Ind vs Aus 2019ರ ಬಳಿಕ ತವರಿನಲ್ಲಿ ಏಕದಿನ ಸರಣಿ ಸೋತು ನಂ.1 ಪಟ್ಟ ಕಳೆದುಕೊಂಡ ಟೀಂ ಇಂಡಿಯಾ..!

By Naveen KodaseFirst Published Mar 23, 2023, 8:56 AM IST
Highlights

ಆಸೀಸ್ ಎದುರು ಏಕದಿನ ಸರಣಿ ಕೈಚೆಲ್ಲಿದ ಟೀಂ ಇಂಡಿಯಾ
2019ರ ಬಳಿಕ ತವರಿನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಏಕದಿನ ಸರಣಿ ಸೋಲು
ಏಕದಿನ ಶ್ರೇಯಾಂಕದಲ್ಲಿ ನಂ.1 ಪಟ್ಟದಿಂದ ಜಾರಿದ ರೋಹಿತ್ ಶರ್ಮಾ ಪಡೆ

ಚೆನ್ನೈ(ಮಾ.23): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ 21 ರನ್‌ಗಳ ಆಘಾತಕಾರಿ ಸೋಲು ಕಾಣುವ ಮೂಲಕ 1-2 ಅಂತರದಲ್ಲಿ ಸರಣಿಯನ್ನು ಕೈಚೆಲ್ಲಿದೆ. 2019ರ ಬಳಿಕ ಸತತ 7 ಏಕದಿನ ಸರಣಿ ಗೆದ್ದು ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾ ಗೆಲುವಿನ ನಾಗಾಲೋಟಕ್ಕೆ ಆಸ್ಟ್ರೇಲಿಯಾ ಬ್ರೇಕ್ ಹಾಕಿದೆ. ಇದಷ್ಟೇ ಅಲ್ಲದೇ ಟೀಂ ಇಂಡಿಯಾ ಐಸಿಸಿ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನವನ್ನು ಕಳೆದುಕೊಂಡಿದೆ.

ಹೌದು, ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 21 ರನ್‌ಗಳ ಸೋಲು ಕಂಡಿದೆ. ಕಳೆದ ಜನವರಿ 2023ರಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿತ್ತು. ಈ ಮೂಲಕ ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿತ್ತು. ಇದಾದ ಬಳಿಕ ಶ್ರೀಲಂಕಾ ಎದುರು ಟೀಂ ಇಂಡಿಯಾ 3-0 ಅಂತರದಲ್ಲಿ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಮೂಲಕ ಅರ್ಹ ಗೆಲುವು ದಾಖಲಿಸಿತ್ತು. ಇನ್ನು ಇದಾದ ಬಳಿಕ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.

ಟೀಂ ಇಂಡಿಯಾ ಈ ವರ್ಷದಲ್ಲಿಯೇ ಸತತ 8 ಏಕದಿನ ಪಂದ್ಯಗಳನ್ನು ಜಯಿಸುವ ಮೂಲಕ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸರಿಯಾದ ದಿಕ್ಕಿನತ್ತ ಸಾಗುತ್ತಿತ್ತು. ಆದರೆ ಆಸ್ಟ್ರೇಲಿಯಾ ತಂಡವು ವೈಜಾಗ್ ಹಾಗೂ ಚೆನ್ನೈನಲ್ಲಿ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತಕ್ಕೆ ತವರಿನಲ್ಲಿಯೇ ಶಾಕ್ ನೀಡುವಲ್ಲಿ ಕಾಂಗರೂ ಪಡೆ ಯಶಸ್ವಿಯಾಗಿದೆ.

ಇದೀಗ ತವರಿನಲ್ಲಿ ಏಕದಿನ ಸರಣಿಯನ್ನು ಸೋತ ಬೆನ್ನಲ್ಲೇ ಟೀಂ ಇಂಡಿಯಾ, ಇದೀಗ ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಆದರೆ 113 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ಜತೆ ಸಮಬಲ ಸಾಧಿಸಿದೆ. ಇನ್ನು ಅಚ್ಚರಿಯ ಸಂಗತಿಯೆಂದರೆ, ಟೀಂ ಇಂಡಿಯಾ, ಈ ಮೊದಲು ಕೊನೆಯ ಬಾರಿಗೆ ಆಸ್ಟ್ರೇಲಿಯಾ ಎದುರೇ ತವರಿನಲ್ಲಿ ಏಕದಿನ ಸರಣಿಯನ್ನು ಕೈಚೆಲ್ಲಿತ್ತು. 2019ರ ಮಾರ್ಚ್‌ನಲ್ಲಿ ತವರಿನಲ್ಲಿ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-3 ಅಂತರದಲ್ಲಿ ಆಸ್ಟ್ರೇಲಿಯಾಗೆ ಶರಣಾಗಿತ್ತು.

ಇನ್ನು ಮೂರನೇ ಏಕದಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 49 ಓವರ್‌ಗಳನ್ನಾಡಿ 269 ರನ್ ಬಾರಿಸಿ ಸರ್ವಪತನ ಕಂಡಿತು. ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟರ್ ಕೂಡಾ ಅರ್ಧಶತಕ ಬಾರಿಸಲು ಸಫಲರಾಗಲಿಲ್ಲ. ಭಾರತ ಪರ ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡೆರಡು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.

ಇನ್ನು ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿದರು. ಇನ್ನು ಹಾರ್ದಿಕ್ ಪಾಂಡ್ಯ 40 ರನ್ ಬಾರಿಸಿದರು ತಂಡವನ್ನು ಗೆಲುವಿನ ದಡ ಸೇರಿಸಲು ಯಶಸ್ವಿಯಾಗಲಿಲ್ಲ. ಆಸೀಸ್‌ ಸ್ಪಿನ್ನರ್ ಆಡಂ ಜಂಪಾ 45 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಅಂತಿಮವಾಗಿ ಟೀಂ ಇಂಡಿಯಾ 49.1 ಓವರ್‌ಗಳಿಗೆ 248 ರನ್ ಬಾರಿಸಿ ಸರ್ವಪತನ ಕಂಡಿತು.

click me!