Asianet Suvarna News Asianet Suvarna News

Ind vs NZ Kanpur Test: ಭಾರತ ವಿರುದ್ದ ಕಿವೀಸ್ ಉತ್ತಮ ಆರಂಭ

* ಭಾರತ ವಿರುದ್ದ ಬ್ಯಾಟಿಂಗ್‌ನಲ್ಲಿ ದಿಟ್ಟ ಆರಂಭ ಪಡೆದ ನ್ಯೂಜಿಲೆಂಡ್

* ಕಾನ್ಪುರದಲ್ಲಿ ನಡೆಯುತ್ತಿರುವ ಇಂಡೋ-ಕಿವೀಸ್ ಮೊದಲ ಟೆಸ್ಟ್‌

*  ಎರಡನೇ ದಿನದ ಚಹಾ ವಿರಾಮದ ವೇಳೆಗೆ ಕಿವೀಸ್ 72/0

Ind vs NZ Kanpur Test New Zealand Cricket Team dominate afternoon session On Day 2 Tea Session kvn
Author
Bengaluru, First Published Nov 26, 2021, 2:26 PM IST

ಕಾನ್ಪುರ(ನ.26): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾವನ್ನು (Team India) 345 ರನ್‌ಗಳಿಗೆ ಆಲೌಟ್‌ ಮಾಡಿದ ಪ್ರವಾಸಿ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭವನ್ನೇ ಪಡೆದಿದೆ. ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ ನ್ಯೂಜಿಲೆಂಡ್ ತಂಡವು (New Zealand Cricket Team) ವಿಕೆಟ್‌ ನಷ್ಟವಿಲ್ಲದೇ 72 ರನ್‌ ಗಳಿಸಿದೆ. ಇದರೊಂದಿಗೆ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಇನ್ನೂ 273 ರನ್‌ಗಳ ಹಿನ್ನೆಡೆಯಲ್ಲಿದೆ. 

ಇಲ್ಲಿನ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ (Green Park Stadium) ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 345 ರನ್‌ ಬಾರಿಸಿ ಸರ್ವಪತನ ಕಂಡಿತು. ಇದಾದ ಬಳಿಕ ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ವಿಲ್‌ ಯಂಗ್ (Will Young) ಹಾಗೂ ಟಾಮ್ ಲೇಥಮ್ (Tom Latham) ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ ಮುರಿಯದ 72 ರನ್‌ಗಳ ಜತೆಯಾಟವಾಡುವ ಮೂಲಕ ಕಿವೀಸ್‌ ತಂಡಕ್ಕೆ ದಿಟ್ಟ ಆರಂಭ ಒದಗಿಸಿಕೊಟ್ಟಿದ್ದಾರೆ. ವಿಲ್‌ ಯಂಗ್ 86 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 46 ರನ್ ಬಾರಿಸಿದ್ದರೇ ಮತ್ತೊಂದೆಡೆ ಟಾಮ್ ಲೇಥಮ್‌ 72 ಎಸೆತಗಳನ್ನು ಎದುರಿಸಿ 23 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಈ ಜೋಡಿಯನ್ನು ಬೇರ್ಪಡಿಸಲು ನಾಯಕ ಅಜಿಂಕ್ಯ ರಹಾನೆ ಐವರು ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಯಶಸ್ಸು ದಕ್ಕಲಿಲ್ಲ. 

ಇದಕ್ಕೂ ಮೊದಲು ಮೊದಲ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದ್ದ ಟೀಂ ಇಂಡಿಯಾಗೆ ಕಿವೀಸ್ ಅನುಭವಿ ವೇಗಿ ಟಿಮ್‌ ಸೌಥಿ (Tim Southee) ಶಾಕ್ ನೀಡುವಲ್ಲಿ ಯಶಸ್ವಿಯಾದರು. ಮೊದಲ ದಿನದಾಟದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿದ್ದ ರವೀಂದ್ರ ಜಡೇಜಾ ಎರಡನೇ ದಿನದಾಟದಲ್ಲಿ ತನ್ನ ಖಾತೆಗೆ ಒಂದು ಸೇರಿಸದೇ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಶ್ರೇಯಸ್‌ ಅಯ್ಯರ್‌ (Shreyas Iyer) 157 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಸ್ಮರಣೀಯವಾಗಿಸಿಕೊಂಡರು. ಇನ್ನೊಂದು ತುದಿಯಲ್ಲಿ ವೃದ್ದಿಮಾನ್ ಸಾಹ, ಅಕ್ಷರ್ ಪಟೇಲ್ (Axar Patel) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ನ್ಯೂಜಿಲೆಂಡ್ ವೇಗಿ ಟಿಮ್‌ ಸೌಥಿ 5 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಗಳಿಸುವ ಲೆಕ್ಕಾಚಾರವನ್ನು ತಲೆಕೆಳಾಗುವಂತೆ ಮಾಡಿದರು.

Ind vs NZ Kanpur Test: 5 ವಿಕೆಟ್ ಕಬಳಿಸಿದ ಟಿಮ್ ಸೌಥಿ, ಅರ್ಧಶತಕದತ್ತ ಅಶ್ವಿನ್ ದಾಪುಗಾಲು

ಇನ್ನು ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್‌ (Ravichandran Ashwin) 56 ಎಸೆತಗಳನ್ನು ಎದುರಿಸಿ 38 ರನ್‌ ಬಾರಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು. ಅಶ್ವಿನ್‌ಗೆ ಮತ್ತೊಂದು ತುದಿಯಲ್ಲಿ ಉಮೇಶ್ ಯಾದವ್(10) ಉತ್ತಮ ಸಾಥ್ ನೀಡಿದರು. ಲಂಚ್‌ ಬ್ರೇಕ್‌ ಬಳಿಕ ಅಜಾಜ್ ಪಟೇಲ್ ಬೌಲಿಂಗ್‌ನಲ್ಲಿ ರವಿಚಂದ್ರನ್ ಅಶ್ವಿನ್ ಕ್ಲೀನ್ ಬೌಲ್ಡ್ ಆದರೆ, ಇಶಾಂತ್ ಶರ್ಮಾ ಎಲ್‌ಬಿ ಬಲೆಗೆ ಬಿದ್ದರು.

ಸಂಕ್ಷಿಪ್ತ ಸ್ಕೋರ್

ಭಾರತ: 345/10

ಶ್ರೇಯಸ್ ಅಯ್ಯರ್: 105

ಟಿಮ್ ಸೌಥಿ: 69/5

ನ್ಯೂಜಿಲೆಂಡ್‌: 72/10

ವಿಲ್ ಯಂಗ್: 46
ಟಾಮ್ ಲೇಥಮ್: 23

(* ಎರಡನೇ ದಿನದಾಟದ ಚಹಾ ಬ್ರೇಕ್ ವೇಳೆಗೆ)
 

Follow Us:
Download App:
  • android
  • ios