Ind vs NZ Kanpur Test: 5 ವಿಕೆಟ್ ಕಬಳಿಸಿದ ಟಿಮ್ ಸೌಥಿ, ಅರ್ಧಶತಕದತ್ತ ಅಶ್ವಿನ್ ದಾಪುಗಾಲು

By Suvarna News  |  First Published Nov 26, 2021, 12:00 PM IST

* ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್

* ಭಾರತ ವಿರುದ್ದ 5 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಟಿಮ್ ಸೌಥಿ

* ಅರ್ಧಶತಕ ಬಾರಿಸುವತ್ತ ದಾಪುಗಾಲಿಡುತ್ತಿರುವ ಆರ್ ಅಶ್ವಿನ್


ಕಾನ್ಪುರ(ನ.26): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಉಭಯ ತಂಡಗಳು ಸಮಾನ ಗೌರವ ಪಡೆಯುವಲ್ಲಿ ಯಶಸ್ವಿಯಾಗಿವೆ. ಭಾರತ ತಂಡವು ಮೊದಲ ಸೆಷನ್‌ನಲ್ಲಿ 4 ವಿಕೆಟ್ ಕಳೆದುಕೊಂಡರೂ ಸಹಾ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ (Ravichandran Ashwin) ಒಂದು ತುದಿಯಲ್ಲಿ ನೆಲಕಚ್ಚಿ ಆಡುತ್ತಿದ್ದು ಅರ್ಧಶತಕದತ್ತ ದಾಪುಗಾಲು ಹಾಕುತ್ತಿದ್ದಾರೆ. ಅನುಭವಿ ವೇಗಿ ಟಿಮ್ ಸೌಥಿ (Tim Southee) ಇಂದು 4  ವಿಕೆಟ್‌ ಸಹಿತ ಒಟ್ಟು 5  ವಿಕೆಟ್ ತಮ್ಮ ಖಾತೆಗೆ ಜಮೆ ಮಾಡಿಕೊಂಡರೇ, ಟೀಂ ಇಂಡಿಯಾ (Team India) ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ 8 ವಿಕೆಟ್ ಕಳೆದುಕೊಂಡು 339 ರನ್‌ ಬಾರಿಸಿದೆ.

ಇಲ್ಲಿನ ಗ್ರೀನ್ ಪಾರ್ಕ್‌ ಮೈದಾನದಲ್ಲಿ (Green Park Stadium) ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯದ ವೇಳೆಗೆ 4  ವಿಕೆಟ್ ಕಳೆದುಕೊಂಡು 258 ರನ್‌ ಬಾರಿಸಿದ್ದ ಭಾರತ, ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆದರೆ ಕಿವೀಸ್ ವೇಗಿ ಟಿಮ್ ಸೌಥಿ ತಮ್ಮ ಕೂಟದ ಎರಡನೇ ಓವರ್‌ನಲ್ಲೇ ಅರ್ಧಶತಕ ಬಾರಿಸಿದ್ದ ರವೀಂದ್ರ ಜಡೇಜಾ (Ravindra Jadeja) ಅವರನ್ನು ಬೌಲ್ಡ್ ಮಾಡಿ ಪೆವಿಲಿಯನ್ನಿಗಟ್ಟಿದರು. ಎರಡನೇ ದಿನದಾಟದಲ್ಲಿ ಜಡೇಜಾ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದರು. ಇದಾದ ಬಳಿಕ ಶ್ರೇಯಸ್ ಅಯ್ಯರ್ (Shreyas Iyer) ತಾವಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Shreyas Iyer gets to his maiden Test ton as post 339/8 at Lunch on Day 2.

Scorecard - https://t.co/WRsJCUhS2d pic.twitter.com/8Yu3nuJDyK

— BCCI (@BCCI)

Tap to resize

Latest Videos

ಭಾರತದ ದಿಢೀರ್ ವಿಕೆಟ್ ಪತನ: ಶ್ರೇಯಸ್ ಅಯ್ಯರ್ ಶತಕ ಬಾರಿಸಿದ ಬೆನ್ನಲ್ಲೇ ಟೀಂ ಇಂಡಿಯಾ ವಿಕೆಟ್ ಕೀಪರ್‌ ಬ್ಯಾಟರ್‌ ವೃದ್ದಿಮಾನ್ ಸಾಹ (Wriddhiman Saha) ಕೇವಲ ಒಂದು ರನ್ ಬಾರಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ (Rishabh Pant) ಬದಲು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಸಾಹ ದೊಡ್ಡ ಮೊತ್ತ ಗಳಿಸಬಹುದು ಎನ್ನುವ ಲೆಕ್ಕಾಚಾರ ತಲೆಕೆಳಗಾಯಿತು. ಇದರ ಬೆನ್ನಲ್ಲೇ 105 ರನ್‌ ಬಾರಿಸಿದ್ದ ಶ್ರೇಯಸ್ ಅಯ್ಯರ್ ಕೂಡಾ ಸೌಥಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಎಡಗೈ ಬ್ಯಾಟರ್‌ ಅಕ್ಷರ್ ಪಟೇಲ್‌(Axar Patel) ಕೇವಲ 3 ರನ್ ಬಾರಿಸಿ, ಬಂದ ವೇಗದಲ್ಲೇ ಪೆವಿಲಿಯನ್‌ಗೆ ವಾಪಾಸ್ಸಾದರು. 

Ind vs NZ Kanpur Test: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಚಚ್ಚಿ ದಾಖಲೆ ಬರೆದ ಶ್ರೇಯಸ್ ಅಯ್ಯರ್‌..!
 
ಟಿಮ್ ಸೌಥಿಗೆ 5  ವಿಕೆಟ್‌ಗಳ ಗೊಂಚಲು: ಕಿವೀಸ್ ಅನುಭವಿ ವೇಗಿ ಟಿಮ್‌ ಸೌಥಿ ಮೊದಲ ದಿನದಾಟದಲ್ಲಿ ಒಂದು ವಿಕೆಟ್ ಕಬಳಿಸಿದ್ದರು. ಎರಡನೇ ದಿನ ಮತ್ತಷ್ಟು ಮಾರಕ ದಾಳಿ ನಡೆಸಿ ನಾಲ್ವರು ಭಾರತದ ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇದರೊಂದಿಗೆ 1980ರ ಬಳಿಕ ಕಾನ್ಪುರದ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ 5 ವಿಕೆಟ್‌ ಕಬಳಿಸಿದ ಕಿವೀಸ್‌ನ ಮೊದಲ ವೇಗದ ಬೌಲರ್ ಎನ್ನುವ ಹಿರಿಮೆಗೆ ಸೌಥಿ ಪಾತ್ರರಾಗಿದ್ದಾರೆ.

ಅರ್ಧಶತಕದತ್ತ ಅಶ್ವಿನ್ ದಾಪುಗಾಲು: ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಭಾರತ ತಂಡ ಒಂದು ಕಡೆ ದಿಢೀರ್ ವಿಕೆಟ್ ಕಳೆದುಕೊಂಡರೂ ಸಹಾ, ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ರವಿಚಂದ್ರನ್ ಅಶ್ವಿನ್ 54 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ ಅಜೇಯ 38 ರನ್‌ ಬಾರಿಸಿದ್ದು, ಅರ್ಧಶತಕದತ್ತ ದಾಪುಗಾಲು ಹಾಕುತ್ತಿದ್ದಾರೆ. ಅಶ್ವಿನ್‌ಗೆ ಉತ್ತಮ ಸಾಥ್ ನೀಡಿರುವ ಉಮೇಶ್ ಯಾದವ್ (Umesh Yadav) 28 ಎಸೆತಗಳನ್ನು ಎದುರಿಸಿ 4 ರನ್‌ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ: 339/8

ಶ್ರೇಯಸ್ ಅಯ್ಯರ್: 105

ಟಿಮ್ ಸೌಥಿ: 69/5

(* ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ)


 

click me!