ಮೊದಲ 4 ಪಂದ್ಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾಂಗಣಗಳಿಗೆ ಪ್ರೇಕ್ಷಕರು ಬರಲಿಲ್ಲ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಲೇ ಇದೆ. ಆ ಚರ್ಚೆ ಭಾನುವಾರ ಕೊನೆಗೊಳ್ಳಲಿದೆ. ಚೆಪಾಕ್ ಕಿಕ್ಕಿರಿದು ತುಂಬಲಿದ್ದು, ಭಾರತ ತಂಡಕ್ಕೆ ಪ್ರಬಲ ಪೈಪೋಟಿ ಎದುರಾಗಲಿದೆ.
ಚೆನ್ನೈ(ಅ.08): 2023ರ ಐಸಿಸಿ ಏಕದಿನ ವಿಶ್ವಕಪ್ ಆರಂಭವಾಗಿ ಮೂರು ದಿನ ಕಳೆದರೂ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭಾನುವಾರ ವಿಶ್ವಕಪ್ ಅಧಿಕೃತವಾಗಿ ಶುರುವಾಗಲಿದೆ. ಭಾರತ ತನ್ನ ಅಭಿಯಾನವನ್ನು 5 ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆರಂಭಿಸಲಿದ್ದು, ಇಲ್ಲಿನ ಚೆಪಾಕ್ ಕ್ರೀಡಾಂಗಣ ಮದಗಜಗಳ ಕಾಳಗಕ್ಕೆ ವೇದಿಕೆ ಒದಗಿಸಲು ಸಜ್ಜಾಗಿದೆ.
ಮೊದಲ 4 ಪಂದ್ಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾಂಗಣಗಳಿಗೆ ಪ್ರೇಕ್ಷಕರು ಬರಲಿಲ್ಲ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಲೇ ಇದೆ. ಆ ಚರ್ಚೆ ಭಾನುವಾರ ಕೊನೆಗೊಳ್ಳಲಿದೆ. ಚೆಪಾಕ್ ಕಿಕ್ಕಿರಿದು ತುಂಬಲಿದ್ದು, ಭಾರತ ತಂಡಕ್ಕೆ ಪ್ರಬಲ ಪೈಪೋಟಿ ಎದುರಾಗಲಿದೆ.
ಹೇಗಿರಲಿದೆ ತಂಡ ಸಂಯೋಜನೆ?
ಡೆಂಘಿ ಜ್ವರಕ್ಕೆ ತುತ್ತಾಗಿರುವ ಶುಭ್‌ಮನ್ ಗಿಲ್ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಈ ಪಂದ್ಯದಲ್ಲಿ ಅವರು ಆಡುವುದು ಅನುಮಾನ. ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದ ಹಾರ್ದಿಕ್ ಪಾಂಡ್ಯ, ಸದ್ಯ ಭಾರತ ತಂಡದ ಅತಿ ಮುಖ್ಯ ಸದಸ್ಯರಾಗಿದ್ದು ಅವರ ಬ್ಯಾಟಿಂಗ್‌ನಷ್ಟೇ ಮಹತ್ವ ಅವರ ಬೌಲಿಂಗ್‌ಗೂ ಇದೆ. ಹಾರ್ದಿಕ್ 3ನೇ ವೇಗಿ ರೂಪದಲ್ಲಿ 6-7 ಓವರ್ ಬೌಲ್ ಮಾಡಿದರೆ, ಭಾರತಕ್ಕೆ ಮೂವರು ಸ್ಪಿನ್ನರ್‌ಗಳನ್ನು ಆಡಿಸಲು ಅವಕಾಶವಾಗಲಿದೆ.
ಚೆನ್ನೈನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇರುವ ಕಾರಣ, ಆರ್.ಅಶ್ವಿನ್ ತಮ್ಮ ತವರು ಮೈದಾನದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಕುಲ್ದೀಪ್, ಜಡೇಜಾ ಹಾಗೂ ಅಶ್ವಿನ್ ಕಾಂಗರೂಗಳನ್ನು ಕಟ್ಟಿಹಾಕಲು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಬಳಸಲಿದ್ದಾರೆ.
ಮತ್ತೊಂದಡೆ ಭಾರತೀಯ ಪಿಚ್‌ಗಳಿಗೆ ಸೂಕ್ತವೆನಿಸುವ ತಂಡವನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವೇ ಸರಿ. ಆದರೆ ಏಕದಿನ ಮಾದರಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಗುಣಮಟ್ಟದ ಆಲ್ರೌಂಡರ್ ಆಗಿ ರೂಪುಗೊಂಡಿರುವ ಕಾರಣ, ಆಸೀಸ್‌ಗೆ ಅನುಕೂಲವಾಗಲಿದೆ. 2016-20ರ ನಡುವೆ 61 ಏಕದಿನದಲ್ಲಿ ಮ್ಯಾಕ್ಸ್‌ವೆಲ್ 130.66ರ ಬೌಲಿಂಗ್ ಸರಾಸರಿ ಹೊಂದಿದ್ದರು. ಆದರೆ 2020ರಿಂದ ಈ ವರೆಗೂ ಅವರ ಬೌಲಿಂಗ್ ಸರಾಸರಿ 28.53 ಇದ್ದು, ಮ್ಯಾಕ್ಸ್‌ವೆಲ್‌ರಿಂದ ನಾಯಕ ಪ್ಯಾಟ್ ಕಮಿನ್ಸ್ ಪೂರ್ತಿ 10 ಓವರ್ ಬೌಲ್ ಮಾಡಿಸಬಹುದು.
ಮಾರ್ಕಸ್ ಸ್ಟೋಯ್ನಿಸ್ ಸ್ನಾಯು ಸೆಳೆತದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ, ಕ್ಯಾಮರೂನ್ ಗ್ರೀನ್ ಆಲ್ರೌಂಡರ್ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಒಟ್ಟು ಮುಖಾಮುಖಿ: 149
ಭಾರತ: 56
ಆಸ್ಟ್ರೇಲಿಯಾ: 83
ಫಲಿತಾಂಶವಿಲ್ಲ: 10
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರ್ರಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್(ನಾಯಕ), ಜೋಶ್ ಹೇಜಲ್‌ವುಡ್, ಆಡಂ ಜಂಪಾ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ಪಿಚ್ ಕಪ್ಪು ಮಣ್ಣಿನಿಂದ ಸಿದ್ಧಗೊಂಡಿದ್ದು, ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತ. ಚೆಪಾಕ್‌ನಲ್ಲಿ ಕಳೆದ 8 ಮೊದಲ ಇನ್ನಿಂಗ್ಸ್ ಸ್ಕೋರ್‌ಗಳು 227 ರಿಂದ 299 ರನ್‌ಗಳ ನಡುವೆ ದಾಖಲಾಗಿವೆ. ಕಳೆದ 8 ಪಂದ್ಯಗಳಲ್ಲಿ 6 ಬಾರಿ ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿವೆ.
ಪಂದ್ಯಕ್ಕೆ ಮಳೆ ಅಡ್ಡಿ?
ಶನಿವಾರ ಸಂಜೆ ಮಳೆ ಸುರಿದ ಪರಿಣಾಮ ಅಭ್ಯಾಸಕ್ಕೆ ಸ್ವಲ್ಪ ಸಮಸ್ಯೆ ಉಂಟಾಯಿತು. ಆದರೆ ಭಾನುವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇಲ್ಲ. ಸರಾಸರಿ 33 ಡಿಗ್ರಿ ತಾಪಮಾನವಿರಲಿದ್ದು, ಸಂಜೆ ಬಳಿಕ ಕೆಲ ಹೊತ್ತು ಸಣ್ಣ ಪ್ರಮಾಣದಲ್ಲಿ ಮಳೆಯಾಗಬಹುದು.
ಇಂಟ್ರೆಸ್ಟಿಂಗ್ ಅಂಕಿ-ಅಂಶ:
07 ಪಂದ್ಯಗಳು: ಚೆಪಾಕ್ ಕ್ರೀಡಾಂಗಣ ಈ ವರೆಗೂ 7 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಿದೆ.
03 ಗೆಲುವು: ಚೆನ್ನೈನಲ್ಲಿ ಆಸ್ಟ್ರೇಲಿಯಾ 3 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, 3ರಲ್ಲೂ ಗೆದ್ದಿದೆ.
12 ಪಂದ್ಯಗಳು: 2019ರ ವಿಶ್ವಕಪ್ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ 12 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ 6 ಪಂದ್ಯಗಳನ್ನು ಗೆದ್ದಿವೆ.