Ind vs NZ Mumbai Test: ಮುಂಬೈ ಟೆಸ್ಟ್‌ ಗೆಲ್ಲಲು 540 ರನ್‌ಗಳ ಗುರಿ

By Suvarna NewsFirst Published Dec 5, 2021, 2:08 PM IST
Highlights

* ಮುಂಬೈ ಟೆಸ್ಟ್ ಪಂದ್ಯ ಗೆಲ್ಲಲು ನ್ಯೂಜಿಲೆಂಡ್‌ಗೆ ಕಠಿಣ ಗುರಿ

* ಎರಡನೇ ಇನಿಂಗ್ಸ್‌ನಲ್ಲೂ ಮಿಂಚಿದ ಅಜಾಜ್ ಪಟೇಲ್

* ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಅಕ್ಷರ್ ಪಟೇಲ್

ಬೆಂಗಳೂರು(ಡಿ.05): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮುಂಬೈ ಟೆಸ್ಟ್‌ ಪಂದ್ಯ (Mumbai Test) ಗೆಲ್ಲಲು ಟೀಂ ಇಂಡಿಯಾ (Team India) ಪ್ರವಾಸಿ ನ್ಯೂಜಿಲೆಂಡ್‌ ತಂಡಕ್ಕೆ 540 ರನ್‌ಗಳ ಕಠಿಣ ಗುರಿ ನೀಡಿದೆ. ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 7 ವಿಕೆಟ್‌ ಕಳೆದುಕೊಂಡು 276 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ. ಭಾರತದಲ್ಲಿ ಚೊಚ್ಚಲ ಟೆಸ್ಟ್‌ ಸರಣಿಯನ್ನು ಗೆಲ್ಲಬೇಕಿದ್ದರೇ ನ್ಯೂಜಿಲೆಂಡ್ ತಂಡವು (New Zealand Cricket Team) ಅಸಾದಾರಣ ಪ್ರದರ್ಶನ ತೋರಬೇಕಿದೆ.

ಇಲ್ಲಿನ ವಾಂಖೆಡೆ ಮೈದಾನದಲ್ಲಿ (Mumbai Wankhede Stadium) ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 69 ರನ್‌ ಗಳಿಸಿದ್ದ ಭಾರತ ತಂಡಕ್ಕೆ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಮಯಾಂಕ್ ಅಗರ್‌ವಾಲ್ (Mayank Agarwal) ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಮಯಾಂಕ್ ಅಗರ್‌ವಾಲ್, ಎರಡನೇ ಇನಿಂಗ್ಸ್‌ನಲ್ಲಿ 62 ರನ್‌ ಬಾರಿಸಿ ಅಜಾಜ್ ಪಟೇಲ್‌ಗೆ (Ajaz Patel) ವಿಕೆಟ್‌ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಚೇತೇಶ್ವರ್ ಪೂಜಾರ 47 ರನ್‌ ಬಾರಿಸಿ ಅಜಾಜ್‌ ಪಟೇಲ್‌ಗೆ ಎರಡನೇ ಬಲಿಯಾದರು.

ಇನ್ನು ಶುಭ್‌ಮನ್‌ ಗಿಲ್ (Shubman Gill) ಹಾಗೂ ನಾಯಕ ವಿರಾಟ್ ಕೊಹ್ಲಿ (Virat Kohli) ಮೂರನೇ ವಿಕೆಟ್‌ಗೆ ಬರೋಬ್ಬರಿ 82 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ ಇನಿಂಗ್ಸ್‌ನಲ್ಲಿ 44 ರನ್ ಬಾರಿಸಿ ಕೇವಲ 6 ರನ್‌ಗಳಿಂದ ಅರ್ಧಶತಕ ವಂಚಿತರಾಗಿದ್ದ ಶುಭ್‌ಮನ್ ಗಿಲ್‌ ಎರಡನೇ ಇನಿಂಗ್ಸ್‌ನಲ್ಲಿ 3 ರನ್‌ಗಳಿಂದ ಮತ್ತೊಮ್ಮೆ ಅರ್ಧಶತಕ ವಂಚಿತರಾದರು. 75 ಎಸೆತಗಳನ್ನು ಎದುರಿಸಿದ ಗಿಲ್‌ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 47 ರನ್‌ ಬಾರಿಸಿ ರಚಿನ್ ರವೀಂದ್ರ ಅವರಿಗೆ ಚೊಚ್ಚಲ ಬಲಿಯಾದರು. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡಾ 36 ರನ್‌ ಬಾರಿಸಿ ರಚಿನ್ ರವೀಂದ್ರಗೆ ಎರಡನೇ ಬಲಿಯಾದರು.

India declare on 276/7, setting New Zealand a target of 540.

Ajaz Patel finishes with a four-wicket haul in the second innings. | | https://t.co/EdvFj8QtKD pic.twitter.com/j9JJVUk9yP

— ICC (@ICC)

ಸ್ಪೋಟಕ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್-ಅಕ್ಷರ್ ಪಟೇಲ್‌: ಟೀಂ ಇಂಡಿಯಾ ತನ್ನ ಮುನ್ನಡೆಯನ್ನು 450ರ ಗಡಿ ದಾಟುತ್ತಿದ್ದಂತೆಯೇ ಬ್ಯಾಟರ್‌ಗಳು ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅಯ್ಯರ್ ಕೇವಲ 8 ಎಸೆತಗಳಲ್ಲಿ 2 ಸಿಕ್ಸರ್‌ ಸಹಿತ 14 ರನ್ ಬಾರಿಸಿ ಅಜಾಜ್‌ ಪಟೇಲ್‌ ವಿಕೆಟ್ ಒಪ್ಪಿಸಿದರು. ಇನ್ನು ವೃದ್ದಿಮಾನ್ ಸಾಹ 12 ಎಸೆತಗಳಲ್ಲಿ  2 ಬೌಂಡರಿ ಸಹಿತ 13 ರನ್ ಬಾರಿಸಿದರು. ಕೊನೆಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಅಕ್ಷರ್ ಪಟೇಲ್‌ (Axar Patel) ಕೇವಲ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 41 ರನ್‌ ಬಾರಿಸಿ ಅಜೇಯರಾಗುಳಿದರು.

Ind vs NZ Mumbai Test: ಮೂರನೇ ದಿನದಾಟದಲ್ಲೂ ಮಿಂಚಿದ ಅಜಾಜ್ ಪಟೇಲ್‌

ನ್ಯೂಜಿಲೆಂಡ್ ಪರ ಮೊದಲ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದ ಅಜಾಜ್ ಪಟೇಲ್ ಎರಡನೇ ಇನಿಂಗ್ಸ್‌ನಲ್ಲೂ ಕಮಾಲ್ ಮಾಡಿದ್ದು, 4 ವಿಕೆಟ್ ಕಬಳಿಸಿದರು. ಇನ್ನು ರಚಿನ್ ರವೀಂದ್ರ ಕೊನೆಯಲ್ಲಿ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ: 325/10
ಮಯಾಂಕ್ ಅಗರ್‌ವಾಲ್: 150
ಅಜಾಜ್ ಪಟೇಲ್: 119/10

ನ್ಯೂಜಿಲೆಂಡ್: 62/10
ಕೈಲ್ ಜೇಮಿಸನ್: 17
ರವಿಚಂದ್ರನ್ ಅಶ್ವಿನ್: 8/4

ಭಾರತ: 276/7 (ಎರಡನೇ ಇನಿಂಗ್ಸ್‌ ಡಿಕ್ಲೇರ್)
ಮಯಾಂಕ್‌ ಅಗರ್‌ವಾಲ್: 62
ಅಜಾಜ್ ಪಟೇಲ್‌: 106/4

click me!