ಈ ಬೌಲಿಂಗ್ ಪಡೆ ಇಟ್ಟುಕೊಂಡು RCB ಈ ಸಲ ಐಪಿಎಲ್ ಕಪ್ ಗೆಲ್ಲೋದು ಸಾಧ್ಯವೇ ಇಲ್ಲ

Published : Mar 30, 2024, 12:20 PM IST
ಈ ಬೌಲಿಂಗ್ ಪಡೆ ಇಟ್ಟುಕೊಂಡು RCB ಈ ಸಲ ಐಪಿಎಲ್ ಕಪ್ ಗೆಲ್ಲೋದು ಸಾಧ್ಯವೇ ಇಲ್ಲ

ಸಾರಾಂಶ

ತವರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ ಅಜೇಯ ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತ್ತು. ಈ ಸವಾಲಿನ ಗುರಿ ಕಾಪಾಡಿಕೊಳ್ಳುವಲ್ಲಿ ಅರ್‌ಸಿಬಿ ಬೌಲರ್‌ಗಳು ಸಫಲರಾಗಲಿಲ್ಲ.

ಬೆಂಗಳೂರು(ಮಾ.30): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಸೋಲು ಅನುಭವಿಸಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಎದುರು 7 ವಿಕೆಟ್ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತವರಿನಲ್ಲಿ ಸೋಲು ಕಂಡ ಮೊದಲ ತಂಡ ಎನ್ನುವ ಕುಖ್ಯಾತಿಗೆ ಆರ್‌ಸಿಬಿ ತಂಡವು ಪಾತ್ರವಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ತವರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ ಅಜೇಯ ಅರ್ಧಶತಕದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 182 ರನ್ ಕಲೆಹಾಕಿತ್ತು. ಈ ಸವಾಲಿನ ಗುರಿ ಕಾಪಾಡಿಕೊಳ್ಳುವಲ್ಲಿ ಅರ್‌ಸಿಬಿ ಬೌಲರ್‌ಗಳು ಸಫಲರಾಗಲಿಲ್ಲ. ಸುನಿಲ್ ನರೈನ್, ವೆಂಕಟೇಶ್ ಅಯ್ಯರ್ ವಿಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು ಇನ್ನೂ 19 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಕೆಕೆಆರ್ ಬ್ಯಾಟಿಂಗ್ ಆರ್ಭಟಕ್ಕೆ ಆರ್‌ಸಿಬಿ ಸೈಲೆಂಟ್..! ಚಿನ್ನಸ್ವಾಮಿಯಲ್ಲಿ ಕೋಲ್ಕತಾಗೆ ಮತ್ತೊಂದು ಜಯ

ಇನ್ನು ಆರ್‌ಸಿಬಿ ತಂಡದ ಈ ಬೌಲಿಂಗ್ ಪ್ರದರ್ಶನವನ್ನು ಗಮನಿಸಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಈ ರೀತಿಯ ಬೌಲಿಂಗ್ ಪಡೆಯನ್ನು ಇಟ್ಟುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕಪ್ ಗೆಲ್ಲುವುದು ಅಸಾಧ್ಯ" ಎಂದು ಷರಾ ಬರೆದಿದ್ದಾರೆ.

ಇನ್ನು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡಾ ಆರ್‌ಸಿಬಿ ಬೌಲಿಂಗ್ ಪಡೆಯ ಬಗ್ಗೆ ತುಟಿಬಿಚ್ಚಿದ್ದಾರೆ. "ಆರ್‌ಸಿಬಿ ತಂಡವು ನಿಜಕ್ಕೂ ತನ್ನ ಬೌಲಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ" ಎಂದು 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

ಕೆಕೆಆರ್ ಎದುರು ಆರ್‌ಸಿಬಿಯ ಮೂವರು ಪ್ರಮುಖ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್ ಹಾಗೂ ಯಶ್ ದಯಾಳ್ ಸಾಕಷ್ಟು ದುಬಾರಿ ಎನಿಸಿದರು. ಸಿರಾಜ್ ಮೂರು ಓವರ್‌ನಲ್ಲಿ 46 ರನ್ ನೀಡಿದರೆ, ಜೋಸೆಫ್ ಎರಡು ಓವರ್‌ನಿಂದ 34 ರನ್ ಚಚ್ಚಿಸಿಕೊಂಡರು. ಇನ್ನು ಎಡಗೈ ವೇಗಿ ಯಶ್ ದಯಾಳ್ ಮೂರು ಓವರ್‌ನಲ್ಲಿ 45 ರನ್ ಬಿಟ್ಟುಕೊಟ್ಟರು. ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ಮಾತ್ರ ಶಿಸ್ತುಬದ್ಧ ದಾಳಿ ನಡೆಸಿ ಗಮನ ಸೆಳೆದರು.

RCB ಏನನ್ನೂ ಗೆದ್ದಿಲ್ಲ ಆದ್ರೆ ಎಲ್ಲವನ್ನೂ ಗೆದ್ದಂತೆ ವರ್ತಿಸುತ್ತಾರೆ: ಗೌತಮ್ ಗಂಭೀರ್

ಕೆಕೆಆರ್ ಎದುರು ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಲಖನೌ ಸೂಪರ್ ಜೈಂಟ್ಸ್ ಎದುರಿನ ಸವಾಲಿಗೆ ಸಜ್ಜಾಗಿದೆ. ಏಪ್ರಿಲ್ 02ರಂದು ಆರ್‌ಸಿಬಿ ತಂಡವು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಲಖನೌ ಮಣಿಸಿ ಗೆಲುವಿನ ಹಳಿಗೆ ಮರಳಲು ಫಾಫ್ ಡು ಪ್ಲೆಸಿಸ್ ಪಡೆ ಸಜ್ಜಾಗುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!