Ind vs Ban ಬಾಂಗ್ಲಾದೇಶ ಎದುರಿನ ಸರಣಿಗೆ ರೋಹಿತ್ ಶರ್ಮಾ ಅನುಮಾನ, ಈ ಆಟಗಾರನಿಗೆ ಸ್ಥಾನ..?

By Naveena K VFirst Published Dec 8, 2022, 4:52 PM IST
Highlights

ಬಾಂಗ್ಲಾದೇಶ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಗಾಯಗೊಂಡ ರೋಹಿತ್ ಶರ್ಮಾ
ಕೊನೆಯ ಏಕದಿನ ಹಾಗೂ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅಲಭ್ಯ ಸಾಧ್ಯತೆ
ಅಭಿಮನ್ಯು ಈಶ್ವರನ್‌ಗೆ ಬುಲಾವ್ ಬರುವ ಸಾಧ್ಯತೆ

ಢಾಕಾ(ಡಿ.08): ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಹಾಗೂ ಮೊದಲ ಟೆಸ್ಟ್‌ನಲ್ಲಿ ಭಾರತದ ನಾಯಕ ರೋಹಿತ್‌ ಶರ್ಮಾ ಆಡುವುದು ಅನುಮಾನವೆನಿಸಿದೆ. ಬಾಂಗ್ಲಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುವಾಗ ಅವರು ಎಡಗೈ ಹೆಬ್ಬೆರಳಿನ ಗಾಯಕ್ಕೆ ತುತ್ತಾದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನ್‌ ಮಾಡಿಸಿ ಹೊಲಿಗೆ ಹಾಕಿಸಲಾಯಿತು. ಬಳಿಕ ರೋಹಿತ್‌ ಬ್ಯಾಟಿಂಗ್‌ಗಿಳಿಯಬೇಕಾದ ಅನಿವಾರ್ಯತೆ ಎದುರಾಯಿತು. ಹೀಗಾಗಿ ಗಾಯದ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ತಂಡದ ಮೂಲಗಳು ತಿಳಿಸಿವೆ. ಹೀಗಾಗಿ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಗೆ ಮೀಸಲು ಆಟಗಾರನಾಗಿ ಭಾರತ 'ಎ' ತಂಡದ ನಾಯಕ ಅಭಿಮನ್ಯು ಈಶ್ವರನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯು ಡಿಸೆಂಬರ್ 14ರಿಂದ ಆರಂಭವಾಗಲಿದೆ. ಟೆಸ್ಟ್‌ ಸರಣಿಗೆ ರೋಹಿತ್ ಶರ್ಮಾ ಬಹುತೇಕ ಅಲಭ್ಯರಾಗುವ ಸಾಧ್ಯತೆಯಿದ್ದು ಅಭಿಮನ್ಯು ಈಶ್ವರನ್‌ ಅವರಿಗೆ ತಂಡ ಕೂಡಿಕೊಳ್ಳಲು ಬುಲಾವ್ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ. 

ಆರಂಭಿಕ ಆಟಗಾರನಾಗಿರುವ ಅಭಿಮನ್ಯು ಈಶ್ವರನ್‌, ಭಾರತ 'ಎ' ಸರಣಿಯಲ್ಲಿ ಸತತ ಎರಡು ಶತಕ ಸಿಡಿಸಿದ್ದಾರೆ. ಎರಡನೇ ಭಾರತ  'ಎ' ಟೆಸ್ಟ್ ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಅಭಿಮನ್ಯು ಈಶ್ವರನ್‌, ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಬಾಂಗ್ಲಾದೇಶ ಎದುರಿನ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಗಾಯದ ಭೀತಿಗೆ ಸಿಲುಕಿದೆ. ಕೆಲ ಆಟಗಾರರು ಗಾಯದ ಸುಳಿಗೆ ಸಿಲುಕಿರುವುದು ಟೀಂ ಇಂಡಿಯಾದ ತಲೆನೋವು ಹೆಚ್ಚುವಂತೆ ಮಾಡಿದೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಲು ಬಾಂಗ್ಲಾದೇಶ ಎದುರು ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಟೀಂ ಇಂಡಿಯಾಗೆ ಅನಿವಾರ್ಯ ಎನಿಸಿಕೊಂಡಿದೆ. 

ಇನ್ನು ಎರಡನೇ ಏಕದಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬಾಂಗ್ಲಾದೇಶ ಎದುರಿನ ಮೂರನೇ ಏಕದಿನ ಪಂದ್ಯ ಹಾಗೂ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ ಎಂದು ಹೇಳಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ, ಟೆಸ್ಟ್ ಸರಣಿಯಿಂದ ಹೊರಗುಳಿದರೆ ಕೆ ಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದ್ದು, ರಾಹುಲ್‌ ಜತೆಗೆ ಶುಭ್‌ಮನ್ ಗಿಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Ind vs Ban ಬಾಂಗ್ಲಾದೇಶ ಎದುರು ಸರಣಿ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಹೇಳಿದ್ದೇನು..?

ರೋಹಿತ್ ಶರ್ಮಾ ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ಕೈಬೆರಳಿನ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದರು. ಇದಾದ ಬಳಿಕ ಸ್ಥಳೀಯ ಆಸ್ಪತ್ರೆಗೆ ತೆರಳಿ ಗಾಯದ ತೀವ್ರತೆ ಅರಿಯಲು ಸ್ಕ್ಯಾನ್ ಮಾಡಿಸಿಕೊಂಡಿದ್ದರು. ಹೀಗಿದ್ದೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ರೋಹಿತ್ ಶರ್ಮಾ ಕೇವಲ 28 ಎಸೆತಗಳಲ್ಲಿ ಅಜೇಯ 51 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ. ಬಾಂಗ್ಲಾದೇಶ ನೀಡಿದ್ದ 272 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ 5 ರನ್ ರೋಚಕ ಸೋಲು ಅನುಭವಿಸಿತ್ತು. 

click me!