Ind vs Ban: ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದ ರೋಹಿತ್ ಶರ್ಮಾ..!

By Naveena K VFirst Published Dec 19, 2022, 5:29 PM IST
Highlights

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಡಿಸೆಂಬರ್ 22ರಿಂದ ಆರಂಭ
ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದ ನಾಯಕ ರೋಹಿತ್ ಶರ್ಮಾ
ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ

ಮುಂಬೈ(ಡಿ.19): ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೈ ಬೆರಳಿನ ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಅವರು ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದಿಂದಲೂ ರೋಹಿತ್ ಶರ್ಮಾ ಹೊರಬಿದ್ದಿದ್ದಾರೆ.

ಹೌದು, ಈ ತಿಂಗಳಾರಂಭದಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ರೋಹಿತ್ ಶರ್ಮಾ, ಕೈಬೆರಳಿನ ಗಾಯಕ್ಕೊಳಗಾಗಿದ್ದರು. ಹೀಗಾಗಿ ಮೂರನೇ ಏಕದಿನ ಹಾಗೂ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಕಳೆದೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಛಟ್ಟೋಗ್ರಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 188 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಟೆಸ್ಟ್‌ ವಿಶ್ವಕಪ್‌: ಬಾಂಗ್ಲಾ ಮಣಿಸಿ 2ನೇ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

ಕ್ರಿಕೆಟ್ ವೆಬ್‌ಸೈಟ್ Cricbuzz ವರದಿಯ ಪ್ರಕಾರ, ರೋಹಿತ ಶರ್ಮಾ ಎರಡನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಡಿಸೆಂಬರ್ 22ರಿಂದ ಮಿರ್‌ಪುರ್‌ನಲ್ಲಿ ಆರಂಭವಾಗಲಿದೆ. ರೋಹಿತ್ ಶರ್ಮಾ ಮಿರ್‌ಪುರದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ, ಆದರೆ ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎನ್ನಲಾಗುತ್ತಿದೆ.

ಭಾರತ ಕ್ರಿಕೆಟ್ ತಂಡವು ಮುಂಬರುವ ದಿನಗಳಲ್ಲಿ ಮಹತ್ವದ ಸರಣಿಗಳನ್ನು ಆಡಲಿದೆ. ಹೀಗಾಗಿ ಬಿಸಿಸಿಐ ಹಾಗೂ ಆಯ್ಕೆ ಸಮಿತಿಯು ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ರೆಡಿಯಿಲ್ಲ. ಸದ್ಯ ರೋಹಿತ್ ಶರ್ಮಾ, ಬ್ಯಾಟಿಂಗ್ ಮಾಡಲು ಸಂಪೂರ್ಣವಾಗಿ ಸಿದ್ದರಿದ್ದಾರೆ. ಆದರೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಿಂದಲೂ ರೋಹಿತ್ ಶರ್ಮಾ ಹೊರಗುಳಿಯಲಿದ್ದಾರೆ. ಇನ್ನು ರೋಹಿತ್ ಶರ್ಮಾ, ಜನವರಿ 03ರಿಂದ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕೂಡಿಕೊಳ್ಳುವ ಸಾಧ್ಯತೆಯಿದೆ.

ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆರಂಭಿಕನಾಗಿ ಸ್ಥಾನ ಗಿಟ್ಟಿಸಿಕೊಂಡಿರುವ ಶುಭ್‌ಮನ್ ಗಿಲ್‌, ಬಾಂಗ್ಲಾದೇಶ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಇದೀಗ ಗಿಲ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ. ಇನ್ನುಳಿದಂತೆ ಚೇತೇಶ್ವರ್ ಪೂಜಾರ ಕೂಡಾ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತೆ ಆಗಿದೆ.

click me!