ಕೆಕೆಆರ್ ಬ್ಯಾಟಿಂಗ್ ಆರ್ಭಟಕ್ಕೆ ಆರ್‌ಸಿಬಿ ಸೈಲೆಂಟ್..! ಚಿನ್ನಸ್ವಾಮಿಯಲ್ಲಿ ಕೋಲ್ಕತಾಗೆ ಮತ್ತೊಂದು ಜಯ

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಗೆಲ್ಲಲು 183 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸುನಿಲ್ ನರೈನ್ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಪವರ್ ಪ್ಲೇನಲ್ಲೇ 85 ರನ್‌ ಕಲೆಹಾಕಿತು.

IPL 2024 Venkatesh Iyer Sunil Narine Shine As Kolkata Knight Riders Ease Past RCB By 7 Wickets kvn

ಬೆಂಗಳೂರು(ಮಾ.29): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಮತ್ತೊಮ್ಮೆ ಕೋಲ್ಕತಾ ನೈಟ್ ರೈಡರ್ಸ್‌ಗೆ ಶರಣಾಗಿದೆ. ಕೆಕೆಆರ್ ಅಬ್ಬರದ ಬ್ಯಾಟಿಂಗ್‌ಗೆ ಆರ್‌ಸಿಬಿ ಫುಲ್ ಸೈಲೆಂಟ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಕೆಕೆಆರ್ ತಂಡವು ಇನ್ನೂ 19 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ಸುಲಭ ಗೆಲುವು ಸಾಧಿಸಿದೆ.

ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಗೆಲ್ಲಲು 183 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸುನಿಲ್ ನರೈನ್ ಹಾಗೂ ಫಿಲ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಪವರ್ ಪ್ಲೇನಲ್ಲೇ 85 ರನ್‌ ಕಲೆಹಾಕಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಯಾಂಕ್ ದಾಗರ್ ಯಶಸ್ವಿಯಾದರು. 500ನೇ ಟಿ20 ಪಂದ್ಯವನ್ನಾಡಿದ ನರೈನ್ ಕೇವಲ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 47 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕನ್ನಡದ ವೇಗಿ ವೈಶಾಖ್ ವಿಜಯ್ ಕುಮಾರ್, ತಾವೆಸೆದ ಮೊದಲ ಓವರ್‌ನ 5ನೇ ಎಸೆತದಲ್ಲೇ ಫಿಲ್ ಸಾಲ್ಟ್ ಬಲಿ ಪಡೆದರು. ಸಾಲ್ಟ್ 20 ಎಸೆತದಲ್ಲಿ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಚಿನ್ನಸ್ವಾಮಿಯಲ್ಲಿ ಘರ್ಜಿಸಿದ ಕಿಂಗ್ ಕೊಹ್ಲಿ; ಕೆಕೆಆರ್‌ಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ

ಇದಾದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ವೆಂಕಟೇಶ್ ಅಯ್ಯರ್ 30 ಎಸೆತಗಳಲ್ಲಿ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಂದು ತುದಿಯಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅಜೇಯ 39 ರನ್ ಬಾರಿಸಿ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು. ಆರ್‌ಸಿಬಿ ಪರ ವೈಶಾಖ್ ವಿಜಯ್‌ಕುಮಾರ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳು ಸಾಕಷ್ಟು ದುಬಾರಿಯಾದರು. 

ಈ ಆವೃತ್ತಿಯಲ್ಲಿ ತವರಿನಾಚೆ ಗೆದ್ದ ಮೊದಲ ತಂಡ ಕೆಕೆಆರ್: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 9 ಪಂದ್ಯಗಳಲ್ಲಿ ತವರಿನ ತಂಡ ಗೆಲುವಿನ ರುಚಿ ಕಂಡಿತ್ತು. ಇದೀಗ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿ ತವರಿನಾಚೆ ಗೆಲುವಿನ ರುಚಿ ಕಂಡಿತು. ಈ ಮೂಲಕ ಈ ಆವೃತ್ತಿಯಲ್ಲಿ ತವರಿನಾಚೆ ಗೆಲುವು ಕಂಡ ಮೊದಲ ತಂಡ ಎನಿಸಿಕೊಂಡಿತು.

2015ರ ಬಳಿಕ ಚಿನ್ನಸ್ವಾಮಿಯಲ್ಲಿ ಕೆಕೆಆರ್‌ ವಿರುದ್ಧ ಗೆದ್ದಿಲ್ಲ ಆರ್‌ಸಿಬಿ!

ಆರ್‌ಸಿಬಿ ತಂಡ ಕೆಕೆಆರ್‌ ವಿರುದ್ಧ 2015ರ ನಂತರ ಒಂದೂ ಪಂದ್ಯದಲ್ಲಿ ಗೆದ್ದಿಲ್ಲ. 2015ರ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ ಕೋಲ್ಕತಾವನ್ನು ಸೋಲಿಸಿತ್ತು.  2015ರ ಬಳಿಕ 2016, 2017, 2018, 2019 ಹಾಗೂ 2023ರಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಕೆಕೆಆರ್‌ಗೆ ಆರ್‌ಸಿಬಿ ಶರಣಾಗಿದೆ. ಇದೀಗ ಆ ಸೋಲಿನ ಸರಪಳಿ ಮತ್ತೆ ಮುಂದುವರೆದಿದೆ

ಇದಕ್ಕೂ ಮೊದಲು ಟಾಸ್ ಬ್ಯಾಟಿಂಗ್ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭಿಕ ಆಘಾತ ಅನುಭವಿಸಿತು. ಇದರ ಹೊರತಾಗಿಯೂ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ 83 ಹಾಗೂ ಕ್ಯಾಮರೋನ್ ಗ್ರೀನ್ (33) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತ್ತು.

Latest Videos
Follow Us:
Download App:
  • android
  • ios