
ದುಬೈ(ಸೆ.14): ಇಂಗ್ಲೆಂಡ್ ವಿರುದ್ದದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಲಿದ್ದಾರೆ ಎಂದು ಅಭಿಮಾನಿಗಳು ಆಸೆಗಣ್ಣಿನಿಂದ ಕಾಯುತ್ತಿದ್ದರು. ಆದರೆ ಕೋವಿಡ್ ಭೀತಿಯಿಂದ 5ನೇ ಟೆಸ್ಟ್ ಪಂದ್ಯವು ಕೊನೆಯ ಕ್ಷಣದಲ್ಲಿ ರದ್ದಾಯಿತು. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಯುಎಇ ಚರಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದಿದ್ದಾರೆ. ಇದೀಗ ಕೊಹ್ಲಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ರದ್ದಾದ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
ದುರಾದೃಷ್ಟವಶಾತ್, ಇಂಗ್ಲೆಂಡ್ ಪ್ರವಾಸವನ್ನು ನಾವಿಲ್ಲಿ ಬೇಗ ಮುಗಿಸಬೇಕಾಗಿ ಬಂತು. ಕೋವಿಡ್ ಎಲ್ಲವನ್ನು ಅನಿಶ್ಚಿತತೆಗೆ ದೂಡುವಂತೆ ಮಾಡಿದೆ ಎಂದು ಆರ್‌ಸಿಬಿಯ ಬೋಲ್ಡ್ ಡೈರಿಯಲ್ಲಿ ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ಸಂಭವಿಸಿಸಬಹುದು. ನಾವಿಲ್ಲಿ ಒಳ್ಳೆಯ ಸುರಕ್ಷಿತ ವಾತಾವರಣದಲ್ಲಿದ್ದು, ಗುಣಮಟ್ಟದ ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ.
ಯುಎಇ ಚರಣದ ಐಪಿಎಲ್ ಟೂರ್ನಿಯು ಅತ್ಯಂತ ರೋಚಕ ಘಟ್ಟವಾಗಿದ್ದು, ಆರ್‌ಸಿಬಿ ಹಾಗೂ ಟೀಂ ಇಂಡಿಯಾ ಪಾಲಿಗೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಸಾಕಷ್ಟು ಮಹತ್ವದ್ದಾಗಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಪ್ರಕಟಿಸಿದ ಶಕೀಬ್ ಅಲ್ ಹಸನ್; ಗೇಲ್, ಎಬಿಡಿಗಿಲ್ಲ ಸ್ಥಾನ..!
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವು ರದ್ದಾದ ಮರುದಿನವೇ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ವಿಶೇಷ ವಿಮಾನದ ಮೂಲಕ ಮ್ಯಾಂಚೆಸ್ಟರ್‌ನಿಂದ ಯುಎಇಗೆ ಕರೆ ತಂದಿದೆ. ಸದ್ಯ ಕೊಹ್ಲಿ ಹಾಗೂ ಸಿರಾಜ್ 6 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.