Ind vs NZ ನಾವು ಸೋತಿದ್ದೇ ಈ ಕಾರಣದಿಂದ..! ಕಿವೀಸ್ ಸೋಲಿಗೆ ನೆಪ ಹೇಳಿದ ಹಾರ್ದಿಕ್ ಪಾಂಡ್ಯ..!

By Naveen KodaseFirst Published Jan 28, 2023, 1:04 PM IST
Highlights

ಭಾರತ-ನ್ಯೂಜಿಲೆಂಡ್‌ ನಡುವಿನ ಮೊದಲ ಪಂದ್ಯ ಗೆದ್ದು ಬೀಗಿದ ನ್ಯೂಜಿಲೆಂಡ್
ಮೊದಲ ಪಂದ್ಯದಲ್ಲಿ 21 ರನ್‌ಗಳ ಗೆಲುವು ದಾಖಲಿಸಿದ ಕಿವೀಸ್ ಪಡೆ
ಮೊದಲ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ

ರಾಂಚಿ(ಜ.28): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ 21 ರನ್‌ಗಳ ರೋಚಕ ಸೋಲು ಅನುಭವಿಸಿದೆ. ಇಲ್ಲಿನ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು ಗೆಲುವಿನೊಂದಿಗೆ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ.

ನ್ಯೂಜಿಲೆಂಡ್ ತಂಡವು ನೀಡಿದ್ದ 177 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ವಾಷಿಂಗ್ಟನ್ ಸುಂದರ್ ಬಾರಿಸಿದ ಚೊಚ್ಚಲ ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಲಷ್ಟೇ ಶಕ್ತವಾಯಿತು. ಇದೀಗ ಈ ಸೋಲಿನ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ, ಇತರೆ ರನ್‌ಗಳ ರೂಪದಲ್ಲಿ ಹೆಚ್ಚುವರಿಯಾಗಿ ರನ್ ಬಿಟ್ಟುಕೊಟ್ಟಿದ್ದು, ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿತು ಎಂದು ಹೇಳಿದ್ದಾರೆ. 

"ಈ ವಿಕೆಟ್ ಹೀಗೆ ವರ್ತಿಸುತ್ತದೆ ಎಂದು ಯಾರೊಬ್ಬರೂ ಯೋಚಿಸಿರಲಿಲ್ಲ. ಈ ಬಗ್ಗೆ ಎರಡು ತಂಡಗಳಿಗೂ ಅಚ್ಚರಿಯೆನಿಸಿತು. ಅವರು ನಮಗಿಂತ ಚೆನ್ನಾಗಿ ಆಡಿದರು. ಹೀಗಾಗಿಯೇ, ಫಲಿತಾಂಶ ಅವರ ಪಾಲಾಯಿತು. ಹಳೆಯ ಚೆಂಡಿಗಿಂತ, ಹೊಸ ಚೆಂಡು ಸಾಕಷ್ಟು ತಿರುವು ಪಡೆಯುತ್ತಿತ್ತು. ಇದು ನಮಗೆ ಅಚ್ಚರಿಯನ್ನುಂಟು ಮಾಡಿತು. ಹೀಗಿದ್ದೂ ನಾವು ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದೆವು. ನಾನು ಹಾಗೂ ಸೂರ್ಯಕುಮಾರ್ ಯಾದವ್ ಕ್ರೀಸ್‌ನಲ್ಲಿದ್ದಾಗ ಪಂದ್ಯ ನಮ್ಮ ಹಿಡಿತದಲ್ಲಿಯೇ ಇತ್ತು. ಈ ಪಿಚ್‌ನಲ್ಲಿ 177 ರನ್ ಬಾರಿಸಿದ್ದು, ಒಳ್ಳೆಯ ಸ್ಕೋರ್. ನಾವು ಬೌಲಿಂಗ್‌ನಲ್ಲಿ 25ಕ್ಕೂ ಅಧಿಕ ರನ್ ಹೆಚ್ಚುವರಿಯಾಗಿ ಬಿಟ್ಟುಕೊಟ್ಟಿದ್ದು, ನಮಗೆ ಹಿನ್ನಡೆಯಾಯಿತು" ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

IND vs NZ ಅಂತಿಮ ಹಂತದಲ್ಲಿ ಸುಂದರ್ ಹೋರಾಟ, ಟಿ20ಯಲ್ಲಿ ಭಾರತಕ್ಕೆ ಸೋಲಿನ ಆಘಾತ!

ಇನ್ನು ಇದೇ ವೇಳೆ ಕೇವಲ 28 ಎಸೆತಗಳನ್ನಾಡಿ ಅರ್ಧಶತಕ ಚಚ್ಚಿದ ವಾಷಿಂಗ್ಟನ್ ಸುಂದರ್ ಆಟದ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇದೊಂದು ಯುವ ಆಟಗಾರರನ್ನೊಳಗೊಂಡ ತಂಡವಾಗಿದ್ದು, ಇದರಿಂದ ನಾವು ಪಾಠ ಕಲಿಯುತ್ತೇವೆ. ಸುಂದರ್, ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದರು. ನಮಗೆ ಈ ರೀತಿ ಬ್ಯಾಟಿಂಗ್, ಬೌಲಿಂಗ್ ಮಾಡುವಂತವರು ತಂಡದಲ್ಲಿದ್ದರೇ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಲಿದೆ" ಎಂದು ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. 

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯಲ್ಲಿ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಕಿವೀಸ್ ತಂಡವು ರೋಚಕ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯವು ಜನವರಿ 29ರಂದು ಲಖನೌದಲ್ಲಿ ಜರುಗಲಿದ್ದು, ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

click me!