'ನಿಮಗೆ ಗೆಲ್ಲೋಕಂತೂ ಆಗಲ್ಲ, ಕನಿಷ್ಠ..': ಭಾರತ ಎದುರಿನ ಹೀನಾಯ ಸೋಲಿಗೆ ಕಣ್ಣೀರು ಹಾಕಿದ ಪಾಕ್ ಮಾಜಿ ನಾಯಕ..!

By Naveen Kodase  |  First Published Oct 15, 2023, 4:37 PM IST

ಐಸಿಸಿ ರಿವ್ಯೂ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ರಾಜಾ, "ಈ ಸೋಲು ನಮಗೆ ಸಾಕಷ್ಟು ನೋವನ್ನುಂಟು ಮಾಡಿದೆ. ಇದು ಭೀತಿಯನ್ನು ಹುಟ್ಟಿಸಿದೆ. ಅವರು ನಮ್ಮ ಎದುರು ಎಲ್ಲಾ ಮೂರು ವಿಭಾಗಗಳಲ್ಲೂ ಅತ್ಯದ್ಭುತವಾಗಿ ಆಡಿದರು" ಎಂದು ಹೇಳಿದ್ದಾರೆ.


ಅಹಮದಾಬಾದ್‌(ಅ.15): 2023ರ ಐಸಿಸಿ ಏಕದಿನ ವಿಶ್ವಕಪ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ವಿಶ್ವದ ಅತಿದೊಡ್ಡ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. ಭಾರತ ಎದುರು ಪಾಕಿಸ್ತಾನ ತಂಡದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಮಾಜಿ ನಾಯಕ ರಮೀಜ್ ರಾಜಾ, ಪಾಕ್ ತಂಡ ಸೋತ ರೀತಿ ತುಂಬಾ ನೋವುಂಟು ಮಾಡಿದೆ ಹಾಗೂ ಭೀತಿಯನ್ನು ಹುಟ್ಟಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಕೇವಲ 191 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ 19.5 ಓವರ್ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. 

Tap to resize

Latest Videos

ಐಸಿಸಿ ರಿವ್ಯೂ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ರಾಜಾ, "ಈ ಸೋಲು ನಮಗೆ ಸಾಕಷ್ಟು ನೋವನ್ನುಂಟು ಮಾಡಿದೆ. ಇದು ಭೀತಿಯನ್ನು ಹುಟ್ಟಿಸಿದೆ. ಅವರು ನಮ್ಮ ಎದುರು ಎಲ್ಲಾ ಮೂರು ವಿಭಾಗಗಳಲ್ಲೂ ಅತ್ಯದ್ಭುತವಾಗಿ ಆಡಿದರು" ಎಂದು ಹೇಳಿದ್ದಾರೆ.

ICC World Cup 2023 ಅಹಮದಾಬಾದ್‌ನಲ್ಲಿ 1 ದಿನ ಮೊದಲೇ ನವರಾತ್ರಿ ಸಂಭ್ರಮ!

ಇನ್ನೂ ಮುಂದುವರೆದ ಮಾತನಾಡಿದ ರಾಜಾ, ನೀವು ಒಂದು ವೇಳೆ ಗೆಲ್ಲಲು ಸಾಧ್ಯವಾಗಿಲ್ಲ ಅಂದರೆ ಕನಿಷ್ಠ ಪಕ್ಷ ಸ್ಪರ್ಧೆಯನ್ನಾದರೂ ನೀಡಿ. ಪಾಕಿಸ್ತಾನ ತಂಡಕ್ಕೆ ಅದನ್ನೂ ಕೂಡಾ ಮಾಡಲು ಸಾಧ್ಯವಾಗಲಿಲ್ಲ ಎಂದು ರಮೀಜ್ ರಾಜಾ ನಿರಾಸೆ ವ್ಯಕ್ತಪಡಿಸಿದ್ದಾರೆ.

'ನೀವು ಭಾರತ ಎದುರು ಭಾರತದಲ್ಲಿ ಆಡುತ್ತಿದ್ದೀರಾ ಅಂದ್ರೆ 99 ಪರ್ಸೆಂಟ್ ಮಂದಿ ಭಾರತದವರೇ ಆಗಿರುತ್ತಾರೆ ಹಾಗೂ ಭಾರತವನ್ನು ಬೆಂಬಲಿಸುತ್ತಾರೆ. ಹೀಗಾಗಿ ಸಹಜವಾಗಿಯೇ ನಿಮ್ಮ ಮೇಲೆ ಒತ್ತಡವಿರುತ್ತದೆ. ಇದರ ಬಗ್ಗೆ ನನಗೂ ಅರಿವಿದೆ. ಆದರೆ ಬಾಬರ್ ಅಜಂ ಈ ತಂಡವನನ್ನು ಕನಿಷ್ಠ 4-5 ವರ್ಷಗಳಿಂದ ಮುನ್ನಡೆಸುತ್ತಾ ಬಂದಿದ್ದಾರೆ. ಹೀಗಾಗಿ ಮಹತ್ತದ ಪಂದ್ಯದಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕು' ಎಂದು ರಾಜಾ ಹೇಳಿದ್ದಾರೆ.

ನಿರೀಕ್ಷಿತ ಆರಂಭ ಸಿಗದಿದ್ದರೂ, ಬಾಬರ್‌ ಆಜಂ ಹಾಗೂ ಮೊಹಮದ್‌ ರಿಜ್ವಾನ್‌ ನಡುವಿನ 3ನೇ ವಿಕೆಟ್‌ ಜೊತೆಯಾಟ ಪಾಕಿಸ್ತಾನದ ಆತ್ಮವಿಶ್ವಾಸ ಹೆಚ್ಚಿಸಿತ್ತು. ಇವರಿಬ್ಬರ ಆಟ ತಂಡ ಏನಿಲ್ಲವೆಂದರೂ 280-300 ರನ್‌ ತಲುಪಬಹುದು ಎನ್ನುವ ನಿರೀಕ್ಷೆ ಮೂಡಿಸಿತ್ತು. ಆದರೆ ಭಾರತ ವಿರುದ್ಧ ಮೊದಲ ಅರ್ಧಶತಕ ಬಾರಿಸಿದ ಖುಷಿಯಲ್ಲಿದ್ದ ಬಾಬರ್‌ರ ವಿಕೆಟ್‌ ಉರುಳಿಸಿದ ಸಿರಾಜ್‌, ಪಾಕಿಸ್ತಾನದ ಪತನಕ್ಕೆ ನಾಂದಿ ಹಾಡಿದರು.

ದೇವ್ರನ್ನ ಬೇಡಿಕೊಂಡು ಬಾಲ್‌ ಎಸೆದ ಹಾರ್ದಿಕ್‌, ಬಿತ್ತು ಇಮಾಮ್‌ ವಿಕೆಟ್‌! ವಿಡಿಯೋ ವೈರಲ್

ಬಾಬರ್‌ ಔಟಾದಾಗ ತಂಡದ ಮೊತ್ತ 155ಕ್ಕೆ 3. ನೋಡ ನೋಡುತ್ತಿದ್ದಂತೆ ಪಾಕಿಸ್ತಾನದ ಇನ್ನಿಂಗ್ಸ್‌ ಕೊನೆಗೊಂಡಿತು. ಒಂದೇ ಓವರಲ್ಲಿ ಶಕೀಲ್‌ ಹಾಗೂ ಇಫ್ತಿಕಾರ್‌ಗೆ ಕುಲ್ದೀಪ್‌ ಪೆವಿಲಿಯನ್‌ ದಾರಿ ತೋರಿಸಿದರೆ, ಅಪಾಯಕಾರಿ ರಿಜ್ವಾನ್‌ ಹಾಗೂ ಶದಾಬ್‌ರನ್ನು ಬೌಲ್ಡ್‌ ಮಾಡಿದ ಬೂಮ್ರಾ ತಾವೇಕೆ ವಿಶ್ವ ಶ್ರೇಷ್ಠ ಬೌಲರ್‌ ಎನ್ನುವುದನ್ನು ಎರಡೇ ಎಸೆತಗಳಲ್ಲಿ ಪ್ರದರ್ಶಿಸಿದರು. 36 ರನ್‌ಗೆ ಪಾಕಿಸ್ತಾನ ಕೊನೆಯ 8 ವಿಕೆಟ್‌ ಕಳೆದುಕೊಂಡು ಸೋಲಲು ಸಿದ್ಧತೆ ಮಾಡಿಕೊಂಡಿತು.

ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ 192 ರನ್‌ಗಳ ಸಾಧಾರಣ ಗುರಿ ಬೆನ್ನತ್ತಲು ಇಳಿದ ಭಾರತ ಮೊದಲ ಎಸೆತದಿಂದಲೇ ಪಾಕ್‌ ಮೇಲೆ ಎರಗಿಬಿತ್ತು. ಚಿಕ್ಕ ಗುರಿಯನ್ನು ಚಕಾಚಕ್‌ ಎಂದು ತಲುಪಿ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳಬೇಕೆಂಬ ಭಾರತದ ಇರಾದೆ, ಆರಂಭಿಕರ ಬೀಸಾಟದಿಂದ ಸ್ಪಷ್ಟವಾಯಿತು. ತಮ್ಮ ಐಪಿಎಲ್‌ ತವರು ಮೈದಾನದಲ್ಲಿ ಕೆಲ ಆಕರ್ಷಕ ಕವರ್‌ ಡ್ರೈವ್‌ಗಳ ಮೂಲಕ ವಿಶ್ವಕಪ್‌ನ ಪಾದಾರ್ಪಣಾ ಪಂದ್ಯವನ್ನು ಭರ್ಜರಿಯಾಗಿ ಆರಂಭಿಸಿದ ಶುಭ್‌ಮನ್‌ ಗಿಲ್‌ ದೊಡ್ಡ ಇನ್ನಿಂಗ್ಸ್‌ ಆಡಲಾಗಲಿಲ್ಲ. ವಿರಾಟ್‌ ಕೊಹ್ಲಿ ಬ್ಯಾಟ್‌ ಹಿಡಿದು ಮೈದಾನಕ್ಕಿಳಿಯುತ್ತಿದ್ದಂತೆ, ಗಿಲ್‌ ಔಟಾದ ಬೇಸರವನ್ನು ಮರೆತ ಅಭಿಮಾನಿಗಳು ದಿಗ್ಗಜ ಬ್ಯಾಟರ್‌ಗಳಿಬ್ಬರ ಆಟದ ಸೊಬಗನ್ನು ನೋಡುತ್ತ ಮೈಮರೆತರು. ಅದರಲ್ಲೂ ರೋಹಿತ್‌ರ ಹೊಡೆತಗಳು ಒಂದಕ್ಕಿಂತ ಒಂದು ಆಕರ್ಷಕವಾಗಿದ್ದವು. ಪಂದ್ಯಕ್ಕೂ ಮುನ್ನ ಐಸಿಸಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಲು ಮಾಡಿದ ವಿಡಿಯೋ ಸಂದರ್ಶನದಲ್ಲಿ ರೋಹಿತ್‌ರ ಪುಲ್‌ಶಾಟ್‌ ಅನ್ನು ಕೊಂಡಾಡಿದ್ದ ಪಾಕಿಸ್ತಾನಿ ಬೌಲರ್‌ಗಳು, ಇನ್ನಿಂಗ್ಸ್‌ನುದ್ದಕ್ಕೂ ರೋಹಿತ್‌ ಒಂದರ ಮೇಲೊಂದು ಪುಲ್‌ಶಾಟ್‌ ಬಾರಿಸುವಂತೆ ಬೌಲ್‌ ಮಾಡಿದ್ದು ವಿಪರ್ಯಾಸ.

3 ಆಕರ್ಷಕ ಬೌಂಡರಿಗಳೊಂದಿಗೆ 16 ರನ್‌ ಗಳಿಸಿದ ಕೊಹ್ಲಿ, ರೋಹಿತ್‌ ಜೊತೆ 56 ಸೇರಿಸಿ ಪೆವಿಲಿಯನ್‌ಗೆ ಹಿಂದಿರುಗಿದರು. ಆದರೆ ಕೊಹ್ಲಿಯ ವಿಕೆಟ್‌ ಪತನ ಯಾವುದೇ ಆತಂಕ ತರದಂತೆ ರೋಹಿತ್‌ ಹಾಗೂ ಶ್ರೇಯಸ್‌ ಅಯ್ಯರ್‌ ಎಚ್ಚರ ವಹಿಸಿದರು.

4ನೇ ವಿಕೆಟ್‌ಗೆ ಇವರಿಬ್ಬರ ನಡುವಿನ 77 ರನ್‌ ಜೊತೆಯಾಟ ಭಾರತವನ್ನು ಜಯದ ಸಮೀಪಕ್ಕೆ ತಂದು ನಿಲ್ಲಿಸಿತು. 63 ಎಸೆತದಲ್ಲಿ 6 ಬೌಂಡರಿ, 6 ಸಿಕ್ಸರ್‌ನೊಂದಿಗೆ 86 ರನ್ ಚಚ್ಚಿ ಔಟಾದ ರೋಹಿತ್‌, ಏಕದಿನದಲ್ಲಿ 32ನೇ ಶತಕ ಸಿಡಿಸುವ ಅವಕಾಶ ಕೈಚೆಲ್ಲಿದರು.

ರೋಹಿತ್‌ ವಿಕೆಟ್‌ ಬಿದ್ದಾಗ ಭಾರತದ ಗೆಲುವಿಗೆ ಕೇವಲ 36 ರನ್‌ ಬೇಕಿತ್ತು. ಶ್ರೇಯಸ್‌ (62 ಎಸೆತದಲ್ಲಿ 53 ರನ್‌) ಹಾಗೂ ರಾಹುಲ್‌ (29 ಎಸೆತದಲ್ಲಿ 19 ರನ್‌) ಹೆಚ್ಚು ರಿಸ್ಕ್‌ ತೆಗೆದುಕೊಳ್ಳದೆ 8.5 ಓವರಲ್ಲಿ ಅಗತ್ಯವಿದ್ದ 36 ರನ್‌ ಗಳಿಸಿ, ತಂಡವನ್ನು ಜಯದ ದಡ ಸೇರಿಸಿದರು.
 

click me!