
ಲಂಡನ್: ಪೋಲೆಂಡ್‌ನ ತಾರಾ ಟೆನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಚೊಚ್ಚಲ ಬಾರಿಗೆ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ, ಅಮೆರಿಕದ ಅಮಾಂಡ ಅನಿಸಿತೊವಾ ವಿರುದ್ಧ 6-0, 6-0 ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿ, ತಮ್ಮ ವೃತ್ತಿಬದುಕಿನ 6ನೇ ಗ್ರ್ಯಾನ್ ಸ್ಲಾಂ ಜಯಿಸಿದರು.
ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಇಗಾ ಸಂಪೂರ್ಣ ಪ್ರಾಬಲ್ಯ ಮೆರೆದರು. ಕೇವಲ 57 ನಿಮಿಷ ನಡೆದ ಪಂದ್ಯದಲ್ಲಿ 24 ವರ್ಷದ ಇಗಾ ಒಟ್ಟು 55 ಅಂಕ ಗಳಿಸಿದರೆ, ಚೊಚ್ಚಲ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್ ಪ್ರವೇಶಿಸಿದ್ದ ಅಮಾಂಡ ಕೇವಲ 24 ಅಂಕ ಪಡೆಯಲಷ್ಟೇ ಶಕ್ತರಾದರು. ಅಲ್ಲದೇ ಅಮಾಂಡ 28 ಅನ್‌ಫೋರ್ಸ್‌ಡ್ ಎರರ್‌ಗಳನ್ನು ಮಾಡಿದ್ದು, ಅವರೆಷ್ಟು ಒತ್ತಡದಲ್ಲಿದ್ದರು ಎನ್ನುವುದಕ್ಕೆ ಸಾಕ್ಷಿ. ಸ್ವಿಯಾಟೆಕ್ ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲಿ ಅಜೇಯ ಓಟ ಮುಂದುವರಿಸಿದ್ದಾರೆ. ಅವರು ಒಟ್ಟು ಬಾರಿ ಫೈನಲ್‌ನಲ್ಲಿ ಆಡಿದ್ದು, 6ರಲ್ಲೂ ಗೆದ್ದಿದ್ದಾರೆ.
2020, 2022, 2023, 2024ರಲ್ಲಿ ಫ್ರೆಂಚ್ ಓಪನ್, 2022ರಲ್ಲಿ ಯುಎಸ್ ಓಪನ್ ಗೆದಿದರು. ಅವರು ಇನ್ನಷ್ಟೇ ಆಸ್ಟ್ರೇಲಿಯನ್ ಓಪನ್ ಗೆಲ್ಲಬೇಕಿದ್ದು, ಆ ಸಾಧನೆ ಮಾಡಿದರೆ ಕರಿಯರ್ ಸ್ಲ್ಯಾಂ ಪೂರ್ತಿಗೊಳ್ಳಲಿದೆ.
ಸತತ 8ನೇ ವರ್ಷ ಹೊಸ ಚಾಂಪಿಯನ್!
ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನಲ್ಲಿ ಸತತ 8ನೇ ವರ್ಷ ಹೊಸ ಚಾಂಪಿಯನ್‌ನ ಉದಯವಾಗಿದೆ. 2017ರಿಂದ ಪ್ರತಿ ಬಾರಿಯೂ ಬೇರೆ ಬೇರೆ ಆಟಗಾರ್ತಿಯರು ಪ್ರಶಸ್ತಿ ಎತ್ತಿಹಿಡಿಯುತ್ತಿದ್ದಾರೆ. 2017ರಲ್ಲಿ ಸ್ಪೇನ್‌ನ ಗಾರ್ಬಿನ್ ಮುಗುರುಜಾ, 2018ರಲ್ಲಿ ಜರ್ಮನಿಯ ಆ್ಯಂಜಿಲಿಕ್ ಕರ್ಬೆರ್, 2019ರಲ್ಲಿ ರೊಮೇನಿಯಾದ ಸಿಮೋನಾ ಹಾಲೆಪ್, 2021ರಲ್ಲಿ ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ, 2022ರಲ್ಲಿ ಕಜಕಸ್ತಾನದ ಎಲೈಕಾ ರಬೈಕೆನಾ, 2023ರಲ್ಲಿ ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರಸೊವಾ, 2024ರಲ್ಲಿ ಚೆಕ್ ಗಣರಾಜ್ಯದ ಬಾರ್ಬೋರಾ ಕ್ರೇಜಿಕೋವಾ ಚಾಂಪಿಯನ್ ಆಗಿದ್ದರು. ಈ ವರ್ಷ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಮೊದಲ ಬಾರಿಗೆ ವಿಂಬಲ್ಡನ್ ಗೆದ್ದಿದ್ದಾರೆ. 2020ರಲ್ಲಿ ಕೋವಿಡ್‌ನಿಂದಾಗಿ ಟೂರ್ನಿ ನಡೆದಿರಲಿಲ್ಲ.
ಆಧುನಿಕ ಯುಗದಲ್ಲಿ ಮೊದಲ ಸಲ 6-0, 6-0 ವಿಂಬಲ್ಡನ್ ಜಯ!
ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಫೈನಲ್‌ನಲ್ಲಿ ಸ್ವಿಯಾಟೆಕ್‌ಗೂ ಮುನ್ನ 6-0, 6-0 ಗೆಲುವು ಸಾಧಿಸಿದ್ದು ಬ್ರಿಟನ್‌ನ ಡೊರೊಥಿಯಾ ಲ್ಯಾಂಬೆರ್ಟ್. 1911ರಲ್ಲಿ ಅವರು ಬ್ರಿಟನ್‌ನವರೇ ಆದ ಡೊರಾ ಬೂಥ್‌ಬೈ ವಿರುದ್ಧ ಒಂದೂ ಗೇಮ್ ಸೋತಿರಲಿಲ್ಲ. ಟೆನಿಸ್‌ನ ಆಧುನಿಕ ಯುಗ (1968ರಿಂದ ಈಚೆಗೆ)ದಲ್ಲಿ ನಡೆದ ವಿಂಬಲ್ಡನ್‌ನ ಫೈನಲ್‌ಗಳಲ್ಲಿ 6-0, 6-0ಯಲ್ಲಿ ಗೆದ್ದ ಮೊದಲ ಆಟಗಾರ್ತಿ ಇಗಾ ಸ್ವಿಯಾಟೆಕ್.
ಇಂದು ಆಲ್ಕರಜ್ vs ಸಿನ್ನರ್ ಫೈನಲ್
ಲಂಡನ್: ವಿಶ್ವ ರ್‍ಯಾಂಕಿಂಗ್ ನಂ.1 ಹಾಗೂ ನಂ.2 ಸ್ಥಾನಗಳಲ್ಲಿರುವ ಯಾನ್ನಿಕ್ ಸಿನ್ನರ್ ಹಾಗೂ ಕಾರ್ಲೋಸ್ ಆಲ್ಕರಜ್, ಭಾನುವಾರ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. 22 ವರ್ಷದ ಸ್ಪೇನ್‌ನ ಆಲ್ಕರಜ್ ಸತತ 3ನೇ ವಿಂಬಲ್ಡನ್ ಫೈನಲ್‌ನಲ್ಲಿ ಆಡಲಿದ್ದು, ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮೊದಲ ಬಾರಿಗೆ ವಿಂಬಲ್ಡನ್ ಗೆಲ್ಲಲು ಇಟಲಿಯ 23ರ ಸಿನ್ನರ್ ಕಾಯುತ್ತಿದ್ದಾರೆ.
ಈ ಇಬ್ಬರು ಕಳೆದ ತಿಂಗಳಷ್ಟೇ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸೆಣಸಿದ್ದರು. ಆ ಪಂದ್ಯದಲ್ಲಿ ಆಲ್ಕರಜ್ ಗೆದ್ದಿದ್ದರು. 2008ರಲ್ಲಿ ಫೆಡರರ್-ನಡಾಲ್ ಬಳಿಕ ಫ್ರೆಂಚ್ ಓಪನ್, ವಿಂಬಲ್ಡನ್ ಫೈನಲ್‌ಗಳಲ್ಲಿ ಅದೇ ಇಬ್ಬರು ಆಟಗಾರರು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.
ಇನ್ನು, ಸಿನ್ನರ್ ಸತತ 4ನೇ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಆಡಲಿದ್ದಾರೆ. ಕಳೆದ ವರ್ಷ ಯುಎಸ್ ಓಪನ್, ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಸಿನ್ನರ್, ತಮ್ಮ ವೃತ್ತಿಬದುಕಿನ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಆಲ್ಕರಜ್ 6ನೇ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ವಿಶೇಷವೆಂದರೆ, ಕಳೆದ 6 ಗ್ರ್ಯಾನ್‌ಸ್ಲಾಂಗಳು ಈ ಇಬ್ಬರ ಪಾಲಾಗಿವೆ. ಭಾನುವಾದ ಆ ಸಂಖ್ಯೆ 7ಕ್ಕೆ ಏರಿಕೆಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.