ರೋಹಿತ್ ಶರ್ಮಾ ಸಿಡಿಸಿದ ಸೆಂಚುರಿ ನೆರವಿನಿಂದ ಆಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ ಗೆಲುವು ದಾಖಲಿಸಿದೆ. 273 ರನ್ ಟಾರ್ಗೆಟ್ ಸುಲಭವಾಗಿ ಚೇಸ್ ಮಾಡಿ ಸಂಭ್ರಮ ಆಚರಿಸಿದೆ.
ದೆಹಲಿ(ಅ.11) ರೋಹಿತ್ ಶರ್ಮಾ ಸ್ಫೋಟಕ ಸೆಂಚುರಿ, ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಆಫ್ಘಾನಿಸ್ತಾನ ನೀಡಿದ 273 ರನ್ ಟಾರ್ಗೆಟ್‌ನ್ನು ಭಾರತ 35 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲುವಿನ ಕೇಕೆ ಹಾಕಿದೆ. ಭರ್ಜರಿ 8 ವಿಕೆಟ್ ಗೆಲುವು ದಾಖಲಿಸಿದ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಆಫ್ಘಾನಿಸ್ತಾನ ನಾಯಕ ಹಶ್ಮತುಲ್ಹಾ ಶಾಹಿದಿ ಸಿಡಿಸಿದ 80 ರನ್ ಹಾಗೂ ಅಜ್ಮುತುಲ್ಹಾ ಒಮರಾಜೈ ಸಿಡಿಸಿದ 62 ರನ್‌ಗಳಿಂದ ಭಾರತ ವಿರುದ್ದ 8 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸಿತ್ತು. ಸ್ಪರ್ಧಾತ್ಮಕ ಮೊತ್ತ ಟಾರ್ಗೆಟ್ ನೀಡಿದ ಆಫ್ಘಾನಿಸ್ತಾನ ಬೌಲಿಂಗ್ ಮೂಲಕ ಮ್ಯಾಜಿಕ್ ಮಾಡಲು ಸಜ್ಜಾಗಿತ್ತು. ಆದರೆ ರೋಹಿತ್ ಶರ್ಮಾ ಅಬ್ಬರಕ್ಕೆ ಆಫ್ಘಾನಿಸ್ತಾನ ಬೆಚ್ಚಿ ಬಿದ್ದಿತು. ರೋಹಿತ್ ಹಾಗೂ ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು.
ರೋಹಿತ್ ಶರ್ಮಾ ಬೌಂಡರಿ ಹಾಗೂ ಸಿಕ್ಸರ್ ಮೂಲಕ ಅಬ್ಬರಿಸಿದರು. ಇತ್ತ ಇಶಾನ್ ಕಿಶನ್ ಕೂಡ ಉತ್ತಮ ಸಾಥ್ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 156 ರನ್ ಜೊತೆಯಾಟ ನೀಡಿತು. ಇಶಾನ್ ಕಿಶನ್ 47 ರನ್ ಸಿಡಿಸಿ ಔಟಾದರು. ಆದರೆ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮುಂದುವರಿಯಿತು. ರೋಹಿತ್ ಶರ್ಮಾ 63 ಎಸೆತದಲ್ಲಿ ಸೆಂಚುರಿ ಪೂರೈಸಿದರು.
ಏಕದಿನದಲ್ಲಿ ರೋಹಿತ್ ಶರ್ಮಾ 31ನೇ ಶತಕ ಪೂರೈಸಿದರು.ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 7 ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಶತಕ ದಾಖಲೆ ಬರೆದಿದ್ದಾರೆ.ಇನ್ನು ಏಕದಿನದಲ್ಲಿ ರೋಹಿತ್ ಶರ್ಮಾ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರ ಪೈಕಿ 3ನೇ ಸ್ಥಾನ ಅಲಂಕರಿಸಿದ್ದಾರೆ. 49 ಶತಕದ ಮೂಲಕ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, 47 ಶತಕದ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇನ್ನು ರೋಹಿತ್ ಶರ್ಮಾ 31 ಶತಕದ ಮೂಲಕ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ರಿಕಿ ಪಾಂಟಿಂಗ್ 4ನೇ ಸ್ಥಾನಕ್ಕೆ ಕುಸಿದಿದ್ದಾರೆ.
ರೋಹಿತ್ ಶರ್ಮಾ 84 ಎಸೆತದಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 131 ರನ್ ಸಿಡಿಸಿ ಔಟಾದರು. ರೋಹಿತ್ ವಿಕೆಟ್ ಪತನದ ಬಳಿಕ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಮುಂದುವರಿಯಿತು.ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಶ್ರೇಯಸ್ ಅಯ್ಯರ್ ಅಜೇಯ 25 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 35 ಓವರ್‌ಗಳಲ್ಲಿ 8 ವಿಕೆಟ್ ಗೆಲುವು ದಾಖಲಿಸಿತು.