IND vs AUS ಆಸ್ಟ್ರೇಲಿಯಾ ವಿರುದ್ಧ 1ನೇ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಶಾಕ್, ಜಡೇಜಾಗೆ ದಂಡ!

By Suvarna NewsFirst Published Feb 11, 2023, 3:54 PM IST
Highlights

ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ. ಮೊದಲ ಪಂದ್ಯವನ್ನು ಕೇವಲ ಮೂರೇ ದಿನಕ್ಕೆ ಮುಗಿಸಿರುವ ಟೀಂ ಇಂಡಿಯಾ  ಇನ್ನಿಂಗ್ಸ್ ಹಾಗೂ 132 ರನ್ ಗೆಲುವು ದಾಖಲಿಸಿದೆ. ಆದರೆ ಗೆಲುವಿನ ಸಂಭ್ರಮದ ನಡುವೆ ಭಾರತಕ್ಕೆ ಹಿನ್ನಡೆಯಾಗಿದೆ. ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾಗೆ ದಂಡ ಹಾಗೂ ಡಿಮೆರಿಟ್ ಪಾಯಿಂಟ್ ಪೆನಾಲ್ಟಿ ಹಾಕಲಾಗಿದೆ.
 

ನಾಗ್ಪುರ(ಫೆ.11): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ಸ್ ಆರ್ಭಟ ಜೋರಾಗಿತ್ತು. ಇದರ ಪರಿಣಾಮ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಭಾರತ ಇನ್ನಿಂಗ್ಸ್ ಹಾಗೂ 132 ರನ್ ಗೆಲುವು ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಗೆಲುವಿನ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಅಲ್ರೌಂಡರ್ ರವೀಂದ್ರ ಜಡೇಜಾಗೆ ಐಸಿಸಿ ದಂಡ ವಿಧಿಸಿದೆ. ಜೊತೆಗೆ 2.20ರ ನಿಯಮ ಉಲ್ಲಂಘನೆ ಕಾರಣ ಡಿಮೆರಿಟ್ ಪಾಯಿಂಟ್ ಪೆನಾಲ್ಟಿ ರೂಪದಲ್ಲಿ ಹಾಕಲಾಗಿದೆ. ಇದೀಗ ರವೀಂದ್ರ ಜಡೇಜಾ ಪಂದ್ಯದ ಶೇಕಡಾ 25 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಐಸಿಸಿಗೆ ಪಾವತಿಸಿಬೇಕು. 

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮೂರು ದಿನಕ್ಕೆ ಮುಕ್ತಾಯವಾಗಿದೆ. ಆದರೆ ಮೊದಲ ದಿನದಲ್ಲಿ ವಿವಾದವೊಂದು ಸೃಷ್ಟಿಯಾಗಿತ್ತು. ರವೀಂದ್ರ ಜಡೇಡಾ ಚೆಂಡು ವಿರೂಪಗೊಳಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಆಸ್ಟ್ರೇಲಿಯಾ ಮಾಧ್ಯಮ ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದರು. ಈ ವಿವಾದ ಭಾರಿ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಅಸಲಿಗೆ ರವೀಂದ್ರ ಜಡೇಜಾ ಕೆಬೆರಳಿಗೆ ಗಾಯವಾಗಿದ್ದ ಕಾರಣ ನೋವಿನ ಮುಲಾಮು ಹಚ್ಚಿದ್ದರು. ಪೈನ್ ರಿಲೀಫ್ ಕ್ರೀಮ್ ಹಚ್ಚಿ ಜಡೇಜಾ ಬೌಲಿಂಗ್ ಮಾಡಿದ್ದರು. ಆದರೆ ಈ ಕ್ರೀಮ್‌ನಿಂದ ಚೆಂಡು ವಿರೂಪಗೊಳ್ಳುವ ಸಾಧ್ಯತೆ ಇದೆ. ಈ ಹಿಂದಿನ ಹಲವು ಘಟನೆಗಳು ಇದೇ ರೀತಿ ನಡೆದಿದೆ ಅನ್ನೋ ಆರೋಪ ಕೇಳಿಬಂದಿತ್ತು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಕೈಗೆ ಹಚ್ಚಿದ ಕ್ರೀಮ್ ಮಾಹಿತಿ ಬಹಿರಂಗ!

ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿ ಬಂದ ಬೆನ್ನಲ್ಲೇ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಐಸಿಸಿ ಮ್ಯಾಚ್ ರೆಫ್ರಿ ಆ್ಯಂಡಿ ಪೇಕ್ರಾಫ್ಟ್‌ಗೆ ಸ್ಪಷ್ಟನೆ ನೀಡಿತ್ತು. ಮೊಹಮ್ಮದ್ ಸಿರಾಜ್ ಆಗಮಿಸಿ ರವೀಂದ್ರ ಜಡೇಜಾ ಕೈಬೆರಳಿಗೆ ಹಚ್ಚಿರುವುದು ನೋವಿನ ಮುಲಾಮು. ಇಷ್ಟೇ ಅಲ್ಲ ಬಾಲ್ ಟ್ಯಾಂಪರ್ ಮಾಡುವ ಯಾವುದೇ ಉದ್ದೇಶ ಇಲ್ಲ. ನೋವಿನಿಂದ ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ಪೈನ್ ರಿಲೀಫ್ ಕ್ರೀಮ್ ಹಚ್ಚಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು. 

ಭಾರತದ ತಂಡದ ಮ್ಯಾನೇಜ್ಮೆಂಟ್ ಸ್ಪಷ್ಟನೆಯನ್ನು ಐಸಿಸಿ ಆಲಿಸಿತ್ತು. ಆದರೆ ರವೀಂದ್ರ ಜಡೇಜಾ ಐಸಿಸಿಯ ಒಂದು ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿತ್ತು. ರವೀಂದ್ರ ಜಡೇಜಾ ನೋವಿನ ಮುಲಾಮ್ ಹಚ್ಚುವ ಮುನ್ನ ಫೀಲ್ಡ್ ಅಂಪೈರ್ ಬಳಿಯಿಂದ ಅನುಮತಿ ಪಡೆಯಬೇಕಿತ್ತು. ಆದರೆ ಜಡೇಜಾ ಅನುಮತಿ ಪಡೆಯದೇ ಮುಲಾಮು ಹಚ್ಚಿದ್ದಾರೆ. ಹೀಗಾಗಿ ಇದು ಐಸಿಸಿ ಆರ್ಟಿಕಲ್ 2.20ರ ಉಲ್ಲಂಘನೆಯಾಗಿದೆ. ಈ ಕಾರಣಕ್ಕಾಗಿ ಪಂದ್ಯ ಶೇಕಡಾ 25ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸಬೇಕು. ಇದರ ಜೊತೆ ಡೀಮೆರಿಟ್ ಪಾಯಿಂಟ್ ಕೂಡ ವಿಧಿಸಲಾಗಿದೆ.

ಐಸಿಸಿ ಮ್ಯಾಚ್ ರೆಫ್ರಿ ಆ್ಯಂಡಿ ಪೇಕ್ರಾಫ್ಟ್ ಬಳಿ ರವೀಂದ್ರ ಜಡೇಜಾ ಅನುಮತಿ ಪಡೆಯದೇ ಕ್ರೀಮ್ ಹಚ್ಚಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜಡೇಜಾ ವಿರುದ್ದ ಲೆವೆಲ್ 1 ಸ್ಯಾಂಕ್ಷನ್ ಹಾಕಲಾಗಿದೆ. ಇತ್ತ ರವೀಂದ್ರ ಜಡೇಜಾ ಹಚ್ಚಿರುವ ಮುಲಾಮು ವೈದ್ಯಕೀಯ ಉದ್ದೇಶಕ್ಕಾಗಿ ಅನ್ನೋದು ಸಾಬೀತಾಗಿದೆ. ಹಲವು ಟೀಂ ಇಂಡಿಯಾ ಹಾಗೂ ವಿದೇಶಿ ಕ್ರಿಕೆಟಿಗರು ರವೀಂದ್ರ ಜಡೇಜಾಗೆ ಬೆಂಬಲ ನೀಡಿದ್ದಾರೆ. 

NAGPUR TEST: ಅಶ್ವಿನ್‌ ಸ್ಪಿನ್‌ ಬಿರುಗಾಳಿಗೆ ಆಸೀಸ್ ಧೂಳೀಪಟ, ಮೊದಲ ಟೆಸ್ಟ್‌ ಭಾರತದ ಪಾಲು

ಆಸ್ಪ್ರೇಲಿಯಾದ ಮಾಧ್ಯಮವೊಂದು ಜಡೇಜಾ ವಿರುದ್ದ ಚೆಂಡು ವಿರೂಪ ಆರೋಪ ಮಾಡಿತ್ತು. ಬಳಿಕ ಇದು ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮೊದಲ ದಿನದಾಟದ ವೇಳೆ ಬೌಲಿಂಗ್‌ಗೆ ತಯಾ​ರಾ​ಗು​ತ್ತಿದ್ದ ಜಡೇಜಾ, ವೇಗಿ ಸಿರಾಜ್‌ ಅವರ ಕೈಯಿಂದ ದ್ರವವನ್ನು ತೆಗೆದು ತಮ್ಮ ಎಡಗೈ ಬೆ​ರ​ಳಿಗೆ ಹಚ್ಚುವ ವಿಡಿ​ಯೋ​ವೊಂದು ಸಾಮಾ​ಜಿಕ ತಾಣ​ಗ​ಳಲ್ಲಿ ವೈರಲ್‌ ಆಗಿದೆ. 

click me!