Ind vs NZ Kanpur Test: ಭಾರತಕ್ಕೆ ತಿರುಗೇಟು ನೀಡುವತ್ತ ಕಿವೀಸ್ ದಿಟ್ಟ ಹೆಜ್ಜೆ..!

By Suvarna News  |  First Published Nov 26, 2021, 4:56 PM IST

* ಕಾನ್ಪುರ ಟೆಸ್ಟ್‌ನಲ್ಲಿ ಭಾರತ ಎದುರು ಕಿವೀಸ್ ದಿಟ್ಟ ಹೋರಾಟ

* ಟೀಂ ಇಂಡಿಯಾ ಎದುರು ಶತಕದ ಜತೆಯಾಟ ನಿಭಾಯಿಸಿದ ಕಿವೀಸ್ ಆರಂಭಿಕರು

* ಎರಡನೇ ದಿನದಾಟದಂತ್ಯದ ವೇಳಗೆ ನ್ಯೂಜಿಲೆಂಡ್ 129/0


ಕಾನ್ಪುರ(ನ.26): ಭಾರತ ಹಾಗೂ ನ್ಯೂಜಿಲೆಂಡ್‌ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಮೊದಲ ದಿನ ಮೇಲುಗೈ ಸಾಧಿಸಿದರೆ, ಇದೀಗ ಎರಡನೇ ದಿನದಲ್ಲಿ ಪ್ರವಾಸಿ ಕಿವೀಸ್‌ ತಂಡ ಆತಿಥೇಯರಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾವನ್ನು 345 ರನ್‌ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ತಂಡವು (New Zealand Cricket Team) ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 129 ರನ್‌ ಬಾರಿಸಿದೆ. ಇನ್ನೂ ಕೇನ್ ವಿಲಿಯಮ್ಸನ್‌ (Kane Williamson) ಪಡೆ 216 ರನ್‌ಗಳ ಹಿನ್ನೆಡೆಯಲ್ಲಿದೆ.

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ (Green Park Stadium) ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 345 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ವಿಲ್ ಯಂಗ್ (Will Young) ಹಾಗೂ ಟಾಮ್ ಲೇಥಮ್ (Tom Latham) ಶತಕದ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. 2016ರ ಬಳಿಕ ಭಾರತದ ನೆಲದಲ್ಲಿ ಶತಕದ ಜತೆಯಾಟ ನಿಭಾಯಿಸಿದ ವಿದೇಶಿ ಜೋಡಿ ಎನ್ನುವ ಕೀರ್ತಿಗೂ ಲೇಥಮ್ ಹಾಗೂ ಯಂಗ್ ಭಾಜನರಾದರು. ಈ ಜೋಡಿಯನ್ನು ಬೇರ್ಪಡಿಸಲು ಅನುಭವಿ ಬೌಲರ್‌ಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಸೇರಿದಂತೆ ಐವರು ಬೌಲರ್‌ಗಳು ಸಾಕಷ್ಟು ಬೆವರು ಹರಿಸಿದರಾದರೂ ಯಶಸ್ಸು ಮಾತ್ರ ದಕ್ಕಲಿಲ್ಲ. ವಿಲ್ ಯಂಗ್ 180 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ ಅಜೇಯ 75 ರನ್ ಬಾರಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್‌ ಟಾಮ್ ಲೇಥಮ್‌ 165 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 50 ರನ್‌ ಬಾರಿಸಿ ಮೂರನೇ ದಿನದಾಟಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. 

That will be Stumps on Day 2.

New Zealand 129/0, trail by 216 runs.

Scorecard - https://t.co/WRsJCUhS2d pic.twitter.com/IvPs1Txzma

— BCCI (@BCCI)

Tap to resize

Latest Videos

Ind vs NZ Kanpur Test: ಭಾರತ ವಿರುದ್ದ ಕಿವೀಸ್ ಉತ್ತಮ ಆರಂಭ

ಇದಕ್ಕೂ ಮೊದಲು ಮೊದಲ ದಿನದಾಟದಂತ್ಯದ ವೇಳೆಗೆ ಕೇವಲ 4 ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದ್ದ ಅಜಿಂಕ್ಯ ರಹಾನೆ (Ajinkya Rahane) ನೇತೃತ್ವದ ಟೀಂ ಇಂಡಿಯಾಗೆ ಕಿವೀಸ್ ಅನುಭವಿ ವೇಗಿ ಟಿಮ್‌ ಸೌಥಿ (Tim Southee) ಆಘಾತ ನೀಡಲು ಯಶಸ್ವಿಯಾದರು. ಮೊದಲ ದಿನದಾಟ ಅಂತ್ಯದ ವೇಳೆಗೆ ಸಮಯೋಚಿತ ಅರ್ಧಶತಕ ಬಾರಿಸಿದ್ದ ರವೀಂದ್ರ ಜಡೇಜಾ (Ravindra Jadeja) ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ ಒಂದು ಸೇರಿಸದೇ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ಮೂಲಕ ಟಿಮ್‌ ಸೌಥಿ ಎರಡನೇ ದಿನದಾಟದ ಆರಂಭದಲ್ಲೇ ಕಿವೀಸ್‌ಗೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟರು

ಇನ್ನು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಮುಂಬೈ ಮೂಲದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ (Shreyas Iyer) 157 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಸ್ಮರಣೀಯವಾಗಿಸಿಕೊಂಡರು. ಇನ್ನೊಂದು ತುದಿಯಲ್ಲಿ ವೃದ್ದಿಮಾನ್ ಸಾಹ, ಅಕ್ಷರ್ ಪಟೇಲ್ (Axar Patel) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಅಂತಿಮವಾಗಿ ಶ್ರೇಯಸ್ ಅಯ್ಯರ್ ಕೂಡಾ 105 ರನ್‌ ಬಾರಿಸಿ ಟಿಮ್‌ ಸೌಥಿಗೆ ವಿಕೆಟ್ ಒಪ್ಪಿಸಿದರು. ಎರಡನೇ ದಿನದಾಟದ ಮೊದಲ 4 ವಿಕೆಟ್ ಕಬಳಿಸುವಲ್ಲಿ  ಸೌಥಿ ಯಶಸ್ವಿಯಾದರು. ನ್ಯೂಜಿಲೆಂಡ್ ವೇಗಿ ಟಿಮ್‌ ಸೌಥಿ 5 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಗಳಿಸುವ ಲೆಕ್ಕಾಚಾರವನ್ನು ತಲೆಕೆಳಾಗುವಂತೆ ಮಾಡಿದರು.

ಇನ್ನು ಕೊನೆಯಲ್ಲಿ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್‌ 56 ಎಸೆತಗಳನ್ನು ಎದುರಿಸಿ 38 ರನ್‌ ಬಾರಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು. ಅಶ್ವಿನ್‌ಗೆ ಮತ್ತೊಂದು ತುದಿಯಲ್ಲಿ ಉಮೇಶ್ ಯಾದವ್(10) ಉತ್ತಮ ಸಾಥ್ ನೀಡಿದರು. ಲಂಚ್‌ ಬ್ರೇಕ್‌ ಬಳಿಕ ಅಜಾಜ್ ಪಟೇಲ್ ಬೌಲಿಂಗ್‌ನಲ್ಲಿ ರವಿಚಂದ್ರನ್ ಅಶ್ವಿನ್ ಕ್ಲೀನ್ ಬೌಲ್ಡ್ ಆದರೆ, ಇಶಾಂತ್ ಶರ್ಮಾ ಎಲ್‌ಬಿ ಬಲೆಗೆ ಬಿದ್ದರು.

ಸಂಕ್ಷಿಪ್ತ ಸ್ಕೋರ್

ಭಾರತ: 345/10

ಶ್ರೇಯಸ್ ಅಯ್ಯರ್: 105

ಟಿಮ್ ಸೌಥಿ: 69/5

ನ್ಯೂಜಿಲೆಂಡ್‌: 129/00

ವಿಲ್ ಯಂಗ್: 75*
ಟಾಮ್ ಲೇಥಮ್: 50*

(* ಎರಡನೇ ದಿನದಾಟದಂತ್ಯದ ವೇಳೆಗೆ)

click me!