ಇಂಗ್ಲೆಂಡ್ ಎದುರು 5ನೇ ಟೆಸ್ಟ್ ಗೆಲ್ಲೋದಿರಲಿ, ಡ್ರಾ ಮಾಡಿಕೊಂಡರೆ ಅದೇ ದೊಡ್ಡ ಸಾಧನೆ..!

By Suvarna News  |  First Published Jun 29, 2022, 1:50 PM IST

* ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಜುಲೈ 01ರಿಂದ ಆರಂಭ
* ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್ ಮಾಡಿ ಬೀಗುತ್ತಿದೆ ಇಂಗ್ಲೆಂಡ್
* 2007ರ ಬಳಿಕ ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲೋ ಕನಸು ಕಾಣುತ್ತಿದೆ ಭಾರತ


ಲಂಡನ್(ಜೂ.29): ಬರೋಬ್ಬರಿ 15 ವರ್ಷಗಳ ನಂತರ ಕ್ರಿಕೆಟ್ ಜನಕರ ನಾಡಿನಲ್ಲಿ ಟೆಸ್ಟ್​ ಸರಣಿ ಗೆಲ್ಲೋ ಕನಸಿನೊಂದಿಗೆ ಭಾರತೀಯರು ಇಂಗ್ಲೆಂಡ್​ಗೆ ಹೋಗಿದ್ದಾರೆ. ಆದರೆ ಅವರ ಕನಸು ನನಸಾಗೋದು ಅನುಮಾನ. ಭಾರತ 2-1ರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ಉಳಿದ ಒಂದು ಟೆಸ್ಟನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು. ಆಗ ಮಾತ್ರ 2007ರ ಬಳಿಕ ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲೋ ಕನಸು ನನಸಾಗಲಿದೆ. ಆದರೆ ಗೆಲ್ಲೋದಿರಲಿ, ಜುಲೈ 01ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಡ್ರಾ ಮಾಡಿಕೊಂಡರೆ ಅದೇ ಭಾರತೀಯರ ದೊಡ್ಡ ಸಾಧನೆ. ಯಾಕೆ  ಗೊತ್ತಾ..? ಇಂಗ್ಲೆಂಡ್​ ಈಗ ನಾವು ನೀವು ಅಂದುಕೊಂಡಷ್ಟು ದುರ್ಬಲ ತಂಡವಲ್ಲ. ತುಂಬಾನೇ ಸ್ಟ್ರಾಂಗ್ ಆಗಿದೆ.

ಕಿವೀಸ್ ಕಿವಿ ಕಚ್ಚಿರುವ ಆಂಗ್ಲರು: 

Tap to resize

Latest Videos

ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್​ಗೆ ತೆರಳಿದ್ದ ನ್ಯೂಜಿಲೆಂಡ್, ಬರಿಗೈಯಲ್ಲಿ ವಾಪಾಸ್ ಆಗಿದೆ. ಮೂರಕ್ಕೆ ಮೂರು ಟೆಸ್ಟ್​ಗಳನ್ನೂ ಗೆಲ್ಲೋ ಮೂಲಕ ಬೆನ್ ಸ್ಟೋಕ್ಸ್ (Ben Stokes) ನೇತೃತ್ವದ ಆಂಗ್ಲರ ಪಡೆ ಸರಣಿಯನ್ನ ವೈಟ್ ವಾಶ್ ಮಾಡಿ ಕಳುಹಿಸಿದ್ದಾರೆ. 2ನೇ ಟೆಸ್ಟ್ ಅನ್ನ ​ಗೆಲ್ಲೋ ಚಾನ್ಸಸ್ ಇಂಗ್ಲೀಷರಿಗೆ ಇರಲಿಲ್ಲ. ಆದರೆ ಅಸಾಧ್ಯವಾಗಿದ್ದನ್ನು ಸಾಧ್ಯವಾಗಿ ತೋರಿಸಿದ್ದಾರೆ. ಇನ್ನೊಂದು ವಿಶೇಷ ಅಂದರೆ ಮೂರು ಟೆಸ್ಟ್​ಗಳನ್ನೂ ಇಂಗ್ಲೆಂಡ್ ಕ್ರಿಕೆಟ್ ತಂಡವು ಚೇಸ್ ಮಾಡಿ ಗೆದ್ದಿದೆ. ಅದು ಒನ್​ಡೇ-ಟಿ20 ಸ್ಟೈಲ್​ನಲ್ಲಿ.

ಮೊದಲ ಟೆಸ್ಟ್:78.5 ಓವರ್​​​​ನಲ್ಲಿ 279 ರನ್..! 

ಲಾರ್ಡ್ಸ್‌ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್​​ನಲ್ಲಿ ಇಂಗ್ಲೆಂಡ್ ಗೆಲುವಿಗೆ 277 ರನ್ ಟಾರ್ಗೆಟ್ ನೀಡಿತ್ತು ನ್ಯೂಜಿಲೆಂಡ್. ಈ ಸ್ಕೋರ್ ಅನ್ನು ಆಂಗ್ಲರು ಕೇವಲ 78.9 ಓವರ್​ನಲ್ಲೇ ಹೊಡೆದು ಗೆಲುವಿನ ಸಂಭ್ರಮ ಆಚರಿಸಿದ್ರು. ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ (Joe Root) ಅಜೇಯ ಶತಕ ಸಿಡಿಸಿದ್ರೆ, ನೂತನ ಟೆಸ್ಟ್‌ ನಾಯಕ ಬೆನ್ ಸ್ಟೋಕ್ಸ್ ಅರ್ಧಶತಕ ಬಾರಿಸಿದ್ರು.

Ind vs Eng: ಭಾರತ ಎದುರಿನ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

ದ್ವಿತೀಯ ಟೆಸ್ಟ್: 50 ಓವರ್​ನಲ್ಲಿ 299 ರನ್​..!

2ನೇ ಟೆಸ್ಟ್ ಗೆಲ್ಲಲು ಇಂಗ್ಲೆಂಡ್ ಸುಮಾರು 72 ಓವರ್​ನಲ್ಲಿ 299 ರನ್ ಬಾರಿಸಬೇಕಿತ್ತು. ಕೊನೆಯ ದಿನವಾಗಿದ್ದರಿಂದ ಟೆಸ್ಟ್​ ಡ್ರಾ ಆಗುವ ನಿರೀಕ್ಷೆಗಳಿದ್ದವು. ಆದ್ರೆ ಜಾನಿ ಬೇರ್​ಸ್ಟೋವ್ (Jonny Bairstow)​ 92 ಬಾಲ್​ನಲ್ಲಿ 136 ರನ್ ಬಾರಿಸಿದ್ರೆ, ನಾಯಕ ಬೆನ್ ಸ್ಟೋಕ್ಸ್ 75 ರನ್ ಹೊಡೆದು ಕೇವಲ 50 ಓವರ್​ನಲ್ಲೇ ಮ್ಯಾಚ್ ಮುಗಿಸಿದ್ರು.

3ನೇ ಟೆಸ್ಟ್​: 54.3 ಓವರ್​ನಲ್ಲಿ 296 ರನ್​..! 

ಇನ್ನು ಲೀಡ್ಸ್‌ನಲ್ಲಿ ನಡೆದ 3ನೇ ಹಾಗೂ ಕೊನೆಯ ಟೆಸ್ಟ್ ಗೆಲ್ಲಲು ಇಂಗ್ಲೆಂಡ್​ಗೆ 296 ರನ್ ಟಾರ್ಗೆಟ್ ಸಿಕ್ಕಿತು. ಜಸ್ಟ್ 54.3 ಓವರ್​ನಲ್ಲಿ ಈ ಟಾರ್ಗೆಟ್ ಬೆನ್ನಟ್ಟಿ ಗೆದ್ದಿದ್ದಾರೆ ಆಂಗ್ಲರು. ಇಲ್ಲೂ ಜಾನಿ ಬೇರ್‌ಸ್ಟೋವ್ 44 ಬಾಲ್​ನಲ್ಲಿ 71 ರನ್ ಸಿಡಿಸಿದ್ರು.

ಜಾನಿ ಬೇರ್‌ಸ್ಟೋವ್ ಈ ಸಿರೀಸ್​ನಲ್ಲಿ 3 ಟೆಸ್ಟ್​ಗಳಿಂದ 394 ರನ್ ಬಾರಿಸಿದ್ದಾರೆ. ಬರೋಬ್ಬರಿ 120ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿರೋದು ಭಾರತೀಯರಿಗೆ ಭಯ ಹುಟ್ಟಿಸಿದೆ. ಇದಕ್ಕೆ ನಾವ್ ಮೊದಲೇ ಹೇಳಿದ್ದು, ಟೀಂ ಇಂಡಿಯಾ ಏಕೈಕ ಟೆಸ್ಟ್ ಗೆಲ್ಲೋದಿರಲಿ, ಡ್ರಾ ಮಾಡಿಕೊಂಡರೇ ಅದೇ ದೊಡ್ದ ಸಾಧನೆ ಅಂತ.

ಭಾರತ ಎದುರಿನ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ

ಬೆನ್ ಸ್ಟೋಕ್ಸ್‌(ನಾಯಕ), ಜೇಮ್ಸ್‌ ಆ್ಯಂಡರ್‌ಸನ್, ಜಾನಿ ಬೇರ್‌ಸ್ಟೋವ್, ಜೋ ರೂಟ್, ಸ್ಯಾಮ್ ಬಿಲ್ಲಿಂಗ್ಸ್‌, ಸ್ಟುವರ್ಟ್‌ ಬ್ರಾಡ್, ಹ್ಯಾರಿ ಬ್ರೂಕ್, ಜಾಕ್ ಕ್ರಾಲೇ, ಬೆನ್ ಫೋಕ್ಸ್, ಜಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್‌ಟನ್, ಜೇಮ್ಸ್ ಓವರ್‌ಟನ್, ಮ್ಯಾಥ್ಯೂ ಪೋಟ್ಸ್‌, ಓಲಿ ಪೋಪ್

click me!