಲ್ಲ. ಹೀಗಾಗಿ ಕ್ರಿಕೆಟ್ ಕಲಿಯಲು ನಮ್ಮೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ನಗರಕ್ಕೆ ನನ್ನನ್ನು ನಮ್ಮ ತಂದೆ ಕಳಿಸುತ್ತಿದ್ದರು. ನನ್ನ ತಂದೆ ಹಾಗೂ ಸಹೋದರ ನನ್ನನ್ನು ಬೆಂಬಲಿಸುತ್ತಾ ಬಂದಿದ್ದರಿಂದ ನಾನು ಈ ಹಂತಕ್ಕೇರಿದ್ದೇನೆ ಎಂದು ಶಮಿ ಹೇಳಿದ್ದಾರೆ.