Ind vs Eng ಇಂಗ್ಲೆಂಡ್ ಕಟ್ಟಿಹಾಕುವ ಟೀಂ ಇಂಡಿಯಾದಾಸೆಗೆ ಪೋಪ್‌-ವೋಕ್ಸ್‌ ತಣ್ಣೀರು

Kannadaprabha News   | Asianet News
Published : Sep 04, 2021, 08:14 AM IST
Ind vs Eng ಇಂಗ್ಲೆಂಡ್ ಕಟ್ಟಿಹಾಕುವ ಟೀಂ ಇಂಡಿಯಾದಾಸೆಗೆ ಪೋಪ್‌-ವೋಕ್ಸ್‌ ತಣ್ಣೀರು

ಸಾರಾಂಶ

* ಕುತೂಹಲಘಟ್ಟದತ್ತ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ * ಮೊದಲ ಇನಿಂಗ್ಸ್‌ನಲ್ಲಿ 99 ರನ್‌ಗಳ ಮುನ್ನಡೆ ಪಡೆದ ಇಂಗ್ಲೆಂಡ್‌ * 2ನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 43 ರನ್‌ ಗಳಿಸಿದ ಟೀಂ ಇಂಡಿಯಾ

ಲಂಡನ್(ಸೆ.04)‌: ಐವರು ಬೌಲರ್‌ಗಳನ್ನು ಆಡಿಸುವ ನಾಯಕ ವಿರಾಟ್‌ ಕೊಹ್ಲಿಯ ತಂತ್ರ 4ನೇ ಟೆಸ್ಟ್‌ನಲ್ಲಿ ಕೈಕೊಟ್ಟಿದೆ. ಸ್ಪಿನ್ನರ್‌ ಬದಲು ಹೆಚ್ಚುವರಿ ವೇಗಿಯನ್ನು ಕಣಕ್ಕಿಳಿಸಿದರೂ, ಇಂಗ್ಲೆಂಡ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಆಲೌಟ್‌ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಟೀಂ ಇಂಡಿಯಾಗೆ ಸಾಧ್ಯವಾಗಲಿಲ್ಲ. 62 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ 290 ರನ್‌ ಗಳಿಸಲು ಅವಕಾಶ ಮಾಡಿಕೊಟ್ಟ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್‌ಗಳ ಹಿನ್ನಡೆ ಅನುಭವಿಸಿತು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 43 ರನ್‌ ಗಳಿಸಿದ್ದು, ಇನ್ನೂ 56 ರನ್‌ಗಳ ಹಿನ್ನೆಡೆಯಲ್ಲಿದೆ

ಮೊದಲ ದಿನದಂತ್ಯಕ್ಕೆ ನಾಯಕ ಜೋ ರೂಟ್‌ ಸೇರಿ 3 ವಿಕೆಟ್‌ಗೆ 58 ರನ್‌ ಗಳಿಸಿದ್ದ ಇಂಗ್ಲೆಂಡ್‌, 2ನೇ ದಿನವಾದ ಶುಕ್ರವಾರ ಆರಂಭದಲ್ಲೇ ರಾತ್ರಿ ಕಾವಲುಗಾರ ಕ್ರೇಗ್‌ ಓವರ್‌ಟನ್‌ ವಿಕೆಟ್‌ ಕಳೆದುಕೊಂಡಿತು. ಡೇವಿಡ್‌ ಮಲಾನ್‌(31) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆತಿಥೇಯರನ್ನು 100ರೊಳಗೆ ಆಲೌಟ್‌ ಮಾಡಿ, ಭಾರತ ಸ್ಪರ್ಧಾತ್ಮಕ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಲಿದೆ ಎನ್ನುವ ನಿರೀಕ್ಷೆ ಹುಸಿಯಾಯಿತು.

ಕೈಹಿಡಿದ ಮಧ್ಯಮ ಕ್ರಮಾಂಕ: ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ತಂಡ ಕೈಬಿಡಲಿಲ್ಲ. ಓಲಿ ಪೋಪ್‌ ಹಾಗೂ ಜಾನಿ ಬೇರ್‌ಸ್ಟೋವ್‌ (37), 6ನೇ ವಿಕೆಟ್‌ಗೆ 89 ರನ್‌ ಜೊತೆಯಾಟವಾಡಿದರೆ, 7ನೇ ವಿಕೆಟ್‌ಗೆ ಪೋಪ್‌ ಹಾಗೂ ಮೋಯಿನ್‌ ಅಲಿ 71 ರನ್‌ ಸೇರಿಸಿದರು. ಅಲಿ 35 ರನ್‌ ಗಳಿಸಿ ಔಟಾದ ಬಳಿಕ ಪೋಪ್‌ಗೆ ಜೊತೆಯಾದ ಕ್ರಿಸ್‌ ವೋಕ್ಸ್‌ ತಂಡದ ಮೊತ್ತ 250 ರನ್‌ ತಲುಪಲು ಕಾರಣರಾದರು.

Ind vs Eng ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡ ಇಂಗ್ಲೆಂಡ್

ಪೋಪ್‌ ಆಕರ್ಷಕ ಆಟ 81 ರನ್‌ಗಳಿಗೆ ಅಂತ್ಯವಾದ ನಂತರ ವೋಕ್ಸ್‌ ಅಬ್ಬರದ ಬ್ಯಾಟಿಂಗ್‌ ನಡೆಸಿದರು. ಭಾರತೀಯ ಬೌಲರ್‌ಗಳ ಎಲ್ಲಾ ತಂತ್ರಗಳನ್ನು ವಿಫಲಗೊಳಿಸಿದ ವೋಕ್ಸ್‌, 60 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನೊಂದಿಗೆ 50 ರನ್‌ ಸಿಡಿಸಿದರು. ಭಾರತ ಪರ ಉಮೇಶ್‌ ಯಾದವ್‌ 3, ಬೂಮ್ರಾ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಕಿತ್ತರು.

ಕಾಡಿದ ಆರ್‌.ಅಶ್ವಿನ್‌ ಅನುಪಸ್ಥಿತಿ!

ಓಲಿ ಪೋಪ್‌, ಜಾನಿ ಬೇರ್‌ಸ್ಟೋವ್‌, ಮೋಯಿನ್‌ ಅಲಿ ವಿರುದ್ಧ ಆರ್‌.ಅಶ್ವಿನ್‌ ಉತ್ತಮ ದಾಖಲೆ ಹೊಂದಿದ್ದಾರೆ. ಅವರ ಅನುಪಸ್ಥಿತಿ ತಂಡಕ್ಕೆ ಬಲವಾಗಿ ಕಾಡಿತು. ಅಶ್ವಿನ್‌ರನ್ನು ಆಡಿಸಿದ್ದರೆ ಭಾರತ ಇಷ್ಟು ದೊಡ್ಡ ಮುನ್ನಡೆ ಬಿಟ್ಟುಕೊಡುತ್ತಿರಲಿಲ್ಲ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?