ಕನ್ನಡಿಗನ ಅಬ್ಬರಕ್ಕೆ ಇಂಗ್ಲೆಂಡ್ ಧೂಳೀಪಟ; ಮೊದಲ ಏಕದಿನ ಭಾರತದ ಕೈವಶ!

By Suvarna NewsFirst Published Mar 23, 2021, 9:43 PM IST
Highlights

ಟೀಂ ಇಂಡಿಯಾ ಅಬ್ಬರಕ್ಕೆ ಇಂಗ್ಲೆಂಡ್ ಧೂಳೀಪಟವಾಗಿದೆ. ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಹಾಗೂ ಕನ್ನಡಿಗ ಪ್ರಸಿದ್ ಕೃಷ್ಣ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರಿಸಿದೆ. 

ಪುಣೆ(ಮಾ.23):  ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಶುಭಾರಂಭ ಮಾಡಿದೆ. ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 66 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

IND vs ENG: ಶ್ರೇಯಸ್ ಅಯ್ಯರ್, ರೋಹಿತ್ ಶರ್ಮಾಗೆ ಇಂಜುರಿ; ಆಸ್ಪತ್ರೆಗೆ ದಾಖಲು!

ಟೀಂ ಇಂಡಿಯಾ ನೀಡಿದ ಬೃಹತ್ ಗುರಿಗೆ ಉತ್ತರವಾಗಿ ಇಂಗ್ಲೆಂಡ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋ ಆರಂಭ ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಮೇಲುಗೈ ಸಾಧಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 135 ರನ್ ಸಿಡಿಸಿತು. ಇದು ಟೀಂ ಇಂಡಿಯಾಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿತು.

ಭಾವುಕರಾಗಿ ಕ್ರೀಸ್‌ಗಿಳಿದ ಕ್ರುನಾಲ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್; ಹಲವು ದಾಖಲೆ ಉಡೀಸ್!

ಗಟ್ಟಿಯಾಗಿ ನೆಲೆಯೂರಿದ ಆರಂಭಿಕರನ್ನು ಬೇರ್ಪಡಿಸುವಲ್ಲಿ ಕನ್ನಡಿಗ ಪ್ರಸಿದ್ ಕೃಷ್ಣ ಯಶಸ್ವಿಯಾದರು. ಪದಾರ್ಪಣಾ ಪಂದ್ಯದಲ್ಲಿ ಮೊದಲ ವಿಕೆಟ್ ಕಬಳಿಸಿ ಪ್ರಸಿದ್ ಸಂಭ್ರಮಿಸಿದರು. ರಾಯ್ 46 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ  ಬೆನ್ ಸ್ಟೋಕ್ಸ್ ವಿಕೆಟ್ ಕೂಡ ಪತನಗೊಂಡಿತು.

ಅಬ್ಬರಿಸಿದ ಜಾನಿ ಬೈರ್‌ಸ್ಟೋ 94 ರನ್ ಸಿಡಿಸಿ ಔಟಾದರು. ನಾಯಕ ಇಯಾನ್ ಮಾರ್ಗನ್ ಕೇವಲ 22 ರನ್ ಸಿಡಿಸಿ ನಿರ್ಗಮಿಸಿದರು. ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವಿಕೆಟ್ ಪತಗೊಳ್ಳುತ್ತಿದ್ದಂತೆ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ಮೊಯಿನ್ ಆಲಿ ಜೊತಯಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು.

ಪ್ರಸಿದ್ ಕೃಷ್ಮ ಅದ್ಭುತ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರಿಸಿತು. 4 ವಿಕೆಟ್ ಕಬಳಿಸಿದ ಕನ್ನಡಿಗ ಟೀಂ ಇಂಡಿಯಾಗೆ ಗೆಲುವಿಗೆ ಪ್ರಮುಖ ಕಾರಣರಾದರು. 42.1 ಓವರ್‌ಗಳಲ್ಲಿ ಇಂಗ್ಲೆಂಡ್ 251 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 66 ರನ್ ಗೆಲುವು ಸಾಧಿಸಿತು. ಶಾರ್ದೂಲ್ ಠಾಕೂರ್ 3, ಭುವನೇಶ್ವರ್ ಕುಮಾರ್ 2 ಹಾಗೂ ಕ್ರುನಾಲ್ ಪಾಂಡ್ಯ ಒಂದು ವಿಕೆಟ್ ಕಬಳಿಸಿದರು.

click me!