ICC World Cup 2023: 'ಚೋಕರ್ಸ್‌' ಹಣೆಪಟ್ಟಿ ಕಳಚಿ ಫೈನಲ್‌ಗೇರುತ್ತಾ ಆಫ್ರಿಕಾ?

By Naveen Kodase  |  First Published Nov 16, 2023, 12:30 PM IST

ಆಘಾತಕಾರಿ ಆರಂಭದ ಬಳಿಕ ಆಸೀಸ್ ಸತತ 7 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನಿಯಾಗಿ ನಾಕೌಟ್‌ಗೇರಿದರೆ, ಅತ್ತ ಸೌತ್‌ ಆಫ್ರಿಕಾ ಆಸೀಸ್‌ನಷ್ಟೇ ಅಂಕ ಗಳಿಸಿದ್ದರೂ ನೆಟ್ ರನ್‌ರೇಟ್ ಆಧಾರದಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಿತು.


ಕೋಲ್ಕತಾ(ನ.16): ಒಂದೆಡೆ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಗೂ 5 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ. ಮತ್ತೊಂದೆಡೆ ‘ಚೋಕರ್ಸ್’ ಹಣೆಪಟ್ಟಿ ಹೊತ್ತುಕೊಂಡು ಈ ವರೆಗೂ ವಿಶ್ವಕಪ್ ಫೈನಲ್‌ಗೇರದ ದಕ್ಷಿಣ ಆಫ್ರಿಕಾ. ಉಭಯ ತಂಡಗಳು ಗುರುವಾರ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.

ಆಘಾತಕಾರಿ ಆರಂಭದ ಬಳಿಕ ಆಸೀಸ್ ಸತತ 7 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನಿಯಾಗಿ ನಾಕೌಟ್‌ಗೇರಿದರೆ, ಅತ್ತ ಸೌತ್‌ ಆಫ್ರಿಕಾ ಆಸೀಸ್‌ನಷ್ಟೇ ಅಂಕ ಗಳಿಸಿದ್ದರೂ ನೆಟ್ ರನ್‌ರೇಟ್ ಆಧಾರದಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಿತು. ಈ ವರೆಗಿನ ಇತಿಹಾಸ ಗಮನಿಸಿದರೆ ಆಸ್ಟ್ರೇಲಿಯಾವೇ ಈ ಬಾರಿಯೂ ಮೇಲುಗೈ ಸಾಧಿಸಬಹುದು. ತಂಡ ವಿಶ್ವಕಪ್‌ನಲ್ಲಿ 8 ಬಾರಿ ಸೆಮೀಸ್ ಆಡಿದ್ದು, 7ರಲ್ಲಿ ಫೈನಲ್‌ಗೇರಿ 5 ಬಾರಿ ಪ್ರಶಸ್ತಿ ಗೆದ್ದಿದೆ.

Tap to resize

Latest Videos

ಸೆಮೀಸ್‌ನಲ್ಲಿ ಶಮಿಗೆ 7 ವಿಕೆಟ್..! ವಿಶ್ವಕಪ್ ಪಂದ್ಯಕ್ಕೂ ಒಂದು ದಿನ ಮೊದಲೇ ಕನಸು ಕಂಡ ನೆಟ್ಟಿಗ..!

2019ರಲ್ಲಿ ಮೊದಲ ಬಾರಿ ತಂಡ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು. ಈ ಬಾರಿ ಮತ್ತೊಮ್ಮೆ ಫೈನಲ್ ಪ್ರವೇಶಿಸಲು ಕಾಯುತ್ತಿದೆ. ಮತ್ತೊಂದೆಡೆ ದ.ಆಫ್ರಿಕಾ ಈ ವರೆಗೂ ಸೆಮೀಸ್ ನಿಂದ ಮುಂದೆ ಸಾಗಿಲ್ಲ. ಅದರಲ್ಲೂ 1992 ಹಾಗೂ 2015ರ ಸೆಮೀಸ್ ಸೋಲನ್ನು ದ.ಆಫ್ರಿಕಾದ ಕ್ರಿಕೆಟ್ ಅಭಿಯಾನಿಯೂ ಮರೆಯಲು ಸಾಧ್ಯವಿಲ್ಲ. ಆದರೆ ಈ ಬಾರಿ ಚೋಕರ್ಸ್ ಹಣೆಪಟ್ಟಿ ಕಳಚಲು ದ.ಆಫ್ರಿಕಾ ಸಿದ್ಧವಾಗಿದ್ದು, ಲೀಗ್ ಹಂತದ ಬಳಿಕ ಸೆಮೀಸ್‌ನಲ್ಲೂ ಆಸೀಸ್‌ಗೆ ಸೋಲುಣಿಸಲು ಕಾತರಿಸುತ್ತಿದೆ.

ಎರಡೂ ಪಡೆಯಲ್ಲಿ ಬಲಾಢ್ಯ ಆಟಗಾರರ ದಂಡೇ ಇದೆ.ಒಂದು ಕಡೆ ಆಸ್ಟ್ರೇಲಿಯಾದಲ್ಲಿ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್. ಸ್ಟೀವ್ ಸ್ಮಿತ್ ಅವರಂತಹ ಬ್ಯಾಟರ್‌ಗಳಿದ್ದರೆ, ಮ್ಯಾಕ್ಸ್‌ವೆಲ್, ಆಡಂ ಜಂಪಾ ಅವರಂತಹ ಆಟಗಾರರು ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ತ್ರಿವಳಿ ವೇಗಿಗಳಾದ ಸ್ಟಾರ್ಕ್, ಕಮಿನ್ಸ್ ಹಾಗೂ ಹೇಜಲ್‌ವುಡ್ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಮಾರಕ ದಾಳಿ ಸಂಘಟಿಸುವ ಕ್ಷಮತೆ ಹೊಂದಿದ್ದಾರೆ.

INDvNZ ಶಮಿ ದಾಳಿಯಿಂದ ಒಲಿಯಿತು ಗೆಲುವು, ನ್ಯೂಜಿಲೆಂಡ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ !

ಇನ್ನು ದಕ್ಷಿಣ ಆಫ್ರಿಕಾ ತಂಡದಲ್ಲೂ ಘಟಾನುಘಟಿ ಬ್ಯಾಟರ್‌ಗಳ ದಂಡೇ ಇದೆ. ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೇನ್, ಏಯ್ಡನ್ ಮಾರ್ಕ್‌ರಮ್ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಕ್ಷಮತೆ ಹೊಂದಿದ್ದಾರೆ. ಇನ್ನು ರಬಾಡ, ಎನ್‌ಗಿಡಿ, ಮಾರ್ಕೊ ಯಾನ್ಸನ್ ಹಾಗೂ ಕೇಶವ್ ಮಹಾರಾಜ್, ಕಾಂಗರೂ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ:

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಶ್, ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್‌(ನಾಯಕ), ಮಿಚೆಲ್ ಸ್ಟಾರ್ಕ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ತೆಂಬಾ ಬವುಮಾ(ನಾಯಕ), ವ್ಯಾನ್ ಡರ್ ಡುಸೇನ್, ಏಯ್ಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೇನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೋಟ್ಜೀ, ಕೇಶವ್ ಮಹರಾಜ್, ಕಗಿಸೋ ರಬಾಡ, ಲುಂಗಿ ಎಂಗಿಡಿ.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತಾ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್.
 

click me!