
ಮುಂಬೈ(ಡಿ.05): ಭಾರತ ಎದುರು ಮೊದಲ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದ ನ್ಯೂಜಿಲೆಂಡ್ ಎಡಗೈ ಆಫ್ ಸ್ಪಿನ್ನರ್ ಅಜಾಜ್ ಪಟೇಲ್ (Ajaz Patel) ಮೂರನೇ ದಿನದಾಟದಲ್ಲೂ ಎರಡು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದರ ಹೊರತಾಗಿಯೂ ಮುಂಬೈ ಟೆಸ್ಟ್‌ನ (Mumbai Test) ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ (Team India) 2 ವಿಕೆಟ್ ಕಳೆದುಕೊಂಡು 142 ರನ್ ಬಾರಿಸಿದ್ದು, ಒಟ್ಟಾರೆ 405 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಶುಭ್‌ಮನ್ ಗಿಲ್ (Shubman Gill) ಕ್ರೀಸ್ ಕಾಯ್ದುಕೊಂಡಿದ್ದು, ಭಾರತ ಕ್ರಿಕೆಟ್ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ದ ಸಂಪೂರ್ಣ ಬಿಗಿ ಹಿಡಿತ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯದ ವೇಳೆಗೆ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 69 ರನ್ ಗಳಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ಮೊದಲ ವಿಕೆಟ್‌ಗೆ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಮಯಾಂಕ್ ಅಗರ್‌ವಾಲ್ (Mayank Agarwal) ಜೋಡಿ 107 ರನ್‌ಗಳ ಜತೆಯಾಟ ನಿಭಾಯಿಸಿತು. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 150 ರನ್ ಚಚ್ಚಿದ್ದ ಮಯಾಂಕ್ ಅಗರ್‌ವಾಲ್ ಎರಡನೇ ಇನಿಂಗ್ಸ್‌ನಲ್ಲೂ ಅಮೋಘ ಆಟ ಪ್ರದರ್ಶಿಸಿದರು. ಕೇವಲ 90 ಎಸೆತಗಳನ್ನು ಎದುರಿಸಿ ಟೆಸ್ಟ್ ವೃತ್ತಿಜೀವನದ 5ನೇ ಅರ್ಧಶತಕ ಬಾರಿಸಿ ಮಿಂಚಿದರು. ಒಟ್ಟು 108 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್‌ವಾಲ್ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 62 ರನ್ ಬಾರಿಸಿ ಅಜಾಜ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದ ಚೇತೇಶ್ವರ್ ಪೂಜಾರ ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಆದರೆ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ಬಾರಿಸುವ ಅವಕಾಶ ಕೈಚೆಲ್ಲಿದರು. ಸೌರಾಷ್ಟ್ರ ಮೂಲದ ಪೂಜಾರ 97 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 47 ರನ್ ಬಾರಿಸಿ ಅಜಾಜ್ ಪಟೇಲ್‌ಗೆ ಎರಡನೇ ಬಲಿಯಾದರು.
Ind vs NZ Mumbai Test: ಭಾರತದ ಬಿಗಿ ಹಿಡಿತದಲ್ಲಿ ಕಿವೀಸ್..!
ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(11) ಹಾಗೂ ಶುಭ್‌ಮನ್ ಗಿಲ್ 17 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ದೊಡ್ಡ ಜತೆಯಾಟವಾಡಿದರೇ ಇಂದೇ ಬಹುತೇಕ ಟೀಂ ಇಂಡಿಯಾ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ 400+ ಮುನ್ನಡೆ ಪಡೆದಿರುವ ಟೀಂ ಇಂಡಿಯಾ, ಪ್ರವಾಸಿ ಕಿವೀಸ್ ಎದುರು ಭಾರೀ ಅಂತರದ ಗೆಲುವು ಎದುರು ನೋಡುತ್ತಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು. ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯ ಡ್ರಾ ಆಗಿದ್ದರಿಂದ ಎರಡನೇ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಅದರಂತೆ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮಯಾಂಕ್ ಅಗರ್‌ವಾಲ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ 325 ರನ್ ಬಾರಿಸಿ ಆಲೌಟ್ ಆಯಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವು ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 62 ರನ್‌ಗಳಿಗೆ ಸರ್ವಪತನ ಕಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.