ಲಾರ್ಡ್ಸ್‌ನಲ್ಲಿ ಯಾರಿಗೂ ಸಿಗದ ಇನ್ನಿಂಗ್ಸ್ ಲೀಡ್! ಕ್ರಿಕೆಟ್‌ ಕಾಶಿಯಲ್ಲಿ ಕನ್ನಡಿಗ ರಾಹುಲ್ ಶತಕದ ವೈಭವ

Published : Jul 13, 2025, 08:28 AM IST
Ind Vs Eng Lords test 3rd day KL Rahul after century

ಸಾರಾಂಶ

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಸ್ಕೋರ್‌ಗೆ ಸಮಬಲ ಸಾಧಿಸಿದೆ. ರಾಹುಲ್‌ ಶತಕ, ಪಂತ್‌ ಮತ್ತು ಜಡೇಜಾ ಅರ್ಧಶತಕಗಳ ನೆರವಿನಿಂದ ಭಾರತ 387 ರನ್‌ ಗಳಿಸಿ ಆಲೌಟ್‌ ಆಯಿತು.

ಲಂಡನ್‌: ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ವಿಫಲವಾಗಿದೆ. ದಿನವಿಡಿ ಹೋರಾಟ ನಡೆಸಿದ ಟೀಂ ಇಂಡಿಯಾ, ಕೊನೆಯಲ್ಲಿ ಎಡವಿ ಮುನ್ನಡೆ ಸಾಧಿಸುವ ಅವಕಾಶ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಸಹ 387 ರನ್‌ಗೆ ಆಲೌಟ್‌ ಅಯಿತು. ಟೆಸ್ಟ್‌ ಕ್ರಿಕೆಟ್‌ನಲ್ಲಿ 2015ರ ಬಳಿಕ ಎರಡೂ ತಂಡಗಳು ಮೊದಲ ಇನ್ನಿಂಗ್ಸ್‌ನಲ್ಲಿ ಒಂದೇ ಸ್ಕೋರ್ ದಾಖಲಿಸಿದ್ದು ಇದೇ ಮೊದಲು.

ಕೆ.ಎಲ್‌.ರಾಹುಲ್‌ರ ಶತಕ, ರಿಷಭ್‌ ಪಂತ್‌ ಹಾಗೂ ರವೀಂದ್ರ ಜಡೇಜಾರ ಅರ್ಧಶತಕಗಳು ಭಾರತ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ನೆರವಾದವು. ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌ ಸಹ ಉಪಯುಕ್ತ ರನ್‌ ಕೊಡುಗೆ ನೀಡಿದರು.

2ನೇ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿದ್ದ ಭಾರತ, ಇನ್ನೂ 242 ರನ್‌ ಹಿನ್ನಡೆಯಲ್ಲಿತ್ತು. 3ನೇ ದಿನವಾದ ಶನಿವಾರ ಮೊದಲ ಅವಧಿ ನಿರ್ಣಾಯಕ ಎನಿಸಿತ್ತು. ರಾಹುಲ್‌ ಹಾಗೂ ಪಂತ್‌ ಎಚ್ಚರಿಕೆಯಿಂದ ಬ್ಯಾಟ್‌ ಮಾಡಿ, ತಂಡ ಯಾವುದೇ ಅಪಾಯ ಮೈಮೇಲೆ ಎಳೆದುಕೊಳ್ಳದಂತೆ ನೋಡಿಕೊಂಡರು.

 

ಇಂಗ್ಲೆಂಡ್‌ನ ಏಕೈಕ ತಜ್ಞ ಸ್ಪಿನ್ನರ್‌ ಶೋಯೆಬ್‌ ಬಶೀರ್‌ ವಿರುದ್ಧ ಪಂತ್‌ ಆಕ್ರಮಣಕಾರಿ ಆಟ ಮುಂದುವರಿಸಿ ರನ್‌ ಗಳಿಕೆಗೆ ವೇಗ ತುಂಬಿದರು. ರಾಹುಲ್‌ರಿಂದಲೂ ಆಕರ್ಷಕ ಹೊಡೆತಗಳು ಮೂಡಿಬಂತು.

ಪಂತ್‌ ಸತತ 4ನೇ ಅರ್ಧಶತಕ ಬಾರಿಸಿ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದರು. ಆದರೆ, ಭೋಜನ ವಿರಾಮಕ್ಕೂ ಮೊದಲೇ ರಾಹುಲ್‌ ಶತಕ ಪೂರೈಸಲಿ ಎನ್ನುವ ಉದ್ದೇಶದಿಂದ ಇಲ್ಲದ ರನ್‌ಗೆ ಓಡಿ ರನೌಟ್‌ ಬಲೆಗೆ ಬಿದ್ದರು. 112 ಎಸೆತಗಳನ್ನು ಎದುರಿಸಿದ ಪಂತ್‌ 8 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 74 ರನ್‌ ಗಳಿಸಿ ಔಟಾದರು. ಇದರೊಂದಿಗೆ 4ನೇ ವಿಕೆಟ್‌ಗೆ ಮೂಡಿಬಂದ 141 ರನ್‌ ಜೊತೆಯಾಟಕ್ಕೂ ತೆರೆಬಿತ್ತು.

ಭೋಜನ ವಿರಾಮದ ಬಳಿಕ ರಾಹುಲ್‌ ಶತಕ ಪೂರೈಸಿದರು. ಟೆಸ್ಟ್‌ನಲ್ಲಿ ಇದು ಅವರ 10ನೇ ಶತಕ. ಆದರೆ, ರಾಹುಲ್‌ರ ಶತಕ ಸಂಭ್ರಮ ಹೆಚ್ಚು ಹೊತ್ತು ಬಾಳಲಿಲ್ಲ. ಬಶೀರ್ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ವಾಪಸಾದರು. ಅವರು 177 ಎಸೆತದಲ್ಲಿ 13 ಬೌಂಡರಿಯೊಂದಿಗೆ 100 ರನ್‌ ಗಳಿಸಿದರು.

ರಾಹುಲ್‌ ಔಟಾದಾಗ ತಂಡ ಇನ್ನೂ 133 ರನ್‌ ಹಿನ್ನಡೆಯಲ್ಲಿತ್ತು. ಈ ಹಂತದಲ್ಲಿ ಭಾರತ ಕುಸಿತ ಕಂಡಿದ್ದರೆ ಇಂಗ್ಲೆಂಡ್‌ಗೆ ದೊಡ್ಡ ಮುನ್ನಡೆ ಸಿಗುತ್ತಿತ್ತು. ಅಲ್ಲದೇ ಪಂದ್ಯದ ಗತಿಯೇ ಬದಲಾಗುವ ಸಾಧ್ಯತೆಯೂ ಇತ್ತು. ಆದರೆ, 6ನೇ ವಿಕೆಟ್‌ಗೆ ಜೊತೆಯಾದ ರವೀಂದ್ರ ಜಡೇಜಾ ಹಾಗೂ ನಿತೀಶ್‌ ರೆಡ್ಡಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರು.

ಇಂಗ್ಲೆಂಡ್‌ನ ವೇಗಿಗಳು ಅದರಲ್ಲೂ ಪ್ರಮುಖವಾಗಿ ಜೋಫ್ರಾ ಆರ್ಚರ್‌ ದಾಳಿ ಎದುರು ಕಷ್ಟಪಟ್ಟ ಜಡೇಜಾ ಹಾಗೂ ರೆಡ್ಡಿ, ವಿಕೆಟ್‌ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಚಹಾ ವಿರಾಮಕ್ಕೆ ಭಾರತ ಮತ್ತೊಂದು ವಿಕೆಟ್‌ ಕಳೆದುಕೊಳ್ಳಲಿಲ್ಲ.

ಇವರಿಬ್ಬರ ನಡುವಿನ 72 ರನ್‌ ಜೊತೆಯಾಟ ಭಾರತವನ್ನು ಇನ್ನಿಂಗ್ಸ್‌ ಮುನ್ನಡೆ ಹೊಸ್ತಿಲಿಗೆ ತಲುಪಿಸಿತು. ರೆಡ್ಡಿ 30 ರನ್‌ ಗಳಿಸಿ ಔಟಾದರೆ, ಜಡೇಜಾ 131 ಎಸೆತದಲ್ಲಿ 72 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. 23 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಔಟಾಗುತ್ತಿದ್ದಂತೆಯೇ ಭಾರತದ ಇನ್ನಿಂಗ್ಸ್‌ಗೆ ತೆರೆ ಬಿದ್ದಿತು.

ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಮೂರನೇ ದಿನದಂತ್ಯಕ್ಕೆ ಒಂದು ಓವರ್‍‌ನಲ್ಲಿ ವಿಕೆಟ್ ನಷ್ಟವಿಲ್ಲದೇ ಎರಡು ರನ್ ಗಳಿಸಿದೆ. ಲಾರ್ಡ್ಸ್ ಟೆಸ್ಟ್‌ನಲ್ಲಿ ಇನ್ನೆರಡು ದಿನದಾಟ ಬಾಕಿಯಿದ್ದು, ಎರಡೂ ತಂಡಗಳು ಗೆಲುವಿನ ಮೇಲೆ ಕಣ್ಣಿಟ್ಟಿವೆ.

ಲಾರ್ಡ್ಸ್‌ನಲ್ಲಿ 2ನೇ ಶತಕ: ರಾಹುಲ್‌ 2ನೇ ಭಾರತೀಯ

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಕೆ.ಎಲ್‌.ರಾಹುಲ್‌ಗಿದು 2ನೇ ಟೆಸ್ಟ್‌ ಶತಕ. 2021ರಲ್ಲಿ ರಾಹುಲ್‌ ಇಲ್ಲಿ ಮೊದಲ ಶತಕ ಬಾರಿಸಿದ್ದರು. ಲಾರ್ಡ್ಸ್‌ನಲ್ಲಿ ಒಂದುಕ್ಕಿಂತ ಹೆಚ್ಚು ಶತಕ ಬಾರಿಸಿದ ಭಾರತದ 2ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಕರ್ನಾಟಕದ ಆಟಗಾರ ಪಾತ್ರರಾಗಿದ್ದಾರೆ. ದಿಲೀಪ್‌ ವೆಂಗ್‌ಸರ್ಕಾರ್‌ ಲಾರ್ಡ್ಸ್‌ನಲ್ಲಿ 3 ಶತಕ ದಾಖಲಿಸಿದ್ದಾರೆ. ಅವರು 1979, 1982, 1986ರ ಪ್ರವಾಸಗಳಲ್ಲಿ ಶತಕ ಬಾರಿಸಿದ್ದರು. ಇನ್ನು, ರಾಹುಲ್‌ಗೆ ಇದು ಇಂಗ್ಲೆಂಡ್‌ ನೆಲದಲ್ಲಿ 4ನೇ ಟೆಸ್ಟ್‌ ಶತಕ. ಅವರು ಇಂಗ್ಲೆಂಡ್‌ನಲ್ಲಿ ಏಕದಿನ, ಅಂ.ರಾ.ಟಿ20 ಶತಕಗಳನ್ನೂ ಬರೆಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ