
ಗೆಬೆರ್ಹಾ(ಡಿ.19): ಮೊನಚು ಬೌಲಿಂಗ್ ದಾಳಿ ಮೂಲಕ ಹರಿಣಗಳ ಪಡೆಯನ್ನು ಮೊದಲ ಏಕದಿನ ಪಂದ್ಯದಲ್ಲಿ ಅವರದೇ ತವರಿನಲ್ಲಿ ಕಟ್ಟಿಹಾಕಿ ಪ್ರಾಬಲ್ಯ ಮೆರೆದಿದ್ದ ಟೀಂ ಇಂಡಿಯಾ ಯುವ ಪಡೆ, ಸದ್ಯ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯ ಮಂಗಳವಾರ ನಿಗದಿಯಾಗಿದ್ದು, ಇಲ್ಲಿನ ಗೆಬೆರ್ಹಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ದ. ಆಫ್ರಿಕಾ ಸರಣಿ ಸಮಬಲದ ಕಾತರದಲ್ಲಿದೆ. ಟೆಸ್ಟ್ ಸರಣಿಯತ್ತ ಗಮನ ಹರಿಸುವ ನಿಟ್ಟಿನಲ್ಲಿ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ ಆಡುವುದಿಲ್ಲ. ಹೀಗಾಗಿ ರಿಂಕು ಸಿಂಗ್ ಅಥವಾ ರಜತ್ ಪಾಟೀದಾರ್ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ರಿಂಕು ಈಗಾಗಲೇ ಟಿ20 ಸರಣಿಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದು, ರಜತ್ ಕೂಡಾ ದೇಸಿ ಟೂರ್ನಿಗಳಲ್ಲಿ ಅಬ್ಬರಿಸಿದ್ದಾರೆ. ಇಬ್ಬರಿಗೂ ತಂಡದಲ್ಲಿ ಸ್ಥಾನ ನೀಡಿ, ತಿಲಕ್ ವರ್ಮಾರನ್ನು ಹೊರಗಿಟ್ಟರೂ ಅಚ್ಚರಿಯಿಲ್ಲ. ಯುವ ಪ್ರತಿಭೆ ಸಾಯಿ ಸುದರ್ಶನ್ ಮತ್ತೊಮ್ಮೆ ಮಿಂಚಲು ಕಾಯುತ್ತಿದ್ದಾರೆ.
IPL Auction: 10 ಫ್ರಾಂಚೈಸಿಗಳ ಮುಂದಿರುವ ಗುರಿ ಏನು? ಆರ್‌ಸಿಬಿ ಟಾರ್ಗೆಟ್ ಏನಿರಬಹುದು?
ಇನ್ನು, ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್ ಆರಂಭಿಕ ಪಂದ್ಯದಲ್ಲಿ ಪ್ರದರ್ಶಿಸಿದ್ದ ಆಟ ಮುಂದುವರಿಸಲು ಕಾಯುತ್ತಿದ್ದಾರೆ. ಇನ್ನು ಬಹುತೇಕ ಅನನುಭವಿಗಳಿಂದಲೇ ಕೂಡಿರುವ ದ.ಆಫ್ರಿಕಾ ಆರಂಭಿಕ ಪಂದ್ಯದ ಆಘಾತದಿಂದ ಚೇತರಿಸಿಕೊಂಡು, ಭಾರತಕ್ಕೆ ತಿರುಗೇಟು ನೀಡುವ ನಿರೀಕ್ಷೆಯಲ್ಲಿದೆ. ನಾಯಕ ಮಾರ್ಕ್‌ರಮ್, ಅನುಭವಿಗಳಾದ ಡೇವಿಡ್ ಮಿಲ್ಲರ್, ಕ್ಲಾಸೆನ್, ಕೇಶವ್ ಮಹಾರಾಜ್ ಮೇಲೆ ಭರವಸೆ ಇಡಲಾಗಿದೆ.
ಪಿಚ್ ರಿಪೋರ್ಟ್:
ಗೆಬೆರ್ಹಾ ಕ್ರೀಡಾಂಗಣದ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದ ಉದಾಹರಣೆಯಿದೆ. ಇಲ್ಲಿ ನಡೆದ ಕಳೆದ 10 ಏಕದಿನ ಪಂದ್ಯಗಳಲ್ಲಿ ಒಮ್ಮೆ ಮಾತ್ರ 250+ ರನ್ ದಾಖಲಾಗಿದೆ. ಮಂಗಳವಾರದ ಪಂದ್ಯಕ್ಕೆ ಮಳೆ ಭೀತಿ ಇಲ್ಲ.
2023 ರೋಹಿತ್ ಶರ್ಮಾ ಪಾಲಿಗೆ ಕರಾಳ ವರ್ಷ..! ಒಂದಲ್ಲ, ಎರಡಲ್ಲ 4 ಬಾರಿ ಹಿಟ್‌ಮ್ಯಾನ್ ಹಾರ್ಟ್ ಬ್ರೇಕ್..!
ಸಂಭವನೀಯ ಆಟಗಾರರ ಪಟ್ಟಿ:
ಭಾರತ:
ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್/ರಜತ್ ಪಾಟೀದಾರ್, ಕೆ ಎಲ್ ರಾಹುಲ್(ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಆರ್ಶದೀಪ್ ಸಿಂಗ್, ಆವೇಶ್ ಖಾನ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್.
ದಕ್ಷಿಣ ಆಫ್ರಿಕಾ:
ರೀಜಾ ಹೆಂಡ್ರಿಕ್ಸ್, ಡೆ ಜೊರ್ಜಿ, ವ್ಯಾನ್ ಡರ್ ಡುಸ್ಸೆನ್, ಏಯ್ಡನ್ ಮಾರ್ಕ್‌ರಮ್(ನಾಯಕ), ಹೆನ್ರಿಚ್ ಕ್ಲಾಸೇನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಲುಕ್ವಾಯೋ, ಮುಲ್ಡರ್, ಬರ್ಗರ್, ಕೇಶವ್ ಮಹರಾಜ್, ತಬ್ರೇಜ್ ಶಮ್ಸಿ.
ಪಂದ್ಯ ಆರಂಭ: ಮಧ್ಯಾಹ್ನ 4.30
ನೇರ ಪ್ರಸಾರ: ಡಿಸ್ನಿ+ ಹಾಟ್‌ಸ್ಟಾರ್, ಸ್ಟಾರ್ ಸ್ಪೋರ್ಟ್ಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.