Ind vs NZ Mumbai Test: ಆರಂಭಿಕ ಆಘಾತದ ನಡುವೆಯೂ ತಂಡಕ್ಕೆ ಆಸರೆಯಾದ ಅಕ್ಷರ್-ಮಯಾಂಕ್‌ ಜೋಡಿ

By Suvarna NewsFirst Published Dec 4, 2021, 11:47 AM IST
Highlights

* ಮುಂಬೈ ಟೆಸ್ಟ್‌ ಪಂದ್ಯದಲ್ಲಿ ತಂಡಕ್ಕೆ ಆಸರೆಯಾದ ಅಕ್ಷರ್ ಪಟೇಲ್‌-ಮಯಾಂಕ್ ಅಗರ್‌ವಾಲ್

* ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ

* ದ್ವಿಶತಕದತ್ತ ದಾಪುಗಾಲಿಟ್ಟ ಮಯಾಂಕ್‌ ಅಗರ್‌ವಾಲ್

ಮುಂಬೈ(ಡಿ.04): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾರಂಭದಲ್ಲೇ ಟೀಂ ಇಂಡಿಯಾ (Team India) ಸತತ 2 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತಾದರೂ, ಇದಾದ ಬಳಿಕ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ (Mayank Agarwal) ಹಾಗೂ ಆಲ್ರೌಂಡರ್‌ ಅಕ್ಷರ್ ಪಟೇಲ್ (Axar Patel) ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ದಿನದಾಟದಲ್ಲೇ ಆಕರ್ಷಕ ಶತಕ ಬಾರಿಸಿದ್ದ ಮಯಾಂಕ್ ಅಗರ್‌ವಾಲ್ ಇದೀಗ ದ್ವಿಶತಕದತ್ತ ದಾಪುಗಾಲಿಟ್ಟಿದ್ದಾರೆ. ಎರಡನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 285 ರನ್‌ ಬಾರಿಸಿದೆ.

ಹೌದು, ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 221 ರನ್‌ ಬಾರಿಸಿತ್ತು. ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಎಡಗೈ ಸ್ಪಿನ್ನರ್‌ ಅಜಾಜ್ ಪಟೇಲ್ ಮತ್ತೊಮ್ಮೆ ಶಾಕ್ ನೀಡಿದರು. ಎರಡನೇ ದಿನದಾಟದಲ್ಲಿ ತಾವೆಸೆದ ಮೊದಲ ಓವರ್‌ನಲ್ಲೇ ವೃದ್ದಿಮಾನ್ ಸಾಹ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತದಲ್ಲಿ ಟೆಸ್ಟ್‌ ಕ್ರಿಕೆಟ್‌ನ ಮೊದಲ ಇನಿಂಗ್ಸ್‌ನಲ್ಲೇ 5+ ವಿಕೆಟ್ ಕಬಳಿಸಿದ ನ್ಯೂಜಿಲೆಂಡ್‌ನ ಮೊದಲ ಸ್ಪಿನ್ನರ್ ಎನ್ನುವ ಗೌರವಕ್ಕೆ ಪಾತ್ರರಾದರು. ಈ ಮೊದಲು ಜೀತನ್ ಪಟೇಲ್ 2012ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ 100 ರನ್‌ ನೀಡಿ 4 ವಿಕೆಟ್ ಕಬಳಿಸಿದ್ದರು. 

ವಿಕೆಟ್‌ ಕಬಳಿಸಲು ಕಿವೀಸ್ ಬೌಲರ್‌ಗಳ ಪರದಾಟ: ಕಾನ್ಪುರ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್ ವೇಗದ ಬೌಲರ್‌ಗಳು ಮಾರಕ ದಾಳಿಯ ಮೂಲಕ ಟೀಂ ಇಂಡಿಯಾ ಬ್ಯಾಟರ್‌ಗಳಿಗೆ ಶಾಕ್‌ ನೀಡಿದ್ದರು. ಆದರೆ ಮುಂಬೈ ಟೆಸ್ಟ್‌ನಲ್ಲಿ ಅಜಾಜ್ ಪಟೇಲ್‌ ಹೊರತುಪಡಿಸಿ ಉಳಿದ ಬೌಲರ್‌ಗಳು ವಿಕೆಟ್‌ ಕಬಳಿಸಲು ಪರದಾಡುತ್ತಿದ್ದಾರೆ. ಅನುಭವಿ ವೇಗಿ ಟಿಮ್ ಸೌಥಿ 22 ಓವರ್ ಬೌಲಿಂಗ್‌ ಮಾಡಿದರೂ ಇದುವರೆಗೂ ಯಾವುದೇ ಯಶಸ್ಸು ದಕ್ಕಲಿಲ್ಲ. ಇನ್ನುಳಿದಂತೆ ಸೋಮರ್‌ವಿಲ್ಲೆ, ಜೇಮಿಸನ್‌, ರಚಿನ್ ರವೀಂದ್ರ ಹಾಗೂ ಡೇರಲ್ ಮಿಚೆಲ್‌ ಬೌಲರ್ ಮಾಡಿದರೂ ವಿಕೆಟ್‌ ಕಬಳಿಸಲು ಸಾಧ್ಯವಾಗಿಲ್ಲ

It's Lunch on Day 2 of the 2nd Test in Mumbai! resolute with the bat. 👍 👍

1⃣4⃣6⃣* for
3⃣2⃣* for

We will be back for the second session soon.

Scorecard ▶️ https://t.co/CmrJV47AeP pic.twitter.com/6Bf1YG4Zrt

— BCCI (@BCCI)

ದ್ವಿಶತಕದತ್ತ ಮಯಾಂಕ್ ದಾಪುಗಾಲು: ಮೊದಲ ದಿನದಾಟದಲ್ಲೇ ಆಕರ್ಷಕ ಶತಕ ಬಾರಿಸಿ ಅಜೇಯರಾಗುಳಿದಿದ್ದ ಮಯಾಂಕ್‌ ಅಗರ್‌ವಾಲ್‌, ಎರಡನೇ ದಿನ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಮಯಾಂಕ್‌ ಕೇವಲ 26 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಇದುವರೆಗೂ 306 ಎಸೆತಗಳನ್ನು ಎದುರಿಸಿರುವ ಮಯಾಂಕ್‌ 16 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 146 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದು, ದ್ವಿಶತಕದತ್ತ ದಾಪುಗಾಲು ಹಾಕುತ್ತಿದ್ದಾರೆ.

ಆಸರೆಯಾದ ಮಯಾಂಕ್-ಅಕ್ಷರ್ ಜೋಡಿ: ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಏಳನೇ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್‌ ಹಾಗೂ ಅಕ್ಷರ್ ಪಟೇಲ್ ಮುರಿಯದ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಈ ಜೋಡಿಯ ಜತೆಯಾಟ ಭಾರತ ತ್ರಿಶತಕದತ್ತ ದಾಪುಗಾಲಿಡುವಂತೆ ಮಾಡಿದೆ. ಒಂದು ಕಡೆ ಮಯಾಂಕ್‌ ಅಗರ್‌ವಾಲ್‌ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದರೇ, ಮತ್ತೊಂದೆಡೆ ಅಕ್ಷರ್ ಪಟೇಲ್‌ ಆಕರ್ಷಕ ಬ್ಯಾಟಿಂಗ್ ಮೂಲಕ ತಾವೊಬ್ಬ ಉಪಯುಕ್ತ ಆಲ್ರೌಂಡರ್ ಎನ್ನುವುದನ್ನು ಸಾಬೀತುಪಡಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಅಕ್ಷರ್ ಪಟೇಲ್‌ 98 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 32 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದು, ಅರ್ಧಶತಕದತ್ತ ದಾಪುಗಾಲಿಡಲಾರಂಭಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ: 285/6
ಮಯಾಂಕ್ ಅಗರ್‌ವಾಲ್: 146*
ಅಜಾಜ್ ಅಹಮ್ಮದ್: 103/6
(* ಎರಡನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ)

click me!