ಭಾರತದ ಗ್ರಾಹಕರು ತುಂಬಾ ಬೇಡಿಕೆಯಿಡುತ್ತಾರೆ. ಆದರೆ ಯಾವುದಕ್ಕೂ ಪಾವತಿಸಲು ಬಯಸುವುದಿಲ್ಲ. ಇಲ್ಲಿ ನಾವು ಗೆದ್ದರೆ ವಿಶ್ವವನ್ನೇ ಗೆದ್ದಂತೆ ಎಂದು ಉಬರ್ ಸಿಇಒ ಹೇಳಿದ್ದಾರೆ. ಉಬರ್ ಮುಖ್ಯಸ್ಥನ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು(ಫೆ.22) ಭಾರತದ ಮಾರುಕಟ್ಟೆ ನಮ್ಮ ಪಾಲಿಗೆ ಅತ್ಯಂತ ಮುಖ್ಯ. ಇಷ್ಟೇ ಅಲ್ಲ ಈ ಮಾರುಕಟ್ಟೆ ಅತ್ಯಂತ ಸವಾಲಿನಿಂದ ಕೂಡಿದ ಮಾರುಕಟ್ಟೆಯಾಗಿದೆ. ಭಾರತೀಯ ಗ್ರಾಹಕರು ಹಲವು ಬೇಡಿಕೆ ಮುಂದಿಡುತ್ತಾರೆ. ಆದರೆ ಯಾವುದಕ್ಕೂ ಪಾವತಿ ಮಾಡಲು ಬಯಸುವುದಿಲ್ಲ. ಭಾರತದ ಮಾರುಕಟ್ಟೆಯನ್ನು ಗೆದ್ದರೆ ನಾವು ಜಗತ್ತಿನ ಇತರ ಮಾರುಕಟ್ಟೆ ಗೆಲ್ಲಲು ಸಾಧ್ಯವಿದೆ ಎಂದು ಉಬರ್ ಸಿಇಒ ದಾರಾ ಕೊಸ್ರೋಶಾಹಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಬರ್ ಸಿಇಒ ಹಾಗೂ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೆಕಣಿ ಜೊತೆಗಿನ ಸಂವಾದದಲ್ಲಿ ಹಲವು ಕುತೂಹಲ ಸಂಗತಿಗಳು ಬಯಲಾಗಿದೆ. ವಿಶ್ವದ ಮಾರುಕಟ್ಟೆಗಳ ಪೈಕಿ ಭಾರತ ಅತ್ಯಂತ ಕಠಿಣ ಮಾರುಕಟ್ಟೆಯಾಗಿದೆ ಎಂದು ದಾರಾ ಕೊಸ್ರೋಶಾಹಿ ಹೇಳಿದ್ದಾರೆ. ಭಾರತದ ಗ್ರಾಹಕರ ಬೇಡಿಕೆ, ಇಲ್ಲಿನ ಅಗತ್ಯಗಳಿಗೆ ತಕ್ಕಂತೆ ನಾವು ಸೇವೆ ನೀಡಲು ಯಶಸ್ವಿಯಾದರೆ ಇದು ಇತರ ಎಲ್ಲಾ ದೇಶಗಳಿಗೆ ಅನ್ವಯಿಸಲು ಸಾಧ್ಯವಾಗಲಿದೆ ಎಂದು ದಾರಾ ಕೊಸ್ರೋಶಾಹಿ ಹೇಳಿದ್ದಾರೆ.
ಬೆಂಗಳೂರಲ್ಲಿ ಪರಿಸರ ಸ್ನೇಹಿ ವಾಹನ ಬುಕ್ ಮಾಡಲು ಅನುಮತಿ: ಉಬರ್ ಕಂಪನಿಯಿಂದ 'ಉಬರ್ ಗ್ರೀನ್' ಸೇವೆ
ಭಾರತದಲ್ಲಿ ಗ್ರಾಹಕರಿಗೆ ಯಾವುದೇ ಅಡೆ ತಡೆ ಇಲ್ಲದೆ ಸೇವೆ ನೀಡಲು ಉಬರ್ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಕಂಪನಿ ONDC (ಡಿಜಿಟಲ್ ಕಾಮರ್ಸ್‌ಗಾಗಿ ಮುಕ್ತ ನೆಟ್‌ವರ್ಕ್), ಯುಪಿಐ ಪಾವತಿ, ಡಿಜಿಲಾಕರ್ , ಆಧಾರ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರಿಗೆ ಡಿಜಿಟಲ್ ಮೂಲಸೌಕರ್ಯ ಒದಗಿಸುತ್ತಿದೆ ಎಂದು ದಾರಾ ಕೊಸ್ರೋಶಾಹಿ ಹೇಳಿದ್ದಾರೆ.
ಇದೇ ವೇಳೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಭಾರತದಲ್ಲಿ ಉಬರ್ ಅತೀ ಕಡಿಮೆ ವೆಚ್ಚದ ಸಾರಿಗೆ ಸಂಪರ್ಕ ನೀಡಲಿದೆ. ಇದು ಭಾರತದಲ್ಲಿ ಉಬರ್ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಾಗಲಿದೆ. ಅತೀ ಅಗ್ಗದ ದರದಲ್ಲಿ ಅತ್ಯುತ್ತಮ ಸೇವೆ ನೀಡುವವರು ವಿಶ್ವದ ಯಾವುದೇ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸುತ್ತಾರೆ. ಈ ನಿಟ್ಟಿನಲ್ಲಿ ಉಬರ್ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಸ್ಥ ಹೇಳಿದ್ದಾರೆ.
ಉಬರ್ ಸೇವೆಯಲ್ಲಿ ಕಾರು ಸೇರಿದಂತೆ ಇತರ ಸಾರಿಗೆ ಸೇವೆಯಲ್ಲಿ ಉತ್ತಮ ಆದಾಯ ಬರುತ್ತಿದೆ. ಸದ್ಯ ಉಬರ್ ಮುಂದೆ ಕೈಗೆಟುಕುವ ದರದ ಪ್ರಯಾಣ ಸೇವೆಯ ಆಯ್ಕೆ ಇದೆ. ಆಟೋ ರಿಕ್ಷಾ, ದ್ವಿಚಕ್ರ ವಾಹನ ಸೇರಿದಂತೆ ಅಗ್ಗದ ದರ ಸೇವೆ ನೀಡಲು ಸಾಧ್ಯವಾಗುವ ಎಲ್ಲಾ ಆಯ್ಕೆಗಳನ್ನುಉಬರ್ ಬಳಸಿಕೊಳ್ಳಲಿದೆ ಎಂದು ಉಬರ್ ಸಿಇಒ ಹೇಳಿದ್ದಾರೆ.
ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ:ಲಾಸ್ಟ್‌ಮೈಲ್ ಕನೆಕ್ಟಿವಿಟಿಗೆ ಆ್ಯಪ್ ರಹಿತ ಮೆಟ್ರೋಮಿತ್ರ ಆಟೋ ಸೇವೆ ಆರಂಭ
ಜನಸಂಖ್ಯೆ, ಯುವ ಸಮೂಹ, ಹಲವು ಭಾಷೆ, ವಿಭಿನ್ನ ಸಂಸ್ಕೃತಿ, ಪದ್ಧತಿ, ಆಚರಣೆಗಳ ಮೂಲಕ ಭಾರತ ವಿವಿಧತೆಯಲ್ಲಿ ಏಕತೆಯ ದೇಶವಾಗಿ ಗುರುತಿಸಿಕೊಂಡಿದೆ. ಆದರೆ ಇತರ ದೇಶಗಳಂತೆ ಇಲ್ಲಿ ವ್ಯಾಪಾರ ವಹಿವಾಟು, ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವುದು ಅತ್ಯಂತ ಸವಾಲು. ಆದರೆ ಹಲವು ವಿದೇಶಿ ಕಂಪನಿಗಳು ಭಾರತೀಯರ ನಾಡಿಮಿಡಿತ ಅರಿತು ಯಶಸ್ಸು ಸಾಧಿಸಿದ ಉದಾಹರಣೆಗಳಿವೆ.